ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಪತ್ರ
ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿರುವ ಬಗ್ಗೆ ವರದಿಯಾಗಿತ್ತಿದ್ದು, ಅವುಗಳ ಸತ್ಯಾಸತ್ಯತೆ ಪರಿಶೀಲಿಸಬೇಕು. ನೆರೆ ರಾಷ್ಟ್ರದ ಹಿಂದೂ ಸಹೋದರರ ರಕ್ಷಣೆಗೆ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
ಬೆಂಗಳೂರು, ಆಗಸ್ಟ್ 15: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಬಾಂಗ್ಲಾದೇಶಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದಾಳಿಗಳು ನಡೆಯುತ್ತಿರುವ ಬಗ್ಗೆ ದೇಶದಲ್ಲಿ ಬಲಪಂಥೀಯ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಹ್ಯಾಂಡಲ್‌ಗಳು ಸುದ್ದಿಗಳನ್ನು ಪ್ರಕಟಿಸುತ್ತಿವೆ. ಅದು ನಿಜವಾಗಿದ್ದರೆ (ಕೆಲವು ಫೇಕ್ ಎಂಬುದು ಕಂಡುಬಂದಿದೆ), ಅವುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ನಾನು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇನೆ. ವರದಿಗಳು/ವೀಡಿಯೋಗಳು ನಿಜವೆಂದು ಸಾಬೀತಾದರೆ, ಭಾರತ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು. 1971 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮಿಲಿಟರಿ ಕ್ರಮವನ್ನು ಕೈಗೊಂಡಿದ್ದರು. ಅವರು ತೆಗೆದುಕೊಂಡಿದ್ದಂಥ ದಿಟ್ಟ ನಿರ್ಧಾರ ಕೈಗೊಳ್ಳಲು ಪ್ರಧಾನಿಯವರು ಹಿಂಜರಿಯಬಾರದು. ಈ ನಿರ್ಣಾಯಕ ಸಮಯದಲ್ಲಿ ಬಾಂಗ್ಲಾದೇಶದಲ್ಲಿರುವ ನಮ್ಮ ಹಿಂದೂ ಸಹೋದರ ಸಹೋದರಿಯರಿಗೆ ಬೆಂಬಲದ ಹಸ್ತವನ್ನು ಚಾಚಲು ನಿಮ್ಮ ಗೌರವಾನ್ವಿತ ಕಚೇರಿಯನ್ನು ಬಳಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಶಾಸಕರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಭಿನ್ನಮತಕ್ಕೆ ದಿನಕ್ಕೊಂದು ಆಯಾಮ: ಬಳ್ಳಾರಿ ಪಾದಯಾತ್ರೆಗೆ ಶಾಸಕಾಂಗ ಪಕ್ಷದ ನಾಯಕರಿಂದಲೇ ಬೆಂಬಲ
ನಿಮ್ಮ (ಮೋದಿ) ನಾಯಕತ್ವದಲ್ಲಿ, ಬಾಂಗ್ಲಾದೇಶದ ಅಲ್ಪಸಂಖ್ಯಾತರ ಕಳವಳಗಳನ್ನು ಪರಿಹರಿಸಲು ಭಾರತವು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಭಾರತದಲ್ಲಿಯೂ ಬಲಪಂಥೀಯರಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಿರಂತರ ದಾಳಿಗೆ ಒಳಗಾಗಿರುವ ಅಲ್ಪಸಂಖ್ಯಾತರ ಬಗ್ಗೆಯೂ ಕಾಳಜಿವಹಿಸುವ ಭಾವಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:50 am, Thu, 15 August 24