ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಬಂಪರ್ ಕಲೆಕ್ಷನ್: 20 ತಿಂಗಳಲ್ಲಿ ಕೋಟಿ ಕೋಟಿ ಆದಾಯ; ಸುಬ್ರಹ್ಮಣ್ಯ ರೋಡ್ ನಿಲ್ದಾಣವೇ ನಂಬರ್ 1

ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗ ವಿಸ್ತರಣೆಯು ಭಾರಿ ಯಶಸ್ಸು ಕಂಡಿದೆ. ಏಪ್ರಿಲ್ 12ರ ನಂತರ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ವಿಶೇಷವಾಗಿ ಸುಬ್ರಹ್ಮಣ್ಯ ರೋಡ್ ನಿಲ್ದಾಣವು ಅತಿ ಹೆಚ್ಚು ಆದಾಯ ಗಳಿಸಿ ಅಗ್ರಸ್ಥಾನದಲ್ಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಭಕ್ತಾದಿಗಳಿಗೆ ಈ ಸೇವೆ ವರದಾನವಾಗಿದ್ದು, ರೈಲ್ವೆ ಇಲಾಖೆಗೆ 31 ಕೋಟಿಗೂ ಹೆಚ್ಚು ಆದಾಯ ಹರಿದುಬಂದಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಬಂಪರ್ ಕಲೆಕ್ಷನ್: 20 ತಿಂಗಳಲ್ಲಿ ಕೋಟಿ ಕೋಟಿ ಆದಾಯ; ಸುಬ್ರಹ್ಮಣ್ಯ ರೋಡ್ ನಿಲ್ದಾಣವೇ ನಂಬರ್ 1
ಸಾಂದರ್ಭಿಕ ಚಿತ್ರ

Updated on: Oct 07, 2026 | 10:27 AM

ಮುಖ್ಯಾಂಶಗಳು

  • ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಬಂಪರ್ ಕಲೆಕ್ಷನ್
  • ಮಂಗಳೂರು–ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಆದಾಯದ ಸುರಿಮಳೆ
  • ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವೇ ‘ನಂಬರ್ ಒನ್’

ಪುತ್ತೂರು, ಅ.7: ಮಂಗಳೂರು ಸೆಂಟ್ರಲ್‌ನಿಂದ ಕಬಕ ಪುತ್ತೂರಿನವರೆಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲು ಸೇವೆಯನ್ನು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಿಸಿದ ನೈಋತ್ಯ ರೈಲ್ವೆಯ ತೀರ್ಮಾನವು ಸಾರ್ವಜನಿಕರ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಏಪ್ರಿಲ್ 12 ರಂದು ರೈಲು ಮಾರ್ಗ ವಿಸ್ತರಣೆಯಾದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಮುಖ ರೈಲ್ವೆ ನಿಲ್ದಾಣಗಳ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿಯ ಶಂಕರ್ ಕಲ್ಮಡ್ಕ ಅವರು ‘ಮಾಹಿತಿ ಹಕ್ಕು ಕಾಯ್ದೆ’ (RTI) ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ನೀಡಿರುವ ಅಧಿಕೃತ ಅಂಕಿ-ಅಂಶಗಳಿಂದ ಈ ಧನಾತ್ಮಕ ಪ್ರಗತಿ ಬಹಿರಂಗವಾಗಿದೆ. ಈ ಹಿಂದೆ ಕೊಡಿಂಬಾಳ, ಎಡಮಂಗಲ, ನರಿಮೊಗರು ಹಾಗೂ ಕಣಿಯೂರು ನಿಲ್ದಾಣಗಳಲ್ಲಿ ಮಧ್ಯಾಹ್ನದ ವೇಳೆ ಮಾತ್ರ ಪ್ರಯಾಣಿಕರ ಚಲನವಲನವಿರುತ್ತಿತ್ತು. ಪ್ರಸ್ತುತ ಬೆಳಗಿನ ಹಾಗೂ ಸಂಜೆಯ ಸಮಯದಲ್ಲೂ ರೈಲು ಸಂಚಾರ ಆರಂಭವಾಗಿರುವುದರಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ಭಾರಿ ಅನುಕೂಲವಾಗಿದೆ.

ವಿಸ್ತರಣೆಗೂ ಮುನ್ನ ಮತ್ತು ನಂತರದ ಆದಾಯ ಹೋಲಿಕೆ (ಆರ್‌ಟಿಐ ವರದಿ):

ಜನವರಿಯಿಂದ ಮಾರ್ಚ್ (ವಿಸ್ತರಣೆಗೆ ಮುನ್ನ) ಹಾಗೂ ಏಪ್ರಿಲ್‌ನಿಂದ ಜೂನ್ (ವಿಸ್ತರಣೆಯ ನಂತರ) ಅವಧಿಯ ಆದಾಯವನ್ನು ಹೋಲಿಸಿದಾಗ ಕಂಡುಬಂದ ಪ್ರಮುಖ ವ್ಯತ್ಯಾಸಗಳು ಹೀಗಿವೆ:

ರೈಲ್ವೆ ನಿಲ್ದಾಣ ಜನವರಿ – ಮಾರ್ಚ್ ಆದಾಯ (₹) ಏಪ್ರಿಲ್ – ಜೂನ್ ಆದಾಯ (₹) ಆದಾಯದಲ್ಲಿನ ಹೆಚ್ಚಳ (₹)
ಸುಬ್ರಹ್ಮಣ್ಯ ರೋಡ್  2,90,40,404 3,02,45,904 12,05,500 (₹12 ಲಕ್ಷಕ್ಕೂ ಹೆಚ್ಚು)
ಕಬಕ ಪುತ್ತೂರು 1,09,34,431 1,22,44,465 13,10,034 (₹13.1 ಲಕ್ಷ)
ಬಂಟವಾಳ  65,47,160 76,75,877 11,28,717 (₹11.2 ಲಕ್ಷ)
ಕಣಿಯೂರು  8,965 89,050 80,085 (ಯಶಸ್ಸಿನ ಜಿಗಿತ)
ಕೊಡಿಂಬಾಳ  26,775 83,290 56,515
ಎಡಮಂಗಲ  8,915 42,190 33,275
ಬಾಜಕರೆ  8,880 31,570 22,690
ನರಿಮೊಗರು  2,855 17,300 14,445
ನೆರಲಕಟ್ಟೆ  8,025 8,880 855

‘ಅಮೃತ್ ಭಾರತ್ ನಿಲ್ದಾಣ’ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ಬಂಟವಾಳ ನಿಲ್ದಾಣದಲ್ಲೂ ಭಾರಿ ಪ್ರಮಾಣದ ಆದಾಯ ಸಂಗ್ರಹವಾಗುತ್ತಿರುವುದು ರೈಲ್ವೆ ಇಲಾಖೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಸುಬ್ರಹ್ಮಣ್ಯ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮತ್ತು ಸ್ಥಳೀಯ ಗ್ರಾಮೀಣ ಜನರಿಗೆ ಈ ರೈಲು ಸೇವೆ ಅತ್ಯಂತ ಸಂಜೀವಿನಿಯಾಗಿದೆ. ಹೀಗಾಗಿ ರೈಲ್ವೆ ಇಲಾಖೆಯು ಆದಾಯ ತಂದುಕೊಡುತ್ತಿರುವ ಈ ಗ್ರಾಮೀಣ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್, ಕುಡಿಯುವ ನೀರು, ನೆರಳು ಮತ್ತು ವಿದ್ಯುತ್ ದೀಪ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ?: ರಾಜ್ಯದಲ್ಲಿ ಲೈಂಗಿಕ ಕಿರುಕುಳವೇ ನಂಬರ್ 1 ಅಪರಾಧ; ಅಪರಾಧಿಗಳಿಗೆ ಸಿಗುತ್ತಿಲ್ಲ ಶಿಕ್ಷೆ

ಮಂಗಳೂರು–ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಆದಾಯದ ಸುರಿಮಳೆ:

ಮಂಗಳೂರು ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ರೈಲು ಮಾರ್ಗವು ವಾಣಿಜ್ಯ ಹಾಗೂ ಪ್ರಯಾಣಿಕರ ದಟ್ಟಣೆಯಲ್ಲಿ ಹೊಸ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. 2025ರ ಜನವರಿಯಿಂದ 2026ರ ಆಗಸ್ಟ್​​​​ವರೆಗೆ ಕೇವಲ 20 ತಿಂಗಳ ಅವಧಿಯಲ್ಲಿ ಈ ವಿಭಾಗದ ಒಂಬತ್ತು ನಿಲ್ದಾಣಗಳ ಮೂಲಕ ಸುಮಾರು 16.38 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ನೈಋತ್ಯ ರೈಲ್ವೆ ಇಲಾಖೆಗೆ ಬರೋಬ್ಬರಿ 31.31 ಕೋಟಿ ರೂ. ಆದಾಯ ಹರಿದುಬಂದಿದೆ.

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವೇ ‘ನಂಬರ್ ಒನ್’:

ಈ ಸಮಗ್ರ ಸಾಧನೆಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವು ಸಿಂಹಪಾಲು ಪಡೆದುಕೊಂಡು ಅಗ್ರಸ್ಥಾನದಲ್ಲಿದೆ. ಕೇವಲ ಈ ಒಂದೇ ನಿಲ್ದಾಣದಿಂದ ಒಟ್ಟು 8.05 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದು, ಇಡೀ ಮಾರ್ಗದ ಒಟ್ಟು ಪ್ರಯಾಣಿಕರ ದಟ್ಟಣೆಯ ಶೇಕಡಾ 49ರಷ್ಟು ಕೊಡುಗೆ ನೀಡಿದೆ. ಇಡೀ ವಿಭಾಗದ ಒಟ್ಟು ಆದಾಯದಲ್ಲಿ ಬರೋಬ್ಬರಿ ಶೇಕಡಾ 60ರಷ್ಟು ಅಂದರೆ ಸುಮಾರು 18.86 ಕೋಟಿ ರೂ. ಆದಾಯ ಸುಬ್ರಹ್ಮಣ್ಯ ರೋಡ್ ನಿಲ್ದಾಣ ಒಂದರಿಂದಲೇ ಹರಿದುಬಂದಿದೆ. ವರ್ಷಪೂರ್ತಿ ನಡೆಯುವ ಧಾರ್ಮಿಕ ಉತ್ಸವಗಳು, ಹಬ್ಬ, ಚಂಪಾ ಶಷ್ಠಿ ಜಾತ್ರೆ ಹಾಗೂ ದಿನನಿತ್ಯ ಆಗಮಿಸುವ ಲಕ್ಷಾಂತರ ತೀರ್ಥಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಈ ಭಾರಿ ಆದಾಯಕ್ಕೆ ಪ್ರಮುಖ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us