ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ ಅಸ್ತಂಗತ
ಕಲಾವಿದ ಮಹಾದೇವ ವೇಳಿಪ ನೂರಾರು ಬಗೆಯ ಗೆಡ್ಡೆ ಗೆಣಸುಗಳನ್ನು ಉಳಿಸಿ ಬೆಳಸುವ ಜೊತೆಗೆ ಅರಣ್ಯ ಸಂರಕ್ಷಣೆ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ ಪರಿಸರ ಪ್ರೇಮಿಯಾಗಿದ್ದರು.
ಕಾರವಾರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (90)(Mahadev Velipa) ಅಸ್ತಂಗತರಾಗಿದ್ದಾರೆ. ಜೋಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪ ವಯೋ ಸಹಜತೆಯ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ನಿಂತಿದ್ದ ಹಾಗೂ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಮಹಾದೇವ ವೇಳಿಪ ಈಗ ಕೇವಲ ನೆನಪು ಮಾತ್ರ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ, ಜಾನಪದ ಕಲಾವಿದ ಮಹದೇವ ವೇಳಿಪ ವಯೋಸಹಜ ಕಾಯಿಲೆಯಿಂದ ಬೆಳಗ್ಗೆ ಅಸ್ತಂಗತರಾಗಿದ್ದಾರೆ. ಜೊಯಿಡಾ ತಾಲ್ಲೂಕಿನ ಕಾರ್ಟೋಳಿ ಗ್ರಾಮದ ನಿವಾಸಿಯಾಗಿದ್ದ ಇವರು ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಪರಿಸರ ಕಾಳಜಿ ಅಪಾರ ಜ್ಞಾನವನ್ನ ಪರಿಗಣಿಸಿ 2021ರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ರಾಜ್ಯ ಸರ್ಕಾರ ಗೌರವಿಸಿತ್ತು. ಈ ಪುರಸ್ಕಾರಕ್ಕೆ ಜೊಯಿಡಾ ತಾಲ್ಲೂಕಿನಿಂದ ಪಾತ್ರರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಗೂ ಅವರು ಪಾತ್ರರಾಗಿದ್ದರು.
ವೇಳಿಪ ಅವರು ಮೂಲತಹ ಕೃಷಿ ಕುಟುಂಬದವರು, ಅಡಿಕೆ, ಬಾಳೆ, ತೆಂಗು, ಕಾಳ ಮೆಣಸು, ಹಲವು ಔಷಧಿ ಗುಣವುಳ್ಳ ಸಸ್ಯಗಳು, ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿದ್ದರು. ಇನ್ನೂ ಹಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬುಡಕಟ್ಟು ಕುಣಬಿ ಸಂಸ್ಕೃತಿಯ ಬಗ್ಗೆ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಅವರ ಮುಂಜಾವು ಪ್ರಾರಂಭವಾಗುವುದೇ ಬುಡಕಟ್ಟು ಸಂಸ್ಕೃತಿಯ ಹಾಡುಗಳನ್ನು ಹಾಡುತ್ತ ಆಗುತ್ತಿತ್ತು. ಅಷ್ಟೊಂದು ಪ್ರೇಮ ಅವರಿಗೆ ಇತ್ತು.
ವಿಶೇಷ ಅಂದರೆ ಅವರು ಕೈಗೆ ವಾಚ್ ಕಟ್ಟದೆ ಹಕ್ಕಿಗಳ ಕೂಗನ್ನು ಆಧರಿಸಿ ನಿಖರವಾದ ಸಮಯ ಹೇಳುವ ಕಲೆ ಅವರಿಗೆ ಕರತಗವಾಗಿತ್ತು. ಅಷ್ಟೊಂದು ಪ್ರಾಣಿಗಳ ಜೊತೆ ಬೆರೆತು ತಮ್ಮ ಜೀವನ ನಡೆಸುತ್ತಿದ್ದರು. ಇನ್ನು ಕಾಡಿನಿಂದ ಒಣ ಎಲೆಗಳನ್ನು ತರುವುದನ್ನು ಅವರು ವಿರೋಧಿಸುತ್ತಿದ್ದರು. ಪರಿಸರ ಸಮತೋಲನದಲ್ಲಿ ಜೇನು ನೊಣಗಳು ಮತ್ತು ಉಂಬಳ ರಕ್ಷಣೆ, ಕಾಡಿನಿಂದ ಒಣ ಎಲೆಗಳನ್ನು ತರಬಾರದು ಎಂದು ಅದರ ಮಹತ್ವವನ್ನು ಜನರಿಗೆ ತಿಳಿ ಹೇಳುತ್ತಿದ್ದರು. 38 ಜಾತಿಯ ಗೆಡ್ಡೆ, ಗೆಣಸುಗಳನ್ನು ಗುರುತಿಸುತ್ತಿದ್ದರು. ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಪ್ರತಿ ಹಂತದಲ್ಲೂ ಇವರು ಸಾಂಪ್ರದಾಯಿಕ ಸಾಂಸ್ಕೃತಿಕ ಹಾಡುಗಳನ್ನು ಹಾಡಿ ಮುಂದಿನ ಕಾರ್ಯಗಳನ್ನು ಮಾಡುತ್ತಿದ್ದರು.
ಇವನ್ನೆಲ್ಲ ಪರಿಗಣಿಸಿ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಇಂದು ಮಹದೇವ ವೇಳಿಪ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯು ಕಾರ್ಟೋಳಿಯಲ್ಲಿ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ.
ಇದನ್ನೂ ಓದಿ: ಇಟಲಿಯಲ್ಲಿ 70ರ ವೃದ್ಧೆಯ ಸಾವು 2 ವರ್ಷಗಳ ನಂತರ ಬೆಳಕಿಗೆ; ಜನರ ಅಂತರಾತ್ಮವನ್ನು ಕದಕಿದ ಘಟನೆ
Published On - 9:27 am, Thu, 10 February 22