ಮಂಗಳೂರು, ಫೆಬ್ರವರಿ 17: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದಲೇ ಗೆದ್ದು ಹೋಗಿ ಅನ್ಯಾಯ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮೋದಿಯೇ ಬಂಡವಾಳ. ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜನ ಮೋದಿ ಮಾತು ಕೇಳಿಲ್ಲ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಲ್ಲೋಯ್ತು. ಟೋಪಿ ಹಾಕೊಂಡವರು ಕಚೇರಿಗೆ ಬರ್ಬೇಡಿ ಅಂತಾ ಯತ್ನಾಳ್ ಹೇಳುತ್ತಾರೆ. ಮೋದಿ ಪ್ರಧಾನಮಂತ್ರಿ ಆದ ಮೇಲೆ ಬಡವರ ಮೇಲೆ ತೆರಿಗೆ ಹಾಕಿದರು. ನಮ್ಮ ಸರ್ಕಾರ ಬಸವ, ಬುದ್ಧ, ಗಾಂಧಿ, ಅಂಬೇಡ್ಕರ್ ವಿಚಾರದಂತೆ ನಡಿತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್ನವರು. ನರೇಂದ್ರ ಮೋದಿ ಅಥವಾ ಅಡ್ವಾಣಿ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಧಾನಿ ಮೋದಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ. ಮೋದಿಯಷ್ಟು ಸುಳ್ಳು ಹೇಳುವ ಬೇರೆ ಪ್ರಧಾನಿಯನ್ನು ನಾನು ನೋಡಿಲ್ಲ. ಸ್ವತಂತ್ರ ಭಾರತದಲ್ಲಿ ಇವರಷ್ಟು ಸುಳ್ಳು ಹೇಳುವವರನ್ನು ನೋಡಿಲ್ಲ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ. ಹಣ ಮೀಸಲಿಟಿದ್ದೇವೆ. ಕೇಂದ್ರಕ್ಕೆ ರಾಜ್ಯದಿಂದ 4 ಲಕ್ಷ 30 ಸಾವಿರ ಕೋಟಿ ರೂ. ತೆರಿಗೆ ಹೋಗುತ್ತೆ. ಆದರೆ ನಮಗೆ ವಾಪಸ್ ಬರೋದು 50 ಸಾವಿರದ 257 ಕೋಟಿ ರೂ. ಮಾತ್ರ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಶ್ರೀಮಂತ, ಉದ್ಯಮಿಗಳು, ಕಾರ್ಪೊರೇಟ್ ಪರವಾಗಿದ್ದಾರೆ. ನಾವು ಬಡವರು ಪರವಾಗಿದ್ದೇವೆ, ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲರಿಗೂ ನ್ಯಾಯ ಕೊಡುತ್ತೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಬಿಜೆಪಿಯವರನ್ನು ನೀಚರು ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ, ಮೋದಿಯನ್ಜು ಬಲಶಾಲಿ ಮಾಡ್ಬೇಡಿ ಎಂದ ಖರ್ಗೆ
ರಾಜ್ಯದ ಜನರು ಮೋದಿ ಮಾತು ಕೇಳದೆ ನಮಗೆ 136 ಸ್ಥಾನ ಗೆಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಕರ್ನಾಟಕದಲ್ಲಿ ಕನಿಷ್ಟ 20 ಸ್ಥಾನಗಳನ್ನು ನಾವು ಗೆದ್ದೆ ಗೆಲುತ್ತೇವೆ. ವಾಸ್ತವ ನೆಲೆಗಟ್ಟಿನಲ್ಲಿ ಇದನ್ನು ಹೇಳುತ್ತಿದ್ದೇನೆ ಎಂದರು. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. 155 ಕೋಟಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಫ್ರೀಯಾಗಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಗದರಿದರು
ಮಂಗಳೂರಿನ ಜನ ರಾಜಕೀಯವಾಗಿ ಬುದ್ದಿವಂತರು. ದೇಶದಲ್ಲಿ ರಾಜ್ಯದಲ್ಲಿ ನಡೆಯುವ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲಿನ ಜನರಿಗಿದೆ. ಬಿಜೆಪಿಯವರನ್ನು ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆಯಲ್ಲ. 10 ವರ್ಷದ ಹಿಂದೆ ನರೇಂದ್ರ ಮೋದಿ ಹೇಳಿದ್ದು ಯಾವುದು ಸಹ ಆಗಿಲ್ಲ. ಕೋಮುವಾದ, ಧರ್ಮ ಧರ್ಮಗಳ ನಡುವೆ ಬೆಂಕಿಹಚ್ಚುವುದು ಬಿಟ್ಟರೆ ಬೇರೆನೂ ಗೊತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.