ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ: SIT ಮಧ್ಯಂತರ ವರದಿ ಬಹಿರಂಗಕ್ಕೆ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ

ಧರ್ಮಸ್ಥಳ ಬುರುಡೆ ಕೇಸ್‌ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಎಸ್​​​ಐಟಿ ತನಿಖೆ ಮಾಡುತ್ತಿತ್ತು. ಆದರೆ ತನಿಖೆಯನ್ನ ಅನುಮಾನಿಸಿ ಚಿನ್ನಯ್ಯ ಹೈಕೋರ್ಟ್ ಮೆಟ್ಟಿಲೇರಿ, ರಿಟ್ ಅರ್ಜಿ ಸಲ್ಲಿಸಿದ್ದ. ಆ ಮೂಲಕ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿತ್ತು. ಬಳಿಕ ನಟ ಪ್ರಕಾಶ್ ರಾಜ್ ಹೆಸರು ಕೇಳಿಬಂದಿತ್ತು. ಇದೀಗ ಪ್ರಕಣರ ಮತ್ತೊಂದು ಹಂತಕ್ಕೆ ಹೋಗಿದ್ದು, ಚಕ್ರವರ್ತಿ ಸೂಲಿಬೆಲೆ, ವಸಂತ್​ ಗಿಳಿಯಾರ್​ ಸುದ್ದಿಗೋಷ್ಠಿ ಮಾಡಿ, SIT ಮಧ್ಯಂತರ ವರದಿ ಬಹಿರಂಗ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ: SIT ಮಧ್ಯಂತರ ವರದಿ ಬಹಿರಂಗಕ್ಕೆ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ
ಧರ್ಮಸ್ಥಳ ಕೇಸ್​
Image Credit source: tv9 kannada
Edited By:

Updated on: Jun 17, 2026 | 5:19 PM

ಬೆಂಗಳೂರು, ಜೂನ್​​ 17: ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala Case) ವಿರುದ್ಧ ಷಡ್ಯಂತ್ರ, ಅಪಪ್ರಚಾರ ಪ್ರಕರಣದಲ್ಲಿ ಅನೇಕರ ಚಾರಿತ್ರ್ಯ ಹನನವನ್ನು ನೋಡಿದ್ದೇವೆ. ಇಂದು ಷಡ್ಯಂತ್ರ ಹೊರ ಬಂದಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆದಿತ್ತು. ಬೇರೆ ಬೇರೆ ಮೂಲಗಳಿಂದ ಹಣದ ಬಂದಿತ್ತು. ನಾವು ಜನಾಗ್ರಹ ಸಭೆಗಳನ್ನು ಮಾಡುತ್ತೇವೆ. ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗುತ್ತೇವೆ ಎಂದು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮುಖ್ಯಾಂಶಗಳು

  • ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ
  • ಬೆಂಗಳೂರಿನಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಸುದ್ದಿಗೋಷ್ಠಿ
  • ಷಡ್ಯಂತ್ರ ಹೊರ ಬಂದಿದೆ ಎಂದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ ಹೇಳಿದ್ದಿಷ್ಟು 

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ವಿಚಾರವಾಗಿ ಇಂದು ನಗರದಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಒಂದು ತಂಡ ಸಿದ್ದರಾಮಯ್ಯನ ಸುತ್ತಮುತ್ತ ಓಡಾಡಿಕೊಂಡು ಎಸ್ಐಟಿ ರಚನೆ ಮಾಡಿಸಿದ್ದರು. ನನಗೆ ಆಮಿಷ ಒಡ್ಡಲಾಯಿತು ಅಂತಾ ಕೋರ್ಟ್​ನಲ್ಲಿ ಚಿನ್ನಯ್ಯ ಹೇಳುತ್ತಿದ್ದಾನೆ. ಇದು ನೇರವಾಗಿ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಇದು ಕೇವಲ ಸರ್ಕಾರಕ್ಕೆ ಮೋಸ ಅಲ್ಲ, 7 ಕೋಟಿ ಜನರಿಗೆ ಮಾಡುತ್ತಿರುವ ಮೋಸ ಎಂದರು.

ಇದನ್ನೂ ಓದಿ: ಧರ್ಮಸ್ಥಳ ಕೇಸ್​: ಬುರುಡೆ ಗ್ಯಾಂಗ್ ಸಂಪರ್ಕ ಮಾಡಿದ್ದ ಸ್ವಾಮೀಜಿ ರಹಸ್ಯ ರಿವೀಲ್

ಇನ್ನು ನಿನ್ನ ತಬ್ಬಿಕೊಳ್ಳುತ್ತೇನೆ ಎಂದು ಚಿನ್ನಯ್ಯಗೆ ನಟ ಪ್ರಕಾಶ್ ರಾಜ್ ಹೇಳಿದ್ದರಂತೆ. ಅವರ ಉದ್ದೇಶ ಏನಿತ್ತು, ಏಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಚಿನ್ನಯ್ಯನಿಗೆ ಪ್ರೇರಣೆ ಕೊಟ್ಟ ಪ್ರಕಾಶ್ ರಾಜ್ ವೀರೇಂದ್ರ ಹೆಗ್ಗಡೆಗೆ ಜಂಟಲ್ ಮ್ಯಾನ್ ಎನ್ನುತ್ತಾರೆ. ಜನರ ಆಸ್ತಿಕತೆಯ ಮೇಲೆ ಆಗಿರುವ ಆಘಾತಕ್ಕೆ ಪ್ರಕಾಶ್ ರಾಜ್ ಕ್ಷಮೆ ಕೇಳುತ್ತಾರಾ? ಪ್ರಕಾಶ್ ರಾಜ್ ಕರೆ ಮಾಡಿದ್ದನ್ನು ವರದಿಯಲ್ಲಿ ದಾಖಲಿಸಿದ್ದಾರಾ? ರಾಜ್ಯ ಸರ್ಕಾರ SIT ಮಧ್ಯಂತರ ವರದಿ ಬಹಿರಂಗ ಮಾಡಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಎಲ್ಲಿದೆ ಮೂಳೆಗಳ ರಾಶಿ? ವಸಂತ್​ ಗಿಳಿಯಾರ್ ಪ್ರಶ್ನೆ

ವಸಂತ್​ ಗಿಳಿಯಾರ್ ಮಾತನಾಡಿದ್ದು, ನಾವು ಧರ್ಮಸ್ಥಳ ಪರವಾದ ಪಿಆರ್​ಓ ಅಲ್ಲ. ಧರ್ಮಸ್ಥಳದವರು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಟ್ಟಿರಬಹುದು. ಮೂಳೆಗಳ ರಾಶಿ ಸಿಕ್ಕಿದೆ ಎಂದು ಯೂಟ್ಯೂಬ್​​ನಲ್ಲಿ ವರದಿ ಮಾಡಿದರು. ಎಲ್ಲಿದೆ ಮೂಳೆಗಳ ರಾಶಿ? ಸುಳ್ಳು ವರದಿಯನ್ನು ಎಸ್ಐಟಿ ತಡೆ ಹಾಕಿದ್ದರೆ ಇಷ್ಟು ಡ್ಯಾಮೇಜ್ ಆಗುತ್ತಿರಲಿಲ್ಲ. ಷಡ್ಯಂತ್ರ ಮಾಡಿದವರು ಕೆಲವು ಯೂಟ್ಯೂಬರ್​ಗಳನ್ನು ಹಣ ಕೊಟ್ಟು ಸಾಕಿಕೊಂಡಿದ್ದಾರೆ. ಎಲ್ಲರೂ ಇದ್ದಿದ್ದು ಷಡ್ಯಂತ್ರ ಕೂಟದ ಮನೆಯಲ್ಲೇ. ಎಸ್ಐಟಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಂದು ನಾವು ಮಾಡಿರುವ ಆರೋಪಗಳು ನಿಜ ಅಂತಾ ಸಾಬೀತಾಗಿದೆ. ಇದರಲ್ಲಿ ಖಳ ನಟ ಅಥವಾ ಚಿತ್ರನಟ ಪ್ರಕಾಶ್ ರಾಜ್ ಹೆಸರು ಕೂಡ ಕೇಳಿಬಂದಿದೆ. ಚಿನ್ನಯ್ಯ ಜೊತೆ ಮಾತಾಡಿದ್ದು ನಿಜ ಅಂತಾ ಪ್ರಕಾಶ್ ರಾಜ್ ಒಪ್ಪಿಕೊಂಡಿದ್ದಾರೆ. ಎಸ್ಐಟಿ ಮುಖ್ಯಸ್ಥ ಮೊಹಂತಿ ಜೊತೆ ಮಾತನಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಗೃಹ ಸಚಿವರಾಗಿದ್ದ ಡಾ. ಜಿ ಪರಮೇಶ್ವರ್ ಮುಚ್ಚಿಟ್ಟ ಸತ್ಯವನ್ನು ಪ್ರಿಯಾಂಕ್ ಖರ್ಗೆ ಬಯಲು ಮಾಡಬೇಕು ಎಂದರು.

ಚಿನ್ನಯ್ಯಗೆ ಹೆಡ್ ಫೋನ್ ಮೂಲಕ ಡೈರೆಕ್ಷನ್ ನೀಡುತ್ತಿದ್ದರು

ನನ್ನ ಕಿವಿಗೆ ಹೆಡ್ ಫೋನ್ ಹಾಕಲಾಗಿತ್ತು ಅಂತಾ ರಿಟ್ ಅರ್ಜಿಯಲ್ಲಿ ಚಿನ್ನಯ್ಯ ಹೇಳಿದ್ದಾನೆ. ಮಾಸ್ಕ್ ಹಾಕಿದ್ದ ರಹಸ್ಯವೇ ಹೆಡ್ ಫೋನ್ ಹಾಕಿರುವುದು. ಅಂದು ಗುಂಡಿ ಅಗೆಯುವ ವೇಳೆ ಚಿನ್ನಯ್ಯ ಅತ್ತಿತ್ತ ಓಡಾಡುತ್ತಿದ್ದ. ಆಗ ಆತನಿಗೆ ಹೆಡ್ ಫೋನ್ ಮೂಲಕ ಡೈರೆಕ್ಷನ್ ಕೊಡುತ್ತಿದ್ದರು ಎನ್ನುವುದು ಈಗ ಸ್ಪಷ್ಟ ಆಗಿದೆ. ಎಡಪಂಥೀಯ ಚಿಂತಕರೇ ಎಸ್ಐಟಿಯನ್ನು ಮುನ್ನಡೆಸುವ ರೀತಿಯಲ್ಲಿ ಕಂಡುಬರುತ್ತಿದೆ. ಚಿನ್ನಯ್ಯ ಜೊತೆ ಮಾತಾಡಬೇಡಿ ಎಂದು ಪ್ರಣಬ್ ಮೊಹಂತಿ ಹೇಳಿದ್ದರು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಚಿನ್ನಯ್ಯ ಜೊತೆ ಪ್ರಕಾಶ್ ರಾಜ್ ಸಂಪರ್ಕದಲ್ಲಿರುವುದು ಗೊತ್ತಾದ ಕೂಡಲೇ ಪ್ರಣಬ್ ಮೊಹಂತಿ ನೋಟಿಸ್ ಕೊಡಬೇಕಿತ್ತಲ್ವಾ ಎಂದು ವಸಂತ್​ ಗಿಳಿಯಾರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡವಂತೆ ಎಸ್​ಐಟಿಗೆ ಗಿರೀಶ್ ಮಟ್ಟಣ್ಣನವರ್​​ ದೂರು

ನಾವು ಎಸ್ಐಟಿ ಮುಖ್ಯಸ್ಥರ ಮೇಲೆ ಆರೋಪ ಮಾಡುತ್ತಿಲ್ಲ. ಪ್ರಣಬ್ ಮೊಹಂತಿ ನನಗೆ ಸೂಚಿಸಿದ್ದರು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಇದೇ ಪ್ರಕಾಶ್ ರಾಜ್ ತಮ್ಮ ನಿರ್ದಿಗಂತ ನಾಟಕದಲ್ಲಿ ಧರ್ಮಾಧಿಕಾರಿಗಳನ್ನು ತುಚ್ಛವಾಗಿ ತೋರಿಸಿದ್ದಾರೆ. ಪ್ರಕಾಶ್ ರಾಜ್ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದಾಗ ನಾವು ಪ್ರಶ್ನೆ ಮಾಡಿದ್ದೇವೆ ಎಂದರು.

ಸರ್ಕಾರ ಸೂಕ್ತ ತನಿಖೆ ನಡೆಸಬೇಕು: ವಿಕಾಸ್ ಕುಮಾರ್ ಪುತ್ತೂರು

ವಿಕಾಸ್ ಕುಮಾರ್ ಪುತ್ತೂರು ಪ್ರತಿಕ್ರಿಯಿಸಿದ್ದು, ಚಿನ್ನಯ್ಯ ಎಂಬ ವ್ಯಕ್ತಿ ಷಡ್ಯಂತ್ರ ಆಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಷಡ್ಯಂತ್ರದ ಸೂತ್ರಧಾರಿ ಯಾರು ಎಂದು ಬಯಲಾಗಬೇಕಿದೆ. ಈ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂಬ ಅನುಮಾನ ಇದೆ. ಹೊಸ ಗೃಹ ಸಚಿವರು ಎಲ್ಲವನ್ನೂ ಬಹಿರಂಗಪಡಿಸಲಿ. ಎಡಪಂಥೀಯರ ಮನವಿಯಂತೆ ಎಸ್ಐಟಿ ರಚಿಸಲಾಗಿದೆ ಎಂದು ಅಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಹೇಳಿದ್ದರು. ಆ ಎಡಪಂಥೀಯರು ಯಾರು ಅಂತಾ ಬಹಿರಂಗವಾಗಲಿ. ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:18 pm, Wed, 17 June 26

Follow Us