ಧರ್ಮಸ್ಥಳ ಕೇಸ್: ಮುಸುಕುಧಾರಿ ಚಿನ್ನಯ್ಯನ ಅಣ್ಣ ಎಸ್ಐಟಿ ವಶಕ್ಕೆ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಮುಸುಕುಧಾರಿ ಚಿನ್ನಯ್ಯನ ಅಣ್ಣನನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿನ್ನಯ್ಯನ ಅಣ್ಣನನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಸುಳ್ಳು ಹೇಳಿಕೆ ಹಾಗೂ ಸುಳ್ಳು ಸಾಕ್ಷ್ಯ ನೀಡಿದ ಆಧಾರದ ಮೇಲೆ ಚಿನ್ನಯ್ಯನನ್ನು ಬಂಧಿಸಲಾಗಿದೆ. ಎಸ್ಐಟಿ ತನಿಖೆ ಚಿನ್ನಯ್ಯನಿಂದ ಬುರುಡೆ ಗ್ಯಾಂಗ್ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದೆ.

ಮಂಗಳೂರು, ಆಗಸ್ಟ್ 23: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವ ಹೂತಿದ್ದಾಗಿ ತಲೆಬುರುಡೆ ತಂದ ಪ್ರಕರಣದಲ್ಲಿ ಬಂಧಿತನಾಗಿರುವ ಮುಸುಕುಧಾರಿ ಸಿಎನ್ ಚಿನ್ನಯ್ಯನ ಅಣ್ಣನನ್ನು ಎಸ್ಐಟಿ ಪೊಲೀಸರು (SIT Police) ವಶಕ್ಕೆ ಪಡೆದಿದ್ದಾರೆ. ಮುಸುಕುಧಾರಿ ಚಿನ್ನಯ್ಯ ಅಣ್ಣ ತಾನಾಸಿ ಶನಿವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ತಾನಾಸಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಎಸ್ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡು ಕಚೇರಿಗೆ ಕರೆತಂದಿದ್ದಾರೆ. ಕಚೇರಿಯಲ್ಲಿ ಎಸ್ಐಟಿ ಅಧಿಕಾರಿಗಳು ತಾನಾಸಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಇವರ ತಮ್ಮ ಚಿನ್ನಯ್ಯನ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಮುಸುಕುಧಾರಿ ಚಿನ್ನಯ್ಯ ಬಂಧನ
ತಲೆಬುರುಡೆ ತಂದ ಕೇಸ್ನಲ್ಲಿ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದಾರೆ. ಈ ಮೂಲಕ ಸಾಕ್ಷಿ ಸಂರಕ್ಷಣಾ ಕಾಯ್ದೆಯಿಂದ ವಿಮುಖಗೊಳಿಸಲಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್ಗೆ ಮಾಸ್ಕ್ಮ್ಯಾನ್ ನನ್ನ ಎಸ್ಐಟಿ ಅಧಿಕಾರಿಗಳು ಹಾಜರುಪಡಿಸಿದರು. ನ್ಯಾಯಾಲಯ ಚಿನ್ನಯ್ಯನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ದೂರುದಾರ ಮಾಸ್ಕ್ಮ್ಯಾನ್ ನನ್ನು ಬಂಧಿಸಿದ್ದು ಹೇಗೆ?
ಪ್ರಕರಣದಲ್ಲಿ ಅನಾಮಿಕ ದೂರುದಾರನನ್ನು ಸಾಕ್ಷಿದಾರನನ್ನಾಗಿ ಪರಿಗಣಿಸಲಾಗಿತ್ತು. ಹೀಗಾಗಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತನನ್ನು ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಎಸ್ಐಟಿ ಅಧಿಕಾರಿಗಳ ಸತತ ವಿಚಾರಣೆ ಈತನ ಬಂಡವಾಳ ಬಯಲು ಮಾಡಿದೆ. ಬಳಿಕ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬಂಧಿತ ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯ ಯಾರು? ಇಲ್ಲಿದೆ ಮಾಹಿತಿ
ಬುರುಡೆ ತಂದುಕೊಟ್ಟವರ ಸುಳಿವು ನೀಡಿ ಚಿನ್ನಯ್ಯ
ಚಿನ್ನಯ್ಯ ಜುಲೈ 11ರಂದು ನ್ಯಾಯಾಲಯದಲ್ಲಿ ತಾನೇ ಅಗೆದು ತಲೆ ಬುರುಡೆ ತಂದಿದ್ದಾಗಿ 164 ಹೇಳಿಕೆ ಕೊಟ್ಟಿದ್ದನು. ಇದೇ ಆಧಾರದಲ್ಲಿ ಎಸ್ಐಟಿ ಬುರುಡೆಯನ್ನು ಫಾರೆನ್ಸಿಕ್ ಕಳಿಸಿ ಉತ್ಖನನ ನಡೆಸಿತ್ತು. ಆದರೆ ನಿರಂತರ ತನಿಖೆ ವೇಳೆ ತಂದ ಬುರುಡೆ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿದ್ದನು. ತಲೆ ಬುರುಡೆಯನ್ನು ಎಲ್ಲಿಂದ ತಂದೆ ಎಂದು ಚಿನ್ನಯ್ಯ ಹೇಳಿಕೆ ನೀಡಲಿಲ್ಲ. ಹೀಗಾಗಿ ಡಿಜಿಪಿ ಮೊಹಾಂತಿಯವರು ಚಿನ್ನಯ್ಯನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಬುರುಡೆ ನಾನು ಅಗೆದು ತಂದಿಲ್ಲ ಎಂದು ಬುರುಡೆ ಗ್ಯಾಂಗ್ ಬಗ್ಗೆ ಚಿನ್ನಯ್ಯ ಬಾಯಿ ಬಿಟ್ಟಿದ್ದನು. ಇದರ ಆಧಾರದಲ್ಲಿ ಸುಳ್ಳು ಸಾಕ್ಷ್ಯ ಹಾಗೂ ಸುಳ್ಳು ಹೇಳಿಕೆ ಆಧಾರದಲ್ಲಿ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Sat, 23 August 25



