ಚಾಮರಾಜನಗರ ಕ್ಷೇತ್ರದ ಮೂಲಕ ಹೆಚ್ಸಿ ಮಹದೇವಪ್ಪರನ್ನು ಲೋಕಸಭೆಗೆ ಕಳುಹಿಸಿ ಯತೀಂದ್ರಗೆ ಸಚಿವ ಸ್ಥಾನ ನೀಡುವ ಪ್ಲಾನ್
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಬೇಕಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ, ಸಚಿವ ಹೆಚ್ಸಿ ಮಹದೇವಪ್ಪ ಅವರು ಚಾಮರಾಜನಗರ ಕ್ಷೇತ್ರದ ಟಿಕೆಟ್ ತನ್ನ ಪುತ್ರ ಸುನಿಲ್ ಬೋಸ್ಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಾಸಕರು, ಮಹದೇವಪ್ಪ ಅವರಿಗೇ ಲೋಕಸಭೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಒತ್ತಡ ಹಾಕುತ್ತಿದ್ದಾರೆ.
ಮೈಸೂರು, ಮಾ.24: ಇತ್ತೀಚೆಗೆ ಬಿಡುಗಡೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ, ಚಾಮರಾಜನಗರ (Chamarajanagara) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಘೋಷಣೆಯಾಗಿಲ್ಲ. ಈ ಕ್ಷೇತ್ರದ ಟಿಕೆಟ್ ತನ್ನ ಪುತ್ರ ಸುನಿಲ್ ಬೋಸ್ಗೆ ನೀಡಬೇಕು ಎಂದು ಸಚಿವ ಹೆಚ್ಸಿ ಮಹದೇವಪ್ಪ (HC Mahadevappa) ಅವರು ರಾಜ್ಯ ಮತ್ತು ಹೈಕಮಾಂಡ್ಗೆ ನಾಯಕರಿಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಇವರ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವು ಶಾಸಕರು, ಸುನಿಲ್ ಬೋಸ್ಗೆ ಟಿಕೆಟ್ ಬೇಡ, ಮಹದೇವಪ್ಪ ಅವರಿಗೇ ಕೊಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಾಗಿದ್ದರೆ ಒತ್ತಡ ಹಾಕುತ್ತಿರುವವರು ಯಾರು?
ಚಾಮರಾಜನಗರ ಕ್ಷೇತ್ರದಿಂದ ಸುನೀಲ್ ಬೋಸ್ ಸ್ಪರ್ಧೆ ಬೇಡ, ಮಹದೇವಪ್ಪ ಬೇಕಾದರೆ ಸ್ಪರ್ಧೆ ಮಾಡಲಿ ಎಂದು ಕೈ ಶಾಸಕರು ಹೈಕಮಾಂಡ್ ಮುಂದೆ ಹೇಳಿದ್ದಾರೆ. ಹಾಗಾದರೆ, ಶಾಸಕರು ಸಚಿವ ಸ್ಥಾನಕ್ಕಾಗಿ ಈ ರೀತಿಯ ಒತ್ತಡ ಹಾಕುತ್ತಿದ್ದಾರಾ? ಸಚಿವ ಮಹದೇವಪ್ಪ ಲೋಕಸಭೆಗೆ ಸ್ಪರ್ಧೆ ಮಾಡಿ ಗೆದ್ದರೆ ಅವರ ಸಚಿವ ಸ್ಥಾನ ತೆರವಾಗಲಿದೆ. ಇದೇ ಕಾರಣಕ್ಕೆ ಶಾಸಕರು ಮಹದೇವಪ್ಪ ಸ್ಪರ್ಧೆಗೆ ಒತ್ತಡ ಹೇರುತ್ತಿರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಬೇಸರ ಮತ್ತು ಅಸಮಾಧಾನ ಹೊರಹಾಕಿದ ಹೆಚ್ ಸಿ ಮಹದೇವಪ್ಪ
ಯತೀಂದ್ರ ಸಿದ್ದರಾಮಯ್ಯಗೆ ಸಚಿವ ಸ್ಥಾನ?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಆದರೆ, ಎಂ ಲಕ್ಷ್ಮಣ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದೀಗ ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಮಾತುಗಳು ಕೇಳಿಬರಲು ಆರಂಭವಾಗಿದೆ.
ಮಹದೇವಪ್ಪ ಅವರು ಲೋಕಸಭೆಗೆ ಸ್ಪರ್ಧಿಸಿ ಗೆದ್ದರೆ ಅವರಿಂದ ತೆರವಾಗುವ ಸಚಿವ ಸ್ಥಾನವನ್ನು ಯತೀಂದ್ರ ಅವರಿಗೆ ನೀಡುವ ಮಾತುಗಳು ಕೇಳಿಬರುತ್ತಿವೆ. ಹೌದು, ಯತೀಂದ್ರ ಅವರನ್ನ ಎಂಎಲ್ಸಿ ಮಾಡಿ ನಂತರ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಚರ್ಚೆ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ