AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

37,370 ಕೋಟಿ ರೂ. ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಕರ್ನಾಟಕ ಗುತ್ತಿಗೆದಾರರ ಸಂಘವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿದೆ. ಮಾರ್ಚ್ 5ರೊಳಗೆ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೆ, ಈ ವಿಷಯವನ್ನು ರಾಹುಲ್ ಗಾಂಧಿ ಗಮನಕ್ಕೆ ತರುವುದಕ್ಕೂ ನಿರ್ಧಾರ ಕೈಗೊಳ್ಳಲಾಗಿದೆ.

ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್Image Credit source: tv9
Ganapathi Sharma
|

Updated on: Jan 29, 2026 | 12:44 PM

Share

ಬೆಂಗಳೂರು, ಜನವರಿ 29: ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಬಿಲ್ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ, ರಾಜ್ಯ ಗುತ್ತಿಗೆದಾರರ ಸಂಘವು (Karnataka Contractors’ Association) ಸರ್ಕಾರದ ವಿರುದ್ಧ ನೇರ ಸಮರ ಸಾರಿದೆ. ‘ಮಾರ್ಚ್ 5 ರೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಅಥವಾ ಮುಖ್ಯಮಂತ್ರಿಯವರು ಸಭೆ ಕರೆದು ಚರ್ಚಿಸದಿದ್ದರೆ ರಾಜ್ಯಾದ್ಯಂತ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಮಂಜುನಾಥ್, ಬಾಕಿ ಉಳಿದಿರುವ 37,370 ಕೋಟಿ ರೂ.ಗಳ ವಿವರ ಬಿಡುಗಡೆ ಮಾಡಿದರು. ಅವರು ಹೇಳಿದ ಪ್ರಕಾರ ಇಲಾಖಾವಾರು ಬಾಕಿ ವಿವರ ಹೀಗಿದೆ;

ಇಲಾಖೆಯ ಹೆಸರು – ಬಾಕಿ ಮೊತ್ತ (ಕೋಟಿ ರೂ.ಗಳಲ್ಲಿ)

  • ಲೋಕೋಪಯೋಗಿ ಇಲಾಖೆ (PWD) – 13,000
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) – 3,800
  • ಸಣ್ಣ ನೀರಾವರಿ ಇಲಾಖೆ – 3,000
  • ನಗರಾಭಿವೃದ್ದಿ ಇಲಾಖೆ – 2,000
  • ವಸತಿ ಮತ್ತು ವಕ್ಫ್ ಇಲಾಖೆ – 2,600
  • ಕಾರ್ಮಿಕ ಇಲಾಖೆ – 2,000
  • ಗಣಿ ಮತ್ತು ಭೂವಿಜ್ಞಾನ (GBA) – 2,600
  • ಒಟ್ಟು – 37,370

ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಆರ್. ಮಂಜುನಾಥ್, ಈ ಸರ್ಕಾರದಲ್ಲಿ ಹಣ ಬಿಡುಗಡೆ ವಿಚಾರದಲ್ಲಿ ಭ್ರಷ್ಟಾಚಾರ ಮತ್ತು ಪರ್ಸಂಟೇಜ್ ಪ್ರಮಾಣ ಹೆಚ್ಚಾಗಿದೆ ಎಂದು ಪರೋಪಕ್ಷವಾಗಿ ಉಲ್ಲೇಖಿಸಿದರು. ಈ ಹಿಂದೆ ಕೆಂಪಣ್ಣ ಅವರು 40% ಆರೋಪ ಮಾಡಿದ್ದರು. ಈಗ ನಿಮ್ಮ ಸಹಕಾರ ಇದ್ದರೆ ದಯಮಾಡಿ ಅದನ್ನ ಕಡಿಮೆ ಮಾಡಿಸಿ ಎಂದು ಮಂಜುನಾಥ್ ಆಗ್ರಹಿಸಿದರು.

10 ಮಹಾನಗರ ಪಾಲಿಕೆಗಳಲ್ಲಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಆರ್‌ಟಿ ನಗರ ಮತ್ತು ರಾಜಾಜಿನಗರದ ಖಾಸಗಿ ಕಚೇರಿಗಳಲ್ಲಿ ಕುಳಿತು ಟೆಂಡರ್ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ನಾವು ಹಣ ಕೇಳಲು ಹೋದರೆ, ‘ಬರೀ ದುಡ್ಡು ಕೇಳ್ತೀರಾ’ ಎಂದು ಅಧಿಕಾರಿಗಳು ಹೀಯಾಳಿಸುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರ ಮುನೇಗೌಡ ಆತ್ಮಹತ್ಯೆಗೆ ಯತ್ನಿಸಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸತೀಶ್ ಜಾರಕಿಹೊಳಿ, ಡಿಕೆಶಿ ಸ್ಪಂದಿಸಿದರೂ ಹಣಕಾಸು ಇಲಾಖೆಯಿಂದಿಲ್ಲ ಸಹಕಾರ’

ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಸಮಸ್ಯೆಗಳಿಗೆ ಒಂದಿಷ್ಟು ಸ್ಪಂದಿಸುತ್ತಿದ್ದರೂ, ಅಂತಿಮವಾಗಿ ಹಣಕಾಸು ಇಲಾಖೆಯತ್ತ ಕೈ ತೋರಿಸಲಾಗುತ್ತಿದೆ. ಹೀಗಾಗಿ, ಗುತ್ತಿಗೆದಾರರ ಸಂಘವು ಕೆಲವು ನಿರ್ಧಾರಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಗುತ್ತಿಗೆದಾರರ ಸಂಘದ ನಿರ್ಣಯಗಳೇನು?

ಮಾರ್ಚ್ 5 ರ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯದ ಎಲ್ಲಾ ಸರ್ಕಾರಿ ಕಾಮಗಾರಿಗಳು ಬಂದ್ ಆಗಲಿವೆ. ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಈ ಸಮಸ್ಯೆಯನ್ನು ತರಲು ಸಂಘ ನಿರ್ಧರಿಸಿದೆ. ಒಂದೇ ಬಾರಿ ಹಣ ನೀಡಲು ಸಾಧ್ಯವಾಗದಿದ್ದರೆ ಕನಿಷ್ಠ ಹಂತ ಹಂತವಾಗಿಯಾದರೂ ಬಿಲ್ ಕ್ಲಿಯರ್ ಮಾಡಿ ಎಂದು ಸಂಘ ಮನವಿ ಮಾಡಿದೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಯಾಕೆ ಬಿಲ್ ಬಿಡುಗಡೆಯಾಗುತ್ತಿಲ್ಲ? ಕಾರಣ ಕೊಟ್ಟ ಹಣಕಾಸು ಇಲಾಖೆ ಕಾರ್ಯದರ್ಶಿ

ಕಳೆದ ಎರಡೂವರೆ ವರ್ಷಗಳಿಂದ ನಾವು ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮನ್ನು ಕೆಣಕಲು ಹೋಗಬೇಡಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ