ಕರ್ನಾಟಕ ಮತ್ತು ಬೆಂಗಳೂರು ಬಂದ್ನಿಂದ ರಾಜ್ಯಕ್ಕೆ ಕೋಟಿ ಕೋಟಿ ರೂ. ಲಾಸ್, ಇಲ್ಲಿದೆ ವಿವರ
ಕಾವೇರಿ ನೀರಿಗಾಗಿ ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿತ್ತು. ಶುಕ್ರವಾರದ ಕರ್ನಾಟಕ ಬಂದ್ ನಡೆಸಿದ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ಮೆಟ್ರೋ ನಿಗಮಕ್ಕೆ ಕೋಟ್ಯಾಂತರ ರುಪಾಯಿ ನಷ್ಟವಾಗಿದೆ.
ಬೆಂಗಳೂರು ಸೆ.30: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುವತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು, ರೈತರು, ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ (Karnataka Government) ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಒಂದೇ ವಾರದಲ್ಲಿ ಬೆಂಗಳೂರು ಮತ್ತು ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿದ್ದವು. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ರೂ. ನಷ್ಟವಾಗಿದೆ. ವಾರದಲ್ಲಿ ಎರಡು, ಎರಡು ಬಂದ್ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳಿಗೆ, ಹೋಟೆಲ್, ಬಾರ್ ರೆಸ್ಟೋರೆಂಟ್ ಮತ್ತು ವೈನ್ ಸ್ಟೋರ್ಸ್ ನಷ್ಟ ಅನುಭವಿಸಿವೆ.
ಕಾವೇರಿ ನೀರಿಗಾಗಿ ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿತ್ತು. ಶುಕ್ರವಾರದ ಕರ್ನಾಟಕ ಬಂದ್ ನಡೆಸಿದ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ಮೆಟ್ರೋ ನಿಗಮಕ್ಕೆ ಕೋಟ್ಯಾಂತರ ರುಪಾಯಿ ನಷ್ಟವಾಗಿದೆ. ಮಂಗಳವಾರ ಮತ್ತು ಶುಕ್ರವಾರ ಕೆಎಸ್ಆರ್ಟಿಸಿ ಬಿಎಂಟಿಸಿ ಮತ್ತು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಮೂರು ನಿಗಮಗಳಿಗೆ ಅಂದಾಜು 15 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮೂರು ನಿಗಮಗಳ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾವೇರಿ ವಿವಾದ: ಮತ್ತೆ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ ರಾಜ್ಯ ಸರ್ಕಾರ
ಮೆಟ್ರೋ ಒಂದು ದಿನದ ಆದಾಯ- 1.6 ರಿಂದ 1.7 ಕೋಟಿ ರೂ., ಕೆಎಸ್ಆರ್ಟಿಸಿಗೆ 9 ರಿಂದ 10 ಕೋಟಿ ರೂ. ಹಾಗೂ ಬಿಎಂಟಿಸಿಗೆ 4 ರಿಂದ 5 ಕೋಟಿ ರೂ. ಆದಾಯ ಹರಿದು ಬರುತ್ತಿತ್ತು. ಆದರೆ ಬಂದ್ನಿಂದ ಸಾಕಷ್ಟು ನಷ್ಟವಾಗಿದೆ.
ಬೆಂಗಳೂರಿನಲ್ಲಿ ಸುಮಾರು ಐದು ಸಾವಿರ ಹೋಟೆಲ್ಗಳಿವೆ. ಮಂಗಳವಾರ ಮತ್ತು ಶುಕ್ರವಾರದ ಬಂದ್ ನಿಂದ ಅಂದಾಜು 100 ರಿಂದ 120 ಕೋಟಿ ರುಪಾಯಿ ಲಾಸ್ ಆಗಿದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದಲ್ಲಿ 10 ಸಾವಿರ ಹೋಟೆಲ್ಗಳಿವೆ. ಶುಕ್ರವಾರದ ಬಂದ್ನಿಂದ ಅಂದಾಜು 150 ರಿಂದ 160 ಕೋಟಿ ರೂ. ನಷ್ಟವಾಗಿದೆ ಎಂದು ಹೊಟೇಲ್ ಮತ್ತು ಮದ್ಯ ಮಾರಾಟ ಅಸೋಸಿಯೇಷನ್ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಒಟ್ಟು 3850 ಮದ್ಯ ಮಾರಾಟ ಅಂಗಡಿಗಳಿವೆ. ಮಂಗಳವಾರ ಮತ್ತು ಶುಕ್ರವಾರದ ಬಂದ್ನಿಂದ ಅಂದಾಜು 180 ರಿಂದ 200 ಕೋಟಿ ರೂಪಾಯಿ ವಹಿವಾಟು ನಷ್ಟ ಉಂಟಾಗಿರುವ ಬಗ್ಗೆ ಟಿವಿ9 ಡಿಜಿಟಲ್ಗೆ ಮಾಹಿತಿ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ