ಪ್ರತ್ಯೇಕ ಘಟನೆ: ಮಂಗಳೂರಿನಲ್ಲಿ ರೌಡಿಶೀಟರ್ಗೆ ಚಾಕು ಇರಿತ, ಬಿಜೆಪಿ ಕಾರ್ಯಕರ್ತನ ಮೇಲೆ ರೌಡಿಶೀಟರ್ನಿಂದ ಹಲ್ಲೆ
ಒಂದೆಡೆ ರಾಜ್ಯದ 14 ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ಮಧ್ಯೆ ಮಂಗಳೂರಿನ ಹೊರವಲಯದಲ್ಲಿ ರೌಡಿಶೀಟರ್ ಮೇಲೆ ಚಾಕು ಇರಿದಿದ್ದರೆ, ಇತ್ತ ಬೆಂಗಳೂರಿನ ಸರ್ಜಾಪುರ ವ್ಯಾಪ್ತಿಯಲ್ಲಿ ರೌಡಿಶೀಟರ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ, ಏ.26: ಮಂಗಳೂರು(Mangaluru) ಹೊರವಲಯದ ಪರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ರೌಡಿ ಶೀಟರ್ ಪವನ್ ಎಂಬಾತನಿಗೆ ರೌಡಿಶೀಟರ್ ಚರಣ್ ಎಂಬಾತ ಚೂರಿ ಇರಿದ ಘಟನೆ ನಡೆದಿದೆ. ಎಸ್ಡಿಪಿಐ ಮುಖಂಡ ಕಲಾಯಿ ಅಶ್ರಫ್ ಕೊಲೆ ಪ್ರಕರಣದ ಆರೋಪಿಯಾಗಿರುವ ಪವನ್ಗೆ ಗಾಂಜಾ ವ್ಯಸನಿಯಾಗಿರುವ ಆರೋಪಿ ಚರಣ್ ಚಾಕು ಇರಿದಿದ್ದಾನೆ. ಕೂಡಲೇ ಪವನ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈಯಕ್ತಿಕ ದ್ವೇಷವೆಂದ ಪೊಲೀಸ್
ಇನ್ನು ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಗಾಯಾಳು ಪವನ್ ಪಾರಾಗಿದ್ದಾನೆ. ಮೇಲ್ನೋಟಕ್ಕೆ ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಜೈಶ್ರೀರಾಮ ಹೇಳಿದ್ದಕ್ಕೆ ಹಲ್ಲೆ: ಘಟನೆ ಹೇಗಾಯ್ತು? ದೂರಿನಲ್ಲಿ ಘಟನೆ ಬಗ್ಗೆ ವಿವರಿಸಿದ ಹಲ್ಲೆಗೊಳಗಾದ ಯವಕ
ಬಿಜೆಪಿ ಕಾರ್ಯಕರ್ತನ ಮೇಲೆ ರೌಡಿಶೀಟರ್ ಹಲ್ಲೆ ಆರೋಪ
ಬೆಂಗಳೂರು ಗ್ರಾಮಾಂತರ: ಸರ್ಜಾಪುರದ ಬೂತ್ ನಂಬರ್ 79, 80, 81 ಹಾಗೂ 82 ರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ರೌಡಿಶೀಟರ್ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಮತಗಟ್ಟೆ ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಟೇಬಲ್ ಹಾಕಿದ್ದರು. ಈ ವೇಳೆ ಶ್ರೀನಿವಾಸ್ ಅಲಿಯಾಸ್ ಕಟಿಂಗ್ ಸೀನ ಎನ್ನುವವನಿಂದ ಟೇಬಲ್ ಕಿತ್ತೆಸೆದು ದಾಂಧಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಹಾರ್ಟ್ ಆಪರೇಷನ್ ಆಗಿದ್ದ ಪ್ರಕಾಶ್ ಎಂಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಲಾಠಿ ಬೀಸಿ ಕಾರ್ಯಕರ್ತನ ಚದುರಿಸಿದ ಪೊಲೀಸರು
ಸದ್ಯ ಬಿಜೆಪಿ ಕಾರ್ಯಕರ್ತನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಕರ್ತರ ಕಿರಿಕ್ನಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ