ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಅಸ್ತು; ಸ್ಥಳಕ್ಕೂ ಹೋಗದ ಸಿಬಿಐಗೆ ತರಾಟೆ

ದಕ್ಷಿಣ ಕನ್ನಡದ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿದೆ. ಸಿಬಿಐ ತನಿಖಾ ವೈಫಲ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಮುಂದಿನ ತನಿಖಾ ಸಂಸ್ಥೆ ಬಗ್ಗೆ ನಿರ್ಧಾರ ಕಾಯ್ದಿರಿಸಿದೆ. ರಾಜ್ಯ ಸರ್ಕಾರ ಎಸ್‌ಐಟಿ ರಚನೆಗೆ ಸಿದ್ಧವಿದ್ದು, ಸೌಜನ್ಯ ತಾಯಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಒತ್ತಾಯಿಸಿದ್ದಾರೆ. ಇದು 14 ವರ್ಷಗಳ ಹೋರಾಟದ ನಂತರ ನ್ಯಾಯದ ಹೊಸ ಭರವಸೆ ಮೂಡಿಸಿದೆ.

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಅಸ್ತು; ಸ್ಥಳಕ್ಕೂ ಹೋಗದ ಸಿಬಿಐಗೆ ತರಾಟೆ
ಸೌಜನ್ಯ ಮತ್ತು ಸುಪ್ರೀಂ ಕೋರ್ಟ್​​
Edited By:

Updated on: Jul 22, 2026 | 7:24 PM

ಮಂಗಳೂರು ಜು 22: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 14 ವರ್ಷಗಳ ಹಿಂದೆ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಜು.22) ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಕರಣದ ಮರುತನಿಖೆಗೆ ಸಮ್ಮತಿಸಿರುವ ಸುಪ್ರೀಂ ಕೋರ್ಟ್ , ವಿಚಾರಣೆ ವೇಳೆ ಸಿಬಿಐ ತನಿಖೆಯ ದಾರಿಯನ್ನು ನೋಡಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ತನಿಖೆಯ ಸ್ವರೂಪ ಹಾಗೂ ಯಾವ ಏಜೆನ್ಸಿ ಮೂಲಕ ಮರುತನಿಖೆ ನಡೆಸಬೇಕು ಎಂಬುದರ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ತನ್ನ ಆದೇಶವನ್ನು ಕಾಯ್ದಿರಿಸಿದೆ.

ಸ್ಥಳಕ್ಕೂ ಹೋಗಿಲ್ಲ, ನೆಪ ಹೇಳಬೇಡಿ: ಸಿಬಿಐಗೆ ಸುಪ್ರೀಂ ತರಾಟೆ

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಬಿಐ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣ ನಡೆದು 14 ವರ್ಷಗಳಾಗಿದ್ದರೂ ಸರಿಯಾದ ತನಿಖೆ ನಡೆದಿಲ್ಲ. ಸಿಐಡಿ (CID) ನೀಡಿದ್ದ ವರದಿಯನ್ನಷ್ಟೇ ಸಿಬಿಐ ಭಾಷಾಂತರಿಸಿ  ಸಿದ್ದಪಡಿಸಲಾಗಿದೆ. ಹೊರತು, ಸಿಬಿಐ ತನಿಖಾಧಿಕಾರಿ ಘಟನಾ ಸ್ಥಳಕ್ಕೂ ಭೇಟಿ ನೀಡಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಇನ್ನೂ ಕೆಲವು ಆರೋಪಿಗಳ ವಿರುದ್ಧ ತನಿಖೆ ನಡೆಸಬೇಕಿದೆ ಎಂದು ಈ ಹಿಂದೆ ಹೇಳಿದ್ದ ಸಿಬಿಐ, ಈಗ ಸಿಬ್ಬಂದಿ ಕೊರತೆ ಮತ್ತು ಹಣಕಾಸಿನ ಅಭಾವ ಎಂದು ನೆಪ ಹೇಳುತ್ತಿರುವುದು ಅತ್ಯಂತ ಅಸಮಂಜಸ ಎಂದು ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಎಸ್‌ಐಟಿ ರಚನೆಗೆ ರಾಜ್ಯ ಅಸ್ತು; ನಿವೃತ್ತ ಜಡ್ಜ್ ಉಸ್ತುವಾರಿಗೆ ತಾಯಿ ಪಟ್ಟು:

ವಿಚಾರಣೆ ವೇಳೆ ರಾಜ್ಯ ಸರ್ಕಾರವು ಪ್ರಕರಣದ ಮರುತನಿಖೆಗಾಗಿ ‘ವಿಶೇಷ ತನಿಖಾ ತಂಡ’ವನ್ನು ರಚಿಸಲು ತಾನು ಸಂಪೂರ್ಣ ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಅರ್ಜಿದಾರರಾದ ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು, “ಸಿಬಿಐ ಮೇಲಿನ ಭರವಸೆ ಹುಸಿಯಾಗಿದ್ದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇರ ಉಸ್ತುವಾರಿಯಲ್ಲೇ ಮರುತನಿಖೆ ನಡೆಯಬೇಕು” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: TV9 Kannada News Live: ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಅಂತಿಮ ಆದೇಶದಲ್ಲಿ ವಿಸ್ತೃತ ನಿರ್ದೇಶನ:

ಮರುತನಿಖೆಯನ್ನು ಎಸ್‌ಐಟಿಗೆ ವಹಿಸಬೇಕೇ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತಂಡಕ್ಕೆ ನೀಡಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶದಲ್ಲಿ ವಿಸ್ತೃತವಾದ ನಿರ್ದೇಶನಗಳು ಹಾಗೂ ಮಾರ್ಗಸೂಚಿಗಳನ್ನು ನೀಡಲಿದೆ.  ಇನ್ನು ನಾಳೆ ಯಾರು ಈ ತನಿಖೆಯನ್ನು ನಡೆಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್​​ ತಿಳಿಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:12 pm, Wed, 22 July 26

Follow Us