ಸಮೀರ್‌ಗೆ 45 ಪ್ರಶ್ನೆಗಳ ಬಾಣ: ಪೊಲೀಸ್ ವಿಚಾರಣೆಗೆ ನಲುಗಿದ ಯುಟ್ಯೂಬರ್
ಯೂಟ್ಯೂಬರ್ ಸಮೀರ್ ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹರಿಬಿಟ್ಟು, ರಾತ್ರೋರಾತ್ರಿ ಫೇಮಸ್ ಆಗಿದ್ದನು. ಈತನ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಆಗಿದ್ವು. ಇದೇ ಸಮೀರ್‌ಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಶನಿವಾರ (ಆ.23) ಮನೆಗೆ ಹೋಗಿ ಪೊಲೀಸರು ನೋಟಿಸ್ ಅಂಟಿಸುತ್ತಿದ್ದಂತೆ ಸಮೀರ್ ಇಂದು (ಆ.24) ವಿಚಾರಣೆಗೆ ಹಾಜರಾಗಿದ್ದನು.

ಮಂಗಳೂರು, ಆಗಸ್ಟ್ 24: ಧರ್ಮಸ್ಥಳದಲ್ಲಿ (Dharmastala) ನೂರಾರು ಶವ ಹೂತ್ತಿದ್ದೇನೆ ಅಂತ ಹೇಳಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಅರೆಸ್ಟ್ ಆಗಿದ್ದಾರೆ. ಇದರ ನಡುವೆ ಯುಟ್ಯೂಬರ್ ಸಮೀರ್ (Youtuber Sameer) ವಿರುದ್ಧವೂ ಬೆಳ್ತಂಗಡಿ ಪೊಲೀಸರು (Police) ಕೇಸ್ ದಾಖಲಿಸಿಕೊಂಡಿದ್ದರು. ದೊಂಬಿ ಮಾಡುವ ಉದ್ದೇಶದಿಂದ ವಿಡಿಯೋ ಮಾಡಿದ ಆರೋಪದಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಶುಕ್ರವಾರ ಸಮೀರ್ ಬಂಧನಕ್ಕೆ ಮುಂದಾಗಿದ್ದರು. ಆದರೆ, ನಿರೀಕ್ಷಣಾ ಜಾಮೀನು ಪಡೆದಿದ್ದ ಸಮೀರ್ ಅಜ್ಞಾತವಾಗಿದ್ದನು.
ಹೀಗಾಗಿ, ಪೊಲೀಸರು ಶನಿವಾರ ಆತನ ಬೆಂಗಳೂರು ಹಾಗೂ ಬಳ್ಳಾರಿ ನಿವಾಸಕ್ಕೆ ತೆರಳಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ಹೀಗಾಗಿ, ಇಂದು (ಆ.24) ಸಮೀರ್ ಪೊಲೀಸರ ವಿಚಾರಣೆಗೆ ಹಾಜರಾಗಿದ್ದನು. ಮೂವರು ವಕೀಲರ ಸಮೇತ, ದಾಖಲೆ ಹಿಡಿದು ವಿಚಾರಣೆಗೆ ಬಂದಿದ್ದನು.
ಸಮೀರ್‌ಗೆ 45 ಪ್ರಶ್ನೆ
ತನಿಖಾಧಿಕಾರಿ ನಾಗೇಶ್ ಕದ್ರಿ ಅವರು ಸಮೀರ್ ಎಂಡಿಯನ್ನ ವಿಚಾರಣೆಗೆ ಒಳಪಡಿಸಿದರು. ಧರ್ಮಸ್ಥಳ ಬಗ್ಗೆ ಮಾಡಿದ್ದ ವಿಡಿಯೋ ಮೇಕಿಂಗ್ಗೆ ಸಹಕಾರ ಕೊಟ್ಟಿದ್ಯಾರು? ಆರೋಪಕ್ಕೆ ಸಾಕ್ಷಿ ಇದೆಯಾ ಸೇರಿದಂತೆ ಚಿನ್ನಯ್ಯನ ಲಿಂಕ್ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದರು.
ಪ್ರಶ್ನೆ 1 : ಆ ವಿಡಿಯೋಗೂ ಮೊದಲು ಅನಾಮಿಕನನ್ನು ಭೇಟಿಯಾಗಿದ್ದೀರಾ?
ಪ್ರಶ್ನೆ 2 : ವಿಷಯ ತಯಾರಿಸಲು ಸಾಕ್ಷಿದಾರರಿಂದಲೇ ಮಾಹಿತಿ ಪಡೆದಿದ್ದೀರಾ?
ಪ್ರಶ್ನೆ 3 : ಸಾಕ್ಷಿದಾರನ ಸಂಪರ್ಕ ನಿಮಗೆ ಹೇಗೆ ಸಿಕ್ಕಿತು?
ಪ್ರಶ್ನೆ 4 : ಸಾಕ್ಷಿದಾರ ನಿನ್ನ ಸಂಪರ್ಕಿಸಿದ್ದನಾ, ಅಥವಾ ನೀನೇ ಸಂಪರ್ಕಿಸಿದ್ದಾ?
ಪ್ರಶ್ನೆ 5 : ಸಾಕ್ಷಿದಾರನನ್ನು ಮೊದಲ ಬಾರಿ ಯಾವಾಗ, ಎಲ್ಲಿ ಭೇಟಿಯಾದೆ?
ಪ್ರಶ್ನೆ 6 : ಭೇಟಿಯ ಸಂದರ್ಭದ ದಾಖಲೆ, ಸಾಕ್ಷಿ ನಿನ್ನ ಬಳಿ ಇದೆಯಾ?
ಪ್ರಶ್ನೆ 7 : ಸಾಕ್ಷಿದಾರನೊಂದಿಗೆ ನಿನ್ನ ಸಂಪರ್ಕ ಎಷ್ಟು ದಿನ ಮುಂದುವರಿದಿತ್ತು?
ಪ್ರಶ್ನೆ 8 : ಸಾಕ್ಷಿದಾರನಿಂದ ನೀನು ಯಾವ ಯಾವ ಮಾಹಿತಿಯನ್ನು ಪಡದೆ?
ಪ್ರಶ್ನೆ 9 : ಸಾಕ್ಷಿದಾರ ವಿಡಿಯೋ ಮಾಡಲು ಸೂಚನೆ ಕೊಟ್ಟಿದ್ದಾನೆಯೇ?
ಪ್ರಶ್ನೆ 10 : ವಿಡಿಯೋ ಬಿಡುಗಡೆಗೂ ಮುನ್ನ ಸಾಕ್ಷಿದಾರನಿಗೆ ತೋರಿಸಿದ್ದೀರಾ?
ಪ್ರಶ್ನೆ 11 : ವಿಡಿಯೋ ವೈರಲ್ ನಂತರ ಸಾಕ್ಷಿದಾರ ನಿನ್ನ ಸಂಪರ್ಕಿಸಿದ್ದನಾ?
ಪ್ರಶ್ನೆ 12 : ಸಾಕ್ಷಿದಾರನನ್ನು ಬೇರೆ ವ್ಯಕ್ತಿ ಮೂಲಕ ಸಂಪರ್ಕ ಸಾಧಿಸಿದ್ದೀಯಾ?
ಪ್ರಶ್ನೆ 13 : ಸಾಕ್ಷಿದಾರನಿಗೆ ಸಂಪರ್ಕವಿರೋ ವ್ಯಕ್ತಿಗಳ ಜತೆ ಸಂಪರ್ಕವಿದೆಯಾ?
ಪ್ರಶ್ನೆ 14 : ಸಾಕ್ಷಿದಾರ ಬಿಟ್ಟು ವಿಡಿಯೋಗಾಗಿ ಬಳಸಿದ ಬೇರೆ ಮೂಲ ಯಾವುದು?
ಪ್ರಶ್ನೆ 15 : ಸಾಕ್ಷಿದಾರ, ನಿಮ್ಮ ನಡುವೆ ಹಣಕಾಸು ವ್ಯವಹಾರ ನಡೆದಿದೆಯೇ?
ಪ್ರಶ್ನೆ 16: ವಿಡಿಯೋ ಚಿತ್ರೀಕರಿಸಿದ್ದು ಯಾರು & ಎಡಿಟ್ ಮಾಡಿದ್ಯಾರು?
ಪ್ರಶ್ನೆ 17: ಎಐ ವಿಡಿಯೋ ಮಾಡಿರುವ ಉದ್ದೇಶ ಏನು?
ಪ್ರಶ್ನೆ 18: ಜನರಲ್ಲಿ ಗೊಂದಲ ಅಥವಾ ದ್ವೇಷ ಹುಟ್ಟಿಸಲು ಉದ್ದೇಶಿಸಿದ್ದೀರಾ?
ಪ್ರಶ್ನೆ 19: ವಿಡಿಯೋದಲ್ಲಿ ಹೇಳಿದ ವಿಷಯಗಳ ಸತ್ಯಾಸತ್ಯತೆ ಹೇಗೆ ದೃಢಪಡಿಸಿದ್ದೀರಿ?
ಪ್ರಶ್ನೆ 20: ವಿಡಿಯೋದಲ್ಲಿ ಹೇಳಿದ ವಿಷಯಗಳ ಬಗ್ಗೆ ದಾಖಲೆ ಇದೆಯಾ?
ಪ್ರಶ್ನೆ 21: ದೂತ ಚಾನಲ್ ಜೊತೆ ಇನ್ನೂ ಯಾಱರು ಭಾಗಿಯಾಗಿದ್ದಾರೆ?
ಪ್ರಶ್ನೆ 22: ಈ ವಿಷಯದ ಬಗ್ಗೆ ವಿಡಿಯೋ ಮಾಡಲು ಪ್ರೇರೇಪಿಸಿದ್ಯಾರು?
ಪ್ರಶ್ನೆ 23: AI ಮೂಲಕ ನಕಲಿ ಚಿತ್ರ/ವಿಡಿಯೋ ಸೇರಿಸುವುದರ ಉದ್ದೇಶ ಏನು?
ಪ್ರಶ್ನೆ 24: ಈ ವಿಡಿಯೋ ಮಾಡಲು ಹಣ ಅಥವಾ ಬೆಂಬಲ ದೊರಕಿದೆಯೇ?
ಹೀಗೆ ಸಮೀರ್ ಅಪ್‌ಲೋಡ್ ಮಾಡಿದ್ದ ವಿಡಿಯೋಗಳ ಮೂಲದ ಬಗ್ಗೆ ಪೊಲೀಸರು 45 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಆರೋಪಿ ಚಿನ್ನಯ್ಯನ ಜೊತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಶಾಕ್
3 ಬಾರಿ ಸ್ಕ್ರಿಪ್ಟ್ ಓದಿಸಿ ವಾಯ್ಸ್ ರೆಕಾರ್ಡ್
ಹತ್ತಾರು ಪ್ರಶ್ನೆ ಕೇಳಿದ ಪೊಲೀಸರು ಆತನಿಂದಲೇ ವಾಯ್ಸ್ ಓವರ್ ಕೊಡಲು ಹೇಳಿದರು. ವಿಡಿಯೋದ ಒಂದೇ ಸ್ಕ್ರಿಪ್ಟ್‌ನ್ನು ಮೂರು ಬಾರಿ ಓದಿಸಿ ಧ್ವನಿ ಸಂಗ್ರಹ ಮಾಡಿಕೊಂಡ ಪೊಲೀಸರು ಅದನ್ನ ಎಫ್ಎಸ್‌ಎಲ್‌ಗೆ ಕಳಿಸಲಿದ್ದಾರೆ. ಹೀಗೆ ಬೆಳಗಿನಿಂದ ಸಂಜೆವರೆಗೂ ವಿಚಾರಣೆ ನಡೆಸಿದ ಪೊಲೀಸರು ನಾಳೆ (ಆ.25) ಮತ್ತೆ ಬರಬೇಕು ಅಂತ ಹೇಳಿ ಸಮೀರ್‌ನನ್ನ ವಾಪಸ್ ಕಳಿಸಿದ್ದಾರೆ.
ನಾಳೆ ವಿಡಿಯೋ ಎಡಿಟಿಂಗ್‌ಗೆ ಬಳಸಿದ ಕಂಪ್ಯೂಟರ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಮತ್ತೆರಡು ಪ್ರಕರಣಗಳು ಸಮೀರ್ ಮೇಲಿದ್ದು, ಖಾಸಗಿ ವಾಹಿನಿ ವರದಿಗಾರ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಶ್ನೆ ಕೇಳಿದ್ದಾರೆ. ಬೆನಕ ಆಸ್ಪತ್ರೆ ಬಳಿ ಗಲಾಟೆ ಕೇಸ್ ತನಿಖೆ ಬಾಕಿ ಇದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Sun, 24 August 25



