ಇಶಾ ಫೌಂಡೇಷನ್​ನ ಶಿವರಾತ್ರಿಯಲ್ಲಿ ಡಿಕೆಶಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್ ಮುಖಂಡರಿಂದಲೇ ಅಸಮಾಧಾನ

ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್ ಆಯೋಜಿಸಿದ್ದ ಕೊಯಮತ್ತೂರಿನ ಇಶಾ ಫೌಂಡೇಷನಿನ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದರು. ಈ ಮಹಾ ಶಿವರಾತ್ರಿ ಕಾರ್ಯಕ್ರಮಕ್ಕೆ ಡಿಕೆಶಿ ಪಾಲ್ಗೊಂಡಿದ್ದಕ್ಕೆ ಕಾಂಗ್ರೆಸ್ ಮುಖಂಡರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಇಶಾ ಫೌಂಡೇಷನ್​ನ ಶಿವರಾತ್ರಿಯಲ್ಲಿ ಡಿಕೆಶಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್ ಮುಖಂಡರಿಂದಲೇ ಅಸಮಾಧಾನ
Dk Shivakumar In Isha Foundation Maha Shivratri
Edited By:

Updated on: Feb 27, 2025 | 5:34 PM

ಮಂಗಳೂರು: ಇಶಾ ಫೌಂಡೇಷನ್ ಆಯೋಜಿಸಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ ಕಾಂಗ್ರೆಸ್ ಮುಖಂಡರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್ ಆಕ್ಷೇಪ‌ ವ್ಯಕ್ತಪಡಿಸಿದ್ದಾರೆ. ಜಗ್ಗಿ ವಾಸುದೇವ್ ಆರ್ ಎಸ್​ಎಸ್ ಪರ ಒಲವಿರುವ ಮನುಷ್ಯ. ರಾಹುಲ್ ಗಾಂಧಿಯವರೇ ಆರ್​ ಎಸ್​ಎಸ್ ಮನಸ್ಥಿತಿ ಇರುವವರು ಕಾಂಗ್ರೆಸ್ ಬಿಟ್ಟು ಹೋಗಿ ಎಂದಿದ್ದಾರೆ.ಅಂಥದ್ದರಲ್ಲಿ ಆರ್​ ಎಸ್​ಎಸ್​ ಪ್ರಾಯೋಜಕತ್ವದ ಶಿವರಾತ್ರಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೋಗುವ ಅನಿವಾರ್ಯವೇನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.

ಡಿಕೆಶಿ ಮುಂದೆ ಭಾಷಣ ಮಾಡುತ್ತಾ ಸದ್ಗುರು ಜಗ್ಗಿ ವಾಸುದೇವ್ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುತ್ತಾರೆ. ವಿಶ್ವದ ನಾನಾ ಭಾಗದಿಂದ ಕಾರ್ಯಕ್ರಮ ವೀಕ್ಷಿಸಲು ಸಾಕಷ್ಟು ಜನ ಬಂದಿರುತ್ತಾರೆ.ನಾವು ಏನು ಮಾಡುತ್ತೇವೆಯೋ ಕಾರ್ಯಕರ್ತರು ಅದನ್ನೇ ನೋಡುತ್ತಾರೆ. ನಮ್ಮ ಕಾರ್ಯಕರ್ತರು ಮುಗ್ಧರು. ನಮ್ಮ ಅಧ್ಯಕ್ಷರೇ ಅಂತಹ ಕಾರ್ಯಕ್ರಮಕ್ಕೆ ಹೋದ ಮೇಲೆ ನಾವು ಹೋಗಬಾರದಾ? ಅನ್ನೋ ಚಿಂತನೆ ಬರುತ್ತದೆ. ಹಿಂದೂಯಿಸಂ ಆದರೆ ಪರವಾಗಿಲ್ಲ. ಆದರೆ ಹಿಂದುತ್ವಕ್ಕೆ ಒಂದು ಮಿತಿಯಿದೆ. ಹಿಂದೂಯಿಸಂ ಪ್ರತಿಪಾದಿಸೋ ಬಹಳಷ್ಟು ಸಂತರಿದ್ದಾರೆ, ಅವರು ಕರೆದರೆ ಹೋಗಲಿ. ಅದಕ್ಕೆ ಆಕ್ಷೇಪವಿಲ್ಲ. ಆದರೆ, ಜಗ್ಗಿ ವಾಸುದೇವ್ ಮಾತು, ಮನಸ್ಥಿತಿ ಸಿದ್ದಂತ ಏನೆಂದು ಸಾಮಾನ್ಯ ಜನರಿಗೂ ಗೊತ್ತಿದೆ. ಅವರ ಸಿದ್ಧಾಂತಗಳೆಲ್ಲವೂ ಬಿಜೆಪಿ, ಆರ್ ಎಸ್ ಎಸ್ ಗೆ ಪೂರಕವಾಗಿದೆ. ಒಮ್ಮೆ ನೀವು ಹಿಂದುತ್ವಕ್ಕೆ ಹೋದರೆ ಮತ್ತೆ ವಾಪಾಸ್ ಬರೋಕೆ ಆಗುವುದಿಲ್ಲ. ಇದೆ ರೀತಿ ನಮ್ಮ ಅನೇಕ ನಾಯಕರನ್ನು ಕಳೆದುಕೊಂಡಿದ್ದೇವೆ ಎಂದು ಪಿ.ವಿ. ಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಭಕ್ತಿಯ ಮಹಾಕುಂಭಕ್ಕೆ ಸಾಕ್ಷಿಯಾಗಿದ್ದೇನೆ; ಇಶಾ ಫೌಂಡೇಷನ್ ಮಹಾ ಶಿವರಾತ್ರಿಯಲ್ಲಿ ಅಮಿತ್ ಶಾ

ನಾವೆಲ್ಲಾ ಹಿಂದುಗಳೇ. ಎಷ್ಟೋ ಜನ ಮಹಾಕುಂಭ ಮೇಳಕ್ಕೆ ಹೋಗಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆ ಬಗ್ಗೆ ಎರಡು ಮಾತಿಲ್ಲ. ಅವರಿಗೆ ಬುದ್ಧಿ, ಚಾಣಾಕ್ಷ್ಯತನ ಎಲ್ಲವೂ ಇದೆ. ಆದರೆ ನಮ್ಮ ಪಾರ್ಟಿಗೆ ಒಂದು ಸಿದ್ದಾಂತವಿದೆ. ಕಾಂಗ್ರೆಸ್ ಚಿಂತನೆ ದೇಶದ ಚಿಂತನೆ, ಸಂವಿಧಾನದ ಚಿಂತನೆ. ಆ ಸಿದ್ಧಾಂತ ಬಿಟ್ಟು ಹೋಗಬಾರದು.ಆ ರೇಖೆ ದಾಟಿದ ಮೇಲೆ ನಮಗೂ, ಬಿಜೆಪಿಯವರಿಗೂ ಏನು ವ್ಯತ್ಯಾಸವಿದೆ? ಹಿಂದುತ್ವ- ಹಿಂದೂಯಿಸಂ ನಡುವಿನ ಸಂಘರ್ಷದಲ್ಲಿ ನಾವು ಸಿಲುಕಿಹಾಕಿಕೊಳ್ಳಬಾರದು ಎಂದು ಪಿವಿ ಮೋಹನ್ ಹೇಳಿದ್ದಾರೆ.

ಇದನ್ನೂ ಓದಿ: ಎಐಸಿಸಿ ಆಕ್ಷೇಪಣೆಗಳಿಗೆ, ‘ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂವಾಗೇ ಸಾಯುತ್ತೇನೆ’ ಎಂದ ಡಿಕೆ ಶಿವಕುಮಾರ್

ಅಧ್ಯಕ್ಷರಾಗಿ ಯಾರು ಏನೇ ಮಾಡಿದರೂ ಕಾರ್ಯಕರ್ತನಾಗಿ ನಾನು ಹೇಳೋದು ಹೇಳ್ತೇನೆ. ನಾನು ಶಿಸ್ತನ್ನು ಮೀರಿ ಹೇಳೋದಿಲ್ಲ. ನಾನು ಸೈದ್ಧಾಂತಿಕವಾಗಿ ಹೇಳಿದ್ದೇನೆಯೇ ಹೊರತು ಬೇರೆ ಏನೂ ಇಲ್ಲ. ವಿವಾದವಿಲ್ಲದ ಎಷ್ಟೋ ಲಿಂಗಾಯಿತ ಸ್ವಾಮಿಗಳಿದ್ದಾರೆ. ಡಿಕೆಶಿ ಸ್ವಲ್ಪ ಭಾವನಾತ್ಮಕ ವ್ಯಕ್ತಿ , ದೈವ ಭಕ್ತರು ಎಲ್ಲ ಹೌದು. ನಾವು ಕೂಡ ದೈವ ಭಕ್ತರೇ. ಆದರೆ ನಮ್ಮನ್ನು ಯಾರಾದರೂ ಕರೆದರೆ ಹೋಗಲು ನಾವು ಚಿಂತನೆ ಮಾಡುತ್ತೇವೆ. ಅದರಿಂದ ನಮ್ಮ ಪಕ್ಷಕ್ಕೆ ತೊಂದರೆಯಾಗುತ್ತದೆಯೇ? ಎಂದು ಯೋಚನೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಪಿ.ವಿ. ಮೋಹನ್ ಮಂಗಳೂರಿನಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Thu, 27 February 25