Mangaluru: ಬಲಪಂಥೀಯ ವೇದಿಕೆಗಳಿಂದ ವಿರೋಧ; ಕಾಲೇಜು ಪಾರ್ಕ್​ಗೆ ಸ್ಟಾನ್ ಸ್ವಾಮಿ ಹೆಸರಿಡುವ ನಿರ್ಧಾರ ಮುಂದೂಡಿಕೆ

Mangaluru News: ಸದ್ಯ ಬೆದರಿಕೆಗಳು ಕೇಳಿಬಂದಿರುವುದರಿಂದ ಉದ್ಯಾನವನಕ್ಕೆ ಸ್ಟಾನ್ ಸ್ವಾಮಿ ಹೆಸರಿಡುವ ನಿರ್ಧಾರ ಮುಂದೂಡಲಾಗಿದೆ. ಹೆಚ್ಚಿನ ಚರ್ಚೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗುವುದು ಎಂದು ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಸ್ಪಷ್ಟನೆ ನೀಡಿದ್ದಾರೆ.

Mangaluru: ಬಲಪಂಥೀಯ ವೇದಿಕೆಗಳಿಂದ ವಿರೋಧ; ಕಾಲೇಜು ಪಾರ್ಕ್​ಗೆ ಸ್ಟಾನ್ ಸ್ವಾಮಿ ಹೆಸರಿಡುವ ನಿರ್ಧಾರ ಮುಂದೂಡಿಕೆ

ಮಂಗಳೂರು: ಇಲ್ಲಿನ ಖಾಸಗಿ ಅಟೋನೊಮಸ್ ಕಾಲೇಜಿನ ಉದ್ಯಾನವನವಕ್ಕೆ ಬುಡಕಟ್ಟು ಜನಾಂಗದ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಹೆಸರಿಡುವ ನಿರ್ಧಾರವನ್ನು ಕಾಲೇಜು ಆಡಳಿತ ಮಂಡಳಿ ಮುಂದೂಡಿದೆ. ಹಿಂದೂ ಬಲಪಂಥೀಯ ವೇದಿಕೆಗಳು ಸ್ಟಾನ್ ಸ್ವಾಮಿ ವಿರುದ್ಧ ನಗರ ನಕ್ಸಲ್ ಎಂಬ ನೆಲೆಯಲ್ಲಿ ಪ್ರತಿಭಟನೆ ಮಾಡಿರುವುದರಿಂದ ಹಾಗೂ ಕಾಲೇಜಿನ ಉದ್ಯಾನವನಕ್ಕೆ ಸ್ಟಾನ್ ಸ್ವಾಮಿ ಹೆಸರಿಡುವುದಕ್ಕೆ ವಿರೋಧ ವ್ಯಕ್ತವಾದ ಕಾರಣ ಈ ನಿರ್ಣಯ ಕೈಗೊಳ್ಳಲಾಗಿದೆ.

ನಗರದ ಸಂತ ಅಲೋಷಿಯಸ್ ಕಾಲೇಜು ಸಂಸ್ಥೆಯಲ್ಲಿನ ಉದ್ಯಾನವನಕ್ಕೆ ಫಾದರ್ ಸ್ಟಾನ್ ಸ್ವಾಮಿ ಹೆಸರಿಡುವ ತೀರ್ಮಾನ ಕೈಗೊಂಡಿತ್ತು. ಬುಡಕಟ್ಟು ಜನಾಂಗ ಹಾಗೂ ಬಡವರ ಬಗ್ಗೆ ಸ್ಟಾನ್ ಸ್ವಾಮಿ ಅವರು ಕೈಗೊಂಡ ಕೆಲಸಗಳನ್ನು ಪರಿಗಣಿಸಿ ಈ ನಿರ್ಧಾರ ಮಾಡಲಾಗಿತ್ತು. ಈ ಬಗ್ಗೆ ಕಾಲೇಜಿನ ಮುಖ್ಯಸ್ಥರು ಹಾಗೂ ಮಂಗಳೂರು ಜೆಸುಯಿಟ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರಾದ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಬೆದರಿಕೆಗಳು ಕೇಳಿಬಂದಿರುವುದರಿಂದ ಉದ್ಯಾನವನಕ್ಕೆ ಸ್ಟಾನ್ ಸ್ವಾಮಿ ಹೆಸರಿಡುವ ನಿರ್ಧಾರ ಮುಂದೂಡಲಾಗಿದೆ. ಹೆಚ್ಚಿನ ಚರ್ಚೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕರಾವಳಿ ಪ್ರದೇಶ, ರಾಜ್ಯದ ಪ್ರಮುಖ ನಗರ ಮಂಗಳೂರಿನಲ್ಲಿ ಇದಕ್ಕೆ ಮೊದಲು ಕೂಡ ಹಲವು ಕೋಮು ಗಲಭೆಗಳು ಆಗಿರುವ ನಿದರ್ಶನಗಳು ಇವೆ. ಕಾಲೇಜು ಉದ್ಯಾನಕ್ಕೆ ಸ್ಟಾನ್ ಸ್ವಾಮಿ ಹೆಸರಿಡುವ ವಿಚಾರದಲ್ಲಿ ಕೂಡ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖ್ಯವಾಗಿ ವಿರೋಧ ವ್ಯಕ್ತಪಡಿಸಿವೆ. ಪ್ರಕರಣ ಸಂಬಂಧ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್​ವೆಲ್ ಹೇಳಿಕೆ ನೀಡಿದ್ದಾರೆ. ಸ್ಟಾನ್ ಸ್ವಾಮಿ ಹಲವು ಆಪಾದನೆಗಳನ್ನು ಎದುರಿಸುತ್ತಿದ್ದರು. ನಗರ ನಕ್ಸಲ್ ಆಗಿದ್ದರು. ಭಿಮಾ ಕೊರೆಗಾಂವ್ ಪ್ರಕರಣದಲ್ಲಿ ಕೂಡ ಆರೋಪ ಹೊತ್ತಿದ್ದರು ಎಂದು ಹೇಳಿದ್ದಾರೆ.

ಉದ್ಯಾನವನಕ್ಕೆ ಹೆಸರಿಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಅವರು ಆಸ್ಕರ್ ಫರ್ನಾಂಡಿಸ್ ಅಥವಾ ಜಾರ್ಜ್ ಫರ್ನಾಂಡಿಸ್ ಹೆಸರನ್ನು ಉದ್ಯಾನವನಕ್ಕೆ ಇಡಬಹುದು. ಅಥವಾ ಸಂತ ಅಲೋಷಿಯಸ್ ಕಾಲೇಜಿನ ಸ್ಥಾಪಕ ಫಾದರ್ ಹೆಸರನ್ನು ಇಡಬಹುದು. ಸ್ಟಾನ್ ಸ್ವಾಮಿ ತೀರಿಕೊಂಡಿದ್ದರು ಕೂಡ ಅವರ ವಿರುದ್ಧ ಇರುವ ಆರೋಪಗಳಿಗೆ ತೀರ್ಪು ಸಿಕ್ಕಿಲ್ಲ ಎಂದು ಶರಣ್ ಪಂಪ್​ವೆಲ್ ತಿಳಿಸಿದ್ದಾರೆ.

ಈ ಹೇಳಿಕೆಗಳನ್ನು ಅಲ್ಲಗಳೆದಿರುವ ಫಾದರ್ ಪಿಂಟೊ, ತಾವು ವೈಯಕ್ತಿಕವಾಗಿ ಸ್ಟಾನ್ ಸ್ವಾಮಿ ಜೊತೆಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. ಹಾಗೂ ಸ್ಟಾನ್ ಸ್ವಾಮಿ ದೇಶದ ಎಲ್ಲೆಡೆ ಬುಡಕಟ್ಟು ಜನಾಂಗದ ಏಳಿಗೆಗಾಗಿ, ಅದರಲ್ಲೂ ವಿಶೇಷವಾಗಿ ಜಾರ್ಖಂಡ್​ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಸ್ಟಾನ್ ಸ್ವಾಮಿಯ ಹತ್ಯೆ ಮಾಡಲಾಗಿದೆ; ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ ಶಿವಸೇನಾ ಸಂಸದ ಸಂಜಯ್ ರಾವುತ್

ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿ ನಿಧನ; ರಾಷ್ಟ್ರಪತಿಗಳಿಗೆ ಪತ್ರ ಬರೆದು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕರು

Read Full Article

Click on your DTH Provider to Add TV9 Kannada