ಮಹಿಳೆಗೆ ಗುಪ್ತಾಂಗ ತೋರಿಸಿದ ಉಪಾಧ್ಯಕ್ಷ: ದೂರು ದಾಖಲಾಗುತ್ತಿದ್ದಂತೆಯೇ ಬಿಜೆಪಿಯಿಂದ ಉಚ್ಛಾಟನೆ
ರಾಜಕಾರಣಿಗಳು ಜನರಿಂದ ಜನರಿಗಾಗಿ ಜನರಿಗೋಸ್ಕರವಾಗಿ ಇರುವುದಾಗಿ ರಾಜಕಾರಣಿಗಳ ಮಾತು. ತಮ್ಮ ವಿಚಾರ, ಕಾರ್ಯಸಾಧನೆಯ ಮೂಲಕ ವರ್ಚಸ್ಸು ಹೆಚ್ಚಿಸಿಕೊಂಡು ಸಾರ್ವಜನಿಕ ಜೀವನದಲ್ಲಿ ಮುಂದೆ ಬರಬೇಕೆನ್ನುವುದು ಕೆಲವ ರಾಜಕಾರಣಿಗಳ ಹಂಬಲ. ಆದ್ರೆ, ಇಲ್ಲೋರ್ವ ರಾಜಕೀಯ ಮುಖಂಡ ಸಾರ್ವಜನಿಕವಾಗಿಯೇ ಮಹಿಳೆಯೊಬ್ಬರಿಗೆ ತನ್ನ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದಾನೆ.

ಮಂಗಳೂರು, (ಮೇ 12): ಗ್ರಾಮ ಪಂಚಾಯತ್ ಉಪಾಧ್ಯಕ್ಷನೋರ್ವ ಸಾರ್ವಜನಿಕವಾಗಿಯೇ ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ನಡೆದಿದೆ. ರಸ್ತೆ ವಿವಾದ ಸಂಬಂಧ ಮಹಿಳೆ ನಡೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಫಲ್ಯ ತನ್ನ ಗುಪ್ತಾಂಗ ತೋರಿಸಿದ್ದಾನೆ. ಮನೆ ದಾರಿಗೆ ಗೇಟು ಅಳವಡಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಗೆ ಗುಪ್ತಾಂಗ ತೋರಿಸಿದ್ದು, ಈ ಸಂಬಂಧ ಮಹಿಳೆ ಪದ್ಮನಾಭ ಸಪಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಪದ್ಮನಾಭ ಸಪಲ್ಯನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.
ಮಹಿಳೆ ನೀಡಿದ ದೂರಿನಲ್ಲೇನಿದೆ?
ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಲೆ ತನ್ನ ಮನೆಗೆ ಬರುದ ದಾರಿಯಲ್ಲಿ ಯಾರೋ ಕೆಲಸ ಮಾಡುವ ಶಬ್ಧ ಕೇಳಿ ಬಂದಿದೆ. ಹೀಗಾಗಿ ಸ್ಥಳಕ್ಕೆ ತೆರಳಿ ವಿಡಿಯೋ ಮಾಡಿದ್ದು, ಇದನ್ನು ನೋಡಿದ ಪದ್ಮನಾಭ ತನ್ನ ಚಡ್ಡಿಯನ್ನು ಕೆಳಗೆ ಜಾರಿಸಿ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಬಿಎನ್ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿ ಕಾಮುಕ ಪರಾರಿ
ಬಿಜೆಪಿಯಿಂದ ಉಚ್ಛಾಟನೆ
ದೂರು ದಾಖಲಾಗುತ್ತಿದ್ದಂತೆಯೇ ಪದ್ಮನಾಭ ಸಪಲ್ಯ ಅವರ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, ಪಕ್ಷದಿಂದ ಉಚ್ಚಾಟಿಸಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜರೆಮಾರು ಆದೇಶಿಸಿದ್ದಾರೆ.
ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿದ್ಯ ಕೊಡುವ ಪಕ್ಷದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಘನತೆಗೆ ಗೌರವ ಹಾಗೂ ವರ್ಚಸ್ಸಿಗೆ ಘಾಸಿಯುಂಟು ಮಾಡಿರುವ ಕಾರಣಕ್ಕಾಗಿ ಈ ಕ್ರಮ ಜರುಗಿಸಲಾಗಿದೆ. ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.







