ಗ್ಯಾರಂಟಿ ಬಗ್ಗೆ ಅಸಮಾಧಾನ: ಡಿಕೆಶಿ ಎಚ್ಚರಿಕೆ ಬೆನ್ನಲ್ಲೇ ಶಾಸಕ ಗವಿಯಪ್ಪ ಯುಟರ್ನ್
ಗ್ಯಾರಂಟಿ.. ಪಂಚ ಗ್ಯಾರಂಟಿ.. ಪ್ರಚಂಡ ಬಹುಮತದಿಂದ ಸರ್ಕಾರ ಅಧಿಕಾರಕ್ಕೆ ಬಂದಿರೋದಕ್ಕೆ ಪ್ರಮುಖ ಕಾರಣವೇ ಗ್ಯಾರಂಟಿ ಆಗಿದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ, ಅದ್ರೆ ಇದೀಗ ಗ್ಯಾರಂಟಿ ಹೆಚ್ಚು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ, ಸಿಎಂ, ಡಿಸಿಎಂ ಅಂತೂ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ಹೋದ ಕಡೆಗಳಲ್ಲಿ ಹೇಳುತ್ತಾ ಬರುತ್ತಿದ್ದಾರೆ. ಆದ್ರೆ, ಇದೀಗ ಸ್ವಪಕ್ಷದವರೇ ಗ್ಯಾರಂಟಿ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವುದು ಕಾಂಗ್ರೆಸ್ಗೆ ಟೆನ್ಷನ್ ತಂದಿಟ್ಟಿದೆ. ಇನ್ನು ಈ ಗ್ಯಾರಂಟಿ ಬಗ್ಗೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಯುಟರ್ನ್ ಹೊಡೆದಿದ್ದಾರೆ.
ಬೆಂಗಳೂರು/ವಿಜಯನಗರ, (ನವೆಂಬರ್ 26): ಕಾಂಗ್ರೆಸ್ ಪಾಳಯದಲ್ಲಿ ಅನುದಾನ ತಾರತಮ್ಯ ಫೈಟ್ ಜೋರಾಗಿತ್ತು. ಕೆಲ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಸಿಕ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಗ್ಯಾರಂಟಿ ಬಗ್ಗೆ ಮಾತಾಡಿರೋ ವಿಜಯನಗರ ಕಾಂಗ್ರೆಸ್ ಶಾಸಕ ಗವಿಯಪ್ಪ, ಅನುದಾನ ವಿಚಾರದಲ್ಲಿ ಸಮರ ಸಾರಿದ್ದಾರೆ. ನಮ್ಮ ಕ್ಷೇತ್ರಕ್ಕೆ ಸರಿಯಾದ ಅನುದಾನ ಸಿಕ್ತಿಲ್ಲ, ಕೊಡ್ಬೇಕು ಎಂದು ಆಗ್ರಹಿಸಿದ್ದರು. ಇದೀಗ ಇದೇ ಕಾಂಗ್ರೆಸ್ ಶಾಸಕ, ಒಂದೋ, ಎರಡೋ ಗ್ಯಾರಂಟಿ ತೆಗೆಯಿರಿ ಎಂದಿದ್ದಾರೆ. ಇದು ವಿಪಕ್ಷಗಳಿಗೆ ಆಹಾರವಾಗುತ್ತಿದ್ದಂತೆಯೇ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಗವಿಯಪ್ಪ ವರಸೆ ಬದಲಿಸಿದ್ದಾರೆ.
ಸ್ವಪಕ್ಷದ ನಾಯಕರಿಗೆ ಡಿಕೆಶಿ ಎಚ್ಚರಿಕೆ
ಗವಿಯಪ್ಪ ಹಾಗೆ ಹೇಳಿದ್ದಾರೆ ಅಂತ ನಾನು ಅಂದುಕೊಳ್ಳಲ್ಲ. ನಮ್ಮ ಪಕ್ಷ ಈಗಾಗಲೇ ಬಜೆಟ್ ಘೋಷಣೆ ಮಾಡಿದೆ. ಅದರ ಅಡಿಯಲ್ಲಿ ಅನುದಾನ ಹಂಚಿಕೆ ಆಗುತ್ತದೆ. ಗ್ಯಾರಂಟಿ ನಿಲ್ಲಿಸುವಂತೆ ಹೇಳಿದ್ದಾರೆ ಎಂದು ನಾನು ಒಪ್ಪಲ್ಲ. ಎಲ್ಲಾ ಶಾಸಕರಿಗೂ ಅನುದಾನವನ್ನ ನೀಡಿದ್ದೇವೆ. ಗವಿಯಪ್ಪಗೆ ಸರಿಯಾದ ಮಾಹಿತಿ ಇಲ್ಲ ಅನ್ಸುತ್ತೆ. ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ. ಗವಿಯಪ್ಪ ಜೊತೆಗೆ ನಾನು ಮಾತನ್ನಾಡುತ್ತೇನೆ. ಅವರಿಂದ ಸ್ಪಷ್ಟನೆ ಕೇಳುತ್ತೇನೆ. ಬೇರೆ ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಶಿಸ್ತು ಕ್ರಮ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಇದನ್ನೂ ಓದಿ: 2 ಗ್ಯಾರಂಟಿಗಳನ್ನು ಕೈ ಬಿಡಬೇಕೆಂದು ಸಿದ್ದರಾಮಯ್ಯಗೆ ಮನವಿ ಮಾಡ್ತೇವೆ: ಕಾಂಗ್ರೆಸ್ ಶಾಸಕ
ಡಿಕೆಶಿ ಎಚ್ಚರಿಕೆ ಬೆನ್ನಲ್ಲೇ ಗವಿಯಪ್ಪ ಯೂಟರ್ನ್
ಇನ್ನು ಡಿಕೆ ಶಿವಕುಮಾರ್ ಶಿಸ್ತು ಕ್ರಮದ ಬಗ್ಗೆ ಎಚ್ಚರಿ ಸಂದೇಶ ರವಾನಿಸುತ್ತಿದ್ದಂತೆಯೇ ಗ್ಯಾರಂಟಿ ತೆಗೆಯಿರಿ ಎಂದಿದ್ದ ವಿಜಯನಗರ ಕಾಂಗ್ರೆಸ್ ಶಾಸಕ ಗವಿಯಪ್ಪ ಇದೀಗ ತಮ್ಮ ಮಾತಿನ ದಾಟಿಯನ್ನೇ ಬದಲಿಸಿದ್ದಾರೆ. ನಾನು ಯಾವುದೇ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಯುಟರ್ನ್ ಹೊಡೆದಿದ್ದಾರೆ.
ಅನೇಕ ಜನರು ಮನೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಅನುದಾನ ಗ್ಯಾರಂಟಿ ಯೋಜನೆಗೆ ಹೋಗುತ್ತಿದೆ ಎಂದಿದ್ದೆ. ಗ್ಯಾರಂಟಿಯಿಂದ ಎಲ್ಲರಿಗೂ ಲಾಭ ಆಗುತ್ತಿದೆ ಎಂದು ಹೇಳಿದ್ದೇನೆ. ಗ್ಯಾರಂಟಿ ಯೋಜನೆಗಳಿಂದಲೇ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆ ಇರುತ್ತದೆ. ನಮಗೆ ಯಾವುದೇ ಅನುದಾನ ಕೊರತೆಯಾಗಿಲ್ಲ. ಕೆಕೆಆರ್ಡಿಬಿ ಅನುದಾನ ಮಾತ್ರ ಬರುತ್ತಿಲ್ಲ. ಎಲ್ಲಾ ಕ್ಷೇತ್ರಗಳಿಗೆ ಸಿಕ್ಕಂತೆ ನನ್ನ ಕ್ಷೇತ್ರಕ್ಕೂ ಅನುದಾನ ಬರ್ತಿದೆ. ಕಳೆದ ವರ್ಷ ಅನುದಾನ ನೀಡಿದ್ದಾರೆ, ಈ ವರ್ಷವೂ ಬಂದಿದೆ ಎಂದು ಸ್ಪಷ್ಟಪಡಿಸಿದರು.
Published On - 4:48 pm, Tue, 26 November 24