ಮುಸ್ಲಿಂ, ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಬಂಟ್ವಾಳದ ಬಿಸಿ ರೋಡ್​ ಶಾಂತ

ನಾಗಮಂಗಲ ಕೋಮುಗಲಭೆ ನಂತರ ಮಂಗಳೂರಿನಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತ್ತು. ಮುಸ್ಲಿಂ ಮತ್ತು ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗನ್ನಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ ಶಾಂತವಾಗಿದೆ. ​​

ಮುಸ್ಲಿಂ, ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಬಂಟ್ವಾಳದ ಬಿಸಿ ರೋಡ್​ ಶಾಂತ
ಉದ್ವಿಗ್ನಗೊಂಡಿದ್ದ ಬಂಟ್ವಾಳದ ಬಿಸಿ ರೋಡ್​ ಶಾಂತ
Follow us
| Updated By: ವಿವೇಕ ಬಿರಾದಾರ

Updated on: Sep 16, 2024 | 11:02 AM

ಮಂಗಳೂರು, ಸೆಪ್ಟೆಂಬರ್​​ 16: ಮುಸ್ಲಿಂ (Muslim) ಮತ್ತು ಹಿಂದೂ (Hindu) ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದ ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಬಿಸಿ ರೋಡ್​​ನಲ್ಲಿ (BC Road) ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಕಾರ್ಯಚಟುವಟಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ದಕ್ಷಿಣ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿದ ಮುಸ್ಲಿಂ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು, ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ನಡೆದಿದ್ದು ಏನು? ಇಲ್ಲಿದೆ ಸಂಪೂರ್ಣ ವಿವರ.

ಮುಸ್ಲಿಂ ಮುಖಂಡರ ಹೇಳಿಕೆ

ಬಿಸಿ ರೋಡ್​ನಲ್ಲಿ ಸೋಮಾವರ (ಸೆ.16) ಬೆಳಗ್ಗೆ ಈದ್​ ಮಿಲಾದ್ ಮೆರವಣಿಗೆ ನಡೆಯಿತು. ರವಿವಾರ ಒಂದಡೆ ಹಬ್ಬದ ತಯಾರಿ ನಡೆಯುತ್ತಿದ್ದರೆ, ಮತ್ತೊಂದಡೆ ಸಂಜೆ ಕೆಲ ಮುಸ್ಲಿಂ ಮುಖಂಡರು ಆಡಿಯೋ ರೆಕಾರ್ಡ್​ ಮಾಡಿ “ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ. “ಶರಣ್ ಪಂಪ್​ವೆಲ್ ಸೋಮವಾರ ಬಿಸಿ ರೋಡ್​ನಿಂದ ಕೈಕಂಬದವರೆ ಮಸೀದಿವರೆಗೆ ಈದ್ ಮಿಲಾದ್ ಮೆರವಣಿಗೆ ಮಾಡುತ್ತೇವೆ” ನೀನಾಗಲಿ ನಿನ್ನ ಚೇಲಾಗಳಾಗಲಿ ಯಾರು ಬಿ.ಸಿ.ರೋಡಿನಲ್ಲಿದ್ದಾರೆ, ನಿಮಗೆ ತಾಕತ್ತು ಧಮ್ಮು ಇದ್ದರೆ ನಮ್ಮ ಮೆರವಣಿಗೆ ಹೋಗುವಾಗ ಬಂದು ನಿಲ್ಲಬೇಕು. ದಾಳಿ ಮಾಡುವ ವಿಷಯ ಬಿಡು, ಅದು ನಿನ್ನಿಂದ (ಶರಣ್ ಪಂಪ್​ವೆಲ್) ಆಗದ ವಿಷಯ. ನೀನು ಕೇವಲ ಮಾಧ್ಯಮದ ಎದುರು ಮಾತ್ರ ಬಾಯಿಗೆ ಬಂದ ಹಾಗೆ ಬೊಗಳಿ ಹೋಗುತ್ತೀಯಾ” ಎಂದು ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸದಸ್ಯನ ಸಹೋದರ ಹಸೀನಾರ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು.

ಹಿಂದೂ ಮುಖಂಡರ ಪ್ರತ್ಯುತ್ತರ

ಇದರಿಂದ ಆಕ್ರೋಶಗೊಂಡ ಭಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಫೇಸ್​ಬುಕ್​ ಮುಖಾಂತರ ಬಿ.ಸಿ.ರೋಡ್ ಚಲೋ ಕರೆ ನೀಡಿದ್ದರು. “ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ, ನಾವು ಬರುತ್ತಿದ್ದೇವೆ. ನಿಮಗೆ ತಾಕತ್ತು ಇದ್ದರೆ ತಡೆಯಿರಿ. ನೀನು ಹೇಳಿದ ಜಾಗಕ್ಕೆ ಬರುತ್ತೇವೆ. ಹಿಂದುತ್ವ ಮೇಲಾ ಅಥವಾ ಜಿಹಾದಿಗಳಾದ ನೀವು ಮೇಲಾ ಎಂದು ನೋಡೆ ಬಿಡುವ” ಎಂದು ಪೋಸ್ಟ್​ ಮಾಡಿದ್ದರು.

ಪೊಲೀಸ್​ ಅಲರ್ಟ್​​

ಸಾಮಾಜಿಕ ಜಾಲತಾಲಣದಲ್ಲಿ ಹರಿದಾಡಿದ ಪೋಸ್ಟ್​ನಿಂದ ಎಚ್ಚತ್ತ ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡಿದ ಭಜರಂಗದಳ ಮುಖಂಡ ಪುನೀತ್ ಅತ್ತಾವರ ಮತ್ತು ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್​ವೆಲ್​, ವಿರುದ್ಧ ಮಂಗಳೂರಿನ ಸೆನ್​​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಪ್ರಚೋದನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಹರಿಬಿಟ್ಟಿದ್ದ ಮುಸ್ಲಿಂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ: ರಕ್ಷಣೆ ಮಾಡಿ ಎಂದು ಅಂಗಲಾಚಿದರೂ ಕೈ ಕಟ್ಟಿ ನಿಂತ ಪೊಲೀಸರು

ಬಿಸಿ ರೋಡ್​​ಗೆ ಬಂದ ಶರಣ ಪಂಪವೇಲ್​

ಬೆಳ್ಳಂ ಬೆಳಗ್ಗೆ ಹಿಂದು ಸಂಘಟನೆ ಕಾರ್ಯಕರ್ತರು ಬಿಸಿ ರೋಡ್​ನ ರಕ್ತೇಶ್ವರಿ ದೇವಸ್ಥಾನದ ಬಳಿ ಜಮಾವಣೆಯಾದರು. ಕೆಲ ಹೊತ್ತಿನ ಬಳಿಕ ಶರಣ್ ಪಂಪವೆಲ್, ಪುನೀತ್ ಅತ್ತಾವರ ಕೂಡ ಆಗಮಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರಣ್​ ಪಂಪ್​ವೆಲ್​, ಕೇವಲ ಶರಣ್​ ಪಂಪ್​​ವೆಲ್​​ಗೆ​ ಸವಾಲು ಹಾಕಿದ್ದಲ್ಲ. ಇಡೀ ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ದರು. ಹೀಗಾಗಿ ಬಿ.ಸಿ.ರೋಡ್​​ಗೆ ನಾವು ಬಂದಿದ್ದೇವೆ. ನಮ್ಮ ಱಲಿಯನ್ನು ಪೊಲೀಸರು ತಡೆದಿದ್ದನ್ನು ಖಂಡಿಸ್ತೇನೆ. ನಾನು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ನಾಗಮಂಗಲದಲ್ಲಿ ಹಿಂದೂ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಸವಾಲು ಹಾಕಿದವನಿಗೆ ತಾಕತ್​ ಇದ್ದರೆ ಇಲ್ಲಿಗೆ ಬರಬೇಕಿತ್ತು ಎಂದು ಹೇಳಿದರು.

ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪೊಲೀಸ್​

ಎಸ್​​ಪಿ ಎನ್​.ಯತೀಶ್ ಮಾತನಾಡಿ, ಕೈಕಂಬ ಮಸೀದಿಯ ಈದ್​ ಮಿಲಾದ್​ ಮೆರವಣಿಗೆ ಮಾರ್ಗ ಬದಲಿಸಿಲ್ಲ. ಹಿಂದೂ ಸಂಘಟನೆಗಳು ಶಾಂತಿಯುತ ಧರಣಿ ನಡೆಸುತ್ತೇವೆಂದಿದ್ದರು. ಹಾಗಾಗಿ ಬಿ.ಸಿ.ರೋಡ್​​ ಜಂಕ್ಷನ್​ನಲ್ಲಿ ಅವಕಾಶ ನೀಡಿದ್ದೇವೆ. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಿ.ಸಿ.ರೋಡ್​​ನಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು. ಬಿಸಿ ರೋಡ್​ನಲ್ಲಿ ಕೆ.ಎಸ್.ಆರ್.ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮುಕ್ಕಾಂ ಹೂಡಿವೆ. ಪರಸ್ಪರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ