ಇಂದಿನಿಂದ 14 ದಿನ ವಾಹನಗಳು ರಸ್ತೆಗಿಳಿಯುವಂತಿಲ್ಲ; ಲಸಿಕೆ ತೆಗೆದುಕೊಳ್ಳಲು ಹೋಗುವವರು ಮೆಸೇಜ್​ ತೋರಿಸಿದರೆ ಅನುಮತಿ

Corona Curfew | Karnataka Lockdown: ಈ ಆದೇಶದಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳುವವರಿಗೆ ವಿನಾಯಿತಿ ನೀಡಲಾಗಿದ್ದು, ನೋಂದಣಿ ಮಾಡಿಕೊಂಡವರು ಮಾತ್ರ ಲಸಿಕೆ ಹಾಕಿಸಲು ಬರಬಹುದಾಗಿದೆ. ಅದಕ್ಕೆ ಸಂಬಂಧಿಸಿದ ಅಧಿಕೃತ ಮೆಸೇಜ್​ ತೋರಿಸಿದರೆ ಲಸಿಕಾ ಕೇಂದ್ರಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇಂದಿನಿಂದ 14 ದಿನ ವಾಹನಗಳು ರಸ್ತೆಗಿಳಿಯುವಂತಿಲ್ಲ; ಲಸಿಕೆ ತೆಗೆದುಕೊಳ್ಳಲು ಹೋಗುವವರು ಮೆಸೇಜ್​ ತೋರಿಸಿದರೆ ಅನುಮತಿ
ಸಾಂದರ್ಭಿಕ ಚಿತ್ರ
Follow us
Skanda
|

Updated on: May 10, 2021 | 7:28 AM

ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ (ಮೇ 10) 14 ದಿನಗಳ ಕಾಲ ಲಾಕ್​ಡೌನ್​ ಮಾದರಿಯ ಕಠಿಣ ನಿಯಮಾವಳಿಗಳು ಜಾರಿಗೊಳ್ಳುತ್ತಿದೆ. ಎಗ್ಗಿಲ್ಲದೇ ಹರಡುತ್ತಿರುವ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಕಠಿಣ ನಿಯಮಾವಳಿಗಳ ಮೊರೆಹೋಗಿದ್ದು ಮೇ 24ರ ತನಕ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವ ವಾಹನಗಳೂ ರಸ್ತೆಗಿಳಿಯುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಬೈಕ್,ಆಟೋ,ಕಾರು, ಬಸ್ ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ 14 ದಿನಗಳ ಅವಧಿಯಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಅವುಗಳ ಖರೀದಿಗೂ ನಡೆದುಕೊಂಡೇ ಹೋಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆದೇಶದಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳುವವರಿಗೆ ವಿನಾಯಿತಿ ನೀಡಲಾಗಿದ್ದು, ನೋಂದಣಿ ಮಾಡಿಕೊಂಡವರು ಮಾತ್ರ ಲಸಿಕೆ ಹಾಕಿಸಲು ಬರಬಹುದಾಗಿದೆ. ಅದಕ್ಕೆ ಸಂಬಂಧಿಸಿದ ಅಧಿಕೃತ ಮೆಸೇಜ್​ ತೋರಿಸಿದರೆ ಲಸಿಕಾ ಕೇಂದ್ರಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿ ಬೇರೆ ಯಾವ ಕಾರಣದಿಂದ ರಸ್ತೆಗಿಳಿದರೂ ಅಂಥವರ ವಾಹನವನ್ನು ಮುಲಾಜಿಲ್ಲದೇ ಜಪ್ತಿ ಮಾಡಲಾಗುವುದು ಹಾಗೂ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯಾದ್ಯಂತ ಈ ಕಠಿಣ ನಿಯಮ ಅನ್ವಯವಾಗುವುದರಿಂದ ಎಲ್ಲೆಡೆ ಪೊಲೀಸರು ಕಣ್ಗಾವಲಿಡಲಿದ್ದಾರೆ. ಒಂದುವೇಳೆ ಗುಂಪು ಗುಂಪಾಗಿ ಜನ ಸೇರಿದ್ದರೂ ದೂರು ದಾಖಲಿಸಲಾಗುತ್ತದೆ. ಈಗಾಗಲೇ ಮುಂಜಾನೆಯಿಂದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು ಅಗತ್ಯ ಖರೀದಿ ನೆಪದಲ್ಲಿ ಗುಂಪು ಸೇರುತ್ತಿರುವವರಿಗೆ ತೀಕ್ಷ್ಣ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೇ ಹೊರ ರಾಜ್ಯಗಳಿಂದ ಬರುತ್ತಿರುವ ವಾಹನಗಳನ್ನು ಗಡಿಯಲ್ಲಿ ತಡೆದು ಪರಿಶೀಲಿಸಲಾಗುತ್ತಿದ್ದು, ವಾಪಾಸು ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ: Karnataka Lockdown: ರಾಜ್ಯದಲ್ಲಿ ಇಂದಿನಿಂದ ಟೈಟ್‌ ಲಾಕ್‌ಡೌನ್, ಜಿಲ್ಲಾ ಗಡಿಗಳು ಬಂದ್.. ಎಲ್ಲದಕ್ಕೂ ಬೀಗ

(Corona lockdown in Karnataka till May 24th starts today and To take Vaccine one must show confirmation message to the police)