ಸೌಜನ್ಯ-ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ!: ತನಿಖೆ ನಡೆಸುವಂತೆ ಎಸ್​​ಐಟಿಗೆ ದೂರು ಸಲ್ಲಿಕೆ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸೌಜನ್ಯ ಹಾಗೂ ಕುಸುಮಾವತಿ ನಡುವಿನ ತಾಯಿ-ಮಗಳ ಸಂಬಂಧ ಮತ್ತು ಜಮೀನು ವಿವಾದದ ಬಗ್ಗೆ ಮರುತನಿಖೆ ನಡೆಸುವಂತೆ ಧರ್ಮಸ್ಥಳದ ನಿವಾಸಿ ಎಸ್‌ಐಟಿಗೆ ಹೊಸ ದೂರು ನೀಡಿದ್ದಾರೆ. ಆಧಾರ್, ಪಡಿತರ ಚೀಟಿ ದಾಖಲೆಗಳಲ್ಲಿ ವ್ಯತ್ಯಾಸ ಇವೆ. ಹೀಗಾಗಿ ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಸಂಶಯ ವ್ಯಕ್ತವಾಗಿದೆ.

ಸೌಜನ್ಯ-ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ!: ತನಿಖೆ ನಡೆಸುವಂತೆ ಎಸ್​​ಐಟಿಗೆ ದೂರು ಸಲ್ಲಿಕೆ
ಸೌಜನ್ಯ-ಕುಸುಮಾತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ
Edited By:

Updated on: Oct 29, 2026 | 3:02 PM

ಮಂಗಳೂರು, ಅಕ್ಟೋಬರ್​​ 29: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡಯವೆಯೇ ಸೌಜನ್ಯ ಹಾಗೂ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಮಂಗಳೂರು ಎಸ್ಐಟಿ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಕುಸುಮಾವತಿ ಅವರು ಸೌಜನ್ಯ ತಾಯಿ ಹೌದಾ ಎಂಬ ಬಗ್ಗೆ ತನಿಖೆ ನಡೆಸುವಂತೆ ಧರ್ಮಸ್ಥಳ ಗ್ರಾಮಸ್ಥ ಕಿಶೋರ್ ಎಂಬವರು ಆಗ್ರಹಿಸಿದ್ದಾರೆ. ಈ ಮೂಲಕ ಸೌಜನ್ಯ ಕೇಸ್​​ ಸಂಬಂಧ ಮತ್ತೊಂದು ಹೊಸ ಬೆಳವಣಿಗೆ ಆದಂತಾಗಿದೆ.

‘ಕುಸುಮಾವತಿ ಸಲ್ಲಿಸಿರುವ ಪ್ರಮಾಣ ಪತ್ರವೇ ಸುಳ್ಳು’

2015ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದ ಇಂದಿರಾವತಿ ಕೋಂ ಚಂದಪ್ಪ ಗೌಡರಿಗೆ ಜಾಗ ಮಂಜೂರಾಗಿತ್ತು. ಆದರೆ ಸದ್ಯ ಈ ಜಾಗ ಕುಸುಮಾವತಿ ಹೆಸರಿನಲ್ಲಿ ಸ್ವಾಧೀನ ಇರುವ ಬಗ್ಗೆ ದಾಖಲೆ ಇವೆ. ಹೀಗಾಗಿ ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸ್ತವ್ಯ ಇಲ್ಲ ಎಂದು ಕಿಶೋರ್​​ ದೂರಿದ್ದಾರೆ. ಈ ಬಗ್ಗೆ ಎಸ್ಐಟಿ ರಚನೆಗೂ ಮೊದಲೇ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೂ ಅವರು ಕಂಪ್ಲೇಂಟ್​​ ನೀಡಿದ್ದಾರೆ. ಇಂದಿರಾವತಿ ಇರುವಿಕೆ ಹಾಗೂ ಮತ್ತೊಬ್ಬರ ಗುರುತಿನ ವಂಚನೆ ಬಗ್ಗೆ ತನಿಖೆಗೆ ಕಿಶೋರ್​​ ಆಗ್ರಹಿಸಿದ್ದು, ಇಂದಿರಾವತಿ ಮತ್ತು ತಾನು ಒಬ್ಬರೇ ಎಂದು ಕುಸುಮಾವತಿ ಸಲ್ಲಿಸಿರುವ ಪ್ರಮಾಣ ಪತ್ರವೇ ಸುಳ್ಳು ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚುರುಕುಗೊಂಡ ಸೌಜನ್ಯ ಕೇಸ್​​ ಮರುತನಿಖೆ: ಎಸ್​ಐಟಿ ಮುಂದೆ ಹಾಜರಾದ ಅಂದಿನ ಪೊಲೀಸ್​​ ಅಧಿಕಾರಿಗಳು

‘ಜಮೀನಿನ ವಿಚಾರಕ್ಕೆ ಕೊಲೆ ನಡೀತಾ?’

ಆಧಾರ್, ಪಡಿತರ ಚೀಟಿ ದಾಖಲೆಗಳಲ್ಲಿ ವ್ಯತ್ಯಾಸ ಇವೆ. ಹೀಗಾಗಿ ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಸಂಶಯವನ್ನು ಕಿಶೋರ್​​ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅನೇಕ ಅನುಮಾನಗಳು ಇರುವ ಕಾರಣ ಇಂದಿರಾವತಿ ಕೋಂ ಚಂದಪ್ಪ ಗೌಡ ಇರುವಿಕೆ ಬಗ್ಗೆ ತಕ್ಷಣ ತನಿಖೆ ನಡೆಸಬೇಕು. ಸೌಜನ್ಯ ವಾಸ್ತವವಾಗಿ ಯಾರ ಮಗಳು? ಇಂದಿರಾವತಿಯವರದ್ದೇ ಅಥವಾ ಕುಸುಮಾವತಿಯವರದ್ದೇ ಎಂಬುದರ ತನಿಖೆ ಆಗಬೇಕು. ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳು ಮತ್ತು ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆಯ ಮೂಲಕ ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕುಸುಮಾವತಿಯವರು ನಿಜವಾದ ತಾಯಿ ಅಲ್ಲದಿದ್ದರೂ ಜನರ ಸಹಾನುಭೂತಿ ಪಡೆಯುವ ಉದ್ದೇಶದಿಂದ ತಾನು ಸೌಜನ್ಯಳ ತಾಯಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆಯೂ ಗೊತ್ತಾಗಬೇಕು. ಜಮೀನಿನ ವಿಚಾರಕ್ಕೆ ಕೊಲೆ ನಡೀತಾ ಎನ್ನುವುದರ ಜೊತೆಗೆ ಸೌಜನ್ಯ ಮಾವ ವಿಟ್ಠಲ ಗೌಡ ವಿಚಾರಣೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ.

‘ನಮಗೆ ಯಾವುದೇ ಅನುಮಾನವಿಲ್ಲ’

ಮೃತ ಸೌಜನ್ಯ ಕುಸುಮಾವತಿ ಅವರ ಮಗಳಲ್ಲ ಎಂಬ ಬಗ್ಗೆ ನಮಗೆ ಸಂದೇಹವಿಲ್ಲ ಎಂದು ಮಂಗಳೂರು ಕಮಿಷನರ್, ಎಸ್​ಐಟಿ ತಂಡದ ಸದಸ್ಯ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ ಹಾಗೂ ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ. ಸ್ಥಳೀಯವಾಗಿ ಯಾವುದೇ ವಿವಾದಗಳಿದ್ದರೆ, ಸಂಬಂಧಪಟ್ಟ ಸ್ಥಳೀಯ ಪೊಲೀಸರು ಅವುಗಳನ್ನು ಪರಿಶೀಲಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:24 pm, Thu, 29 October 26

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us