
ನವದೆಹಲಿ, (ಜೂನ್ 23): ಕರ್ನಾಟಕದಲ್ಲಿ ಮುಂಗಾರುಮ ಮಳೆ (Karnataka Monsoon) ಕೈಕೊಟ್ಟಿದ್ದು, ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇದರಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಮಂಡ್ಯ,ಬೆಂಗಳೂರು ಭಾಗದ ಜನರ ಜೀವನಾಡಿಯಾಗಿರುವ ಕಾವೇರಿಯಲ್ಲೂ ಸಹ ನೀರಿಲ್ಲ. ಇನ್ನೊಂದೆಡೆ ತಮಿಳುನಾಡು ಮತ್ತೆ ಕಾವೇರಿ ನೀರಿಗೆ (Cauvery Water) ಖ್ಯಾತೆ ತೆಗೆದಿದ್ದು, ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ((Cauvery Water Management Authority)) ಸಭೆಯಲ್ಲಿ ಪಟ್ಟು ಹಿಡಿದಿದೆ. ಆದ್ರೆ, ಎರಡೂ ಕಡೆ ವಾದ ಆಲಿಸಿದಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಬಳಿಕ ಯಾವುದೇ ನಿರ್ದೇಶನ ನೀಡಿಲ್ಲ. ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ನೀರು ನೀಡುವ ಬಗ್ಗೆ ಯೋಜನೆ ಮಾಡೋಣ ಎಂದಿದೆ. ಇದರಿಂದ ಕರ್ನಾಟಕಕ್ಕೆ ರಿಲೀಫ್ ಸಿಕ್ಕಂತಾಗಿದೆ.
ಇಂದು (ಜೂನ್ 23) ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು, ಕರ್ನಾಟಕ, ಪುದುಚೇರಿ, ಕೇರಳದ ಪ್ರತಿನಿಧಿಗಳು ಭಾಗಿಯಾಗಿದ್ದು, ಈ ವೇಳೆ ಕಾವೇರಿ ನೀರಿಗಾಗಿ ತಮಿಳುನಾಡು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಅಧಿಕಾರಿಗಳು, ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗಿಲ್ಲ. ವಾಡಿಕೆಯಷ್ಟು ಮಳೆಯಾಗದ ಕಾರಣ ಡ್ಯಾಮ್‌ಗೆ ನೀರು ಬರುತ್ತಿಲ್ಲ. ಹಾಗಾಗಿ ಈಗ ನಮ್ಮ ಹತ್ತಿರ ನೀರಿಲ್ಲ. ಮಳೆ ಕೈಕೊಟ್ಟರೇ ಮುಂದಿನ ದಿನಗಳಲ್ಲಿ ಕುಡಿಯಲು ಸಹ ನೀರು ಇರಲ್ಲ. ಒಂದು ವೇಳೆ ಒಳಹರಿವು ಹೆಚ್ಚಾದರೇ ತಮಿಳನಾಡಿಗೆ ನೀರು ಹರಿಸಲಾಗುವುದು ಎಂದು ವಾದ ಮಂಡಿಸಿದೆ.
ಆದರೂ ಪಟ್ಟು ಬಿಡದ ತಮಿಳುನಾಡು ನೀರು ಬೇಕೇ ಬೇಕೆಂದು ಹಠಕ್ಕೆ ಬಿದ್ದಿದೆ. ಜೂನ್ ತಿಂಗಳ 9.19 ಟಿಎಂಸಿ ನೀರು ಹರಿಸಬೇಕಿತ್ತು. ಆದ್ರೆ, ಈವರೆಗೆ ಕೇವಲ 2.6 ಟಿಎಂಸಿ ನೀರು ಮಾತ್ರ ಹರಿಸಲಾಗಿದ್ದು, ಇದರೊಂದಿಗೆ ನಾಲ್ಕು ಟಿಎಂಸಿ ನೀರು ಕಡಿಮೆ ಹರಿಸಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವ ಕರ್ನಾಟಕದ ವಾದ ಒಪ್ಪಲು ಸಾಧ್ಯವಿಲ್ಲ. ಫೆಬ್ರವರಿಯಿಂದ ಮೇ ವರೆಗೂ ಹೆಚ್ಚಿನ ನೀರು ಕರ್ನಾಟಕ ಬಳಕೆ ಮಾಡಿದೆ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಅಷ್ಟೇ. ಇದರಿಂದಾಗಿ ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೇಲೆ ಒತ್ತಡ ಹಾಕಿದೆ.
ಎರಡೂ ಕಡೆ ವಾದ ಆಲಿಸಿದ ಮೇಲೆ ಯಾವುದೇ ನಿರ್ದೇಶನ ನಿಡದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ನೀರು ನೀಡುವ ಬಗ್ಗೆ ಯೋಜನೆ ಮಾಡೋಣ. ಒಂದು ವೇಳೆ ಉತ್ತಮ ಮಳೆಯಾದರೆ ಸುರ್ಪಿಂಕೋರ್ಟ್ ಆದೇಶದಂತೆ ನೀರು ಹರಿಸಿ ಎಂದು ಕರ್ನಾಟಕದ ಅಧಿಕಾರಿಗಳಿಗೆ ತಿಳಿಸಿದೆ.
Published On - 6:35 pm, Tue, 23 June 26