ವಿಡಿಯೋ ನೋಡಿ: ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಣಿಸಿಕೊಂಡ ಆನೆ, ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರ
ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡು ವಾಹನ ಸವಾರರನ್ನು ಭೀತಿಗೊಳಗಾಗುವಂತೆ ಮಾಡಿದೆ. ಎರಡು ತಿಂಗಳ ಹಿಂದೆ ಕೂಡ ಘಾಟಿ ರಸ್ತೆಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿತ್ತು. ಇದೀಗ ಕಾಣಿಸಿಕೊಂಡಿರುವ ಕಾಡಾನೆಯ ವಿಡಿಯೊವನ್ನು ವಾಹನ ಸವಾರರು ಸೆರೆಹಿಡಿದಿದ್ದಾರೆ. ಬೈಕ್ ಸವಾರರೊಬ್ಬರು ಸಿನಿಮೀಯ ರೀತಿಯಲ್ಲಿ ಆನೆ ದಾಳಿಯಿಂದ ಪಾರಾಗಿದ್ದಾರೆ.
ಮಂಗಳೂರು, ಏಪ್ರಿಲ್ 9: ಕೆಲವು ತಿಂಗಳುಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ (Charmady Ghat) ಕಾಡಾನೆ (Wild Elephant) ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೆ ಒಂದು ಕಾಡಾನೆ ಕಾಣಿಸಿಕೊಂಡಿದೆ ಅಚ್ಚರಿಯೆಂದರೆ, ತಿರುವಿನಲ್ಲಿ ನಿಂತಿದ್ದ ಕಾಡಾನೆ ಕಾಣಿಸದೆ ಬಂದ ಬೈಕ್ ಸವಾರರು ಪವಾಡಸದೃಶರಾಗಿ ಪಾರಾಗಿದ್ದಾರೆ.
ಚಾರ್ಮಾಡಿ ಘಾಟ್‌ನ ಒಂಬತ್ತನೇ ತಿರುವಿನಲ್ಲಿ ಏಪ್ರಿಲ್ 8ರಂದು ಮಧ್ಯಾಹ್ನದ ಸಮಯದಲ್ಲಿ ಕಾಡಾನೆಯೊಂದು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಎರಡು ತಿಂಗಳ ಹಿಂದೆ ನಡೆದ ಇದೇ ರೀತಿಯ ಘಟನೆಯನ್ನು ನೆನಪಿಸಿದೆ. ಆಗಲೂ ಸಹ ಕಾಡಾನೆಗಳು ಹಗಲು ಹೊತ್ತಿನಲ್ಲಿ ರಸ್ತೆಗಳನ್ನು ದಾಟುತ್ತಿರುವುದು ನೋಡಿ ವಾಹನ ಸವಾರರು ಭಯಭೀತರಾಗಿದ್ದರು.
ನೆರಿಯದ ಬಂಜಾರುಮಲೆಯಿಂದ ಬಂದಿರಬಹುದೆಂದು ಭಾವಿಸಲಾದ ಆನೆಯು ಅರಣ್ಯದ ಕಡೆಗೆ ಹೋಗುವ ಮೊದಲು ಸ್ವಲ್ಪ ಸಮಯ ರಸ್ತೆಬದಿಯಲ್ಲಿ ನಿಂತಿತ್ತು.
ಆನೆಯನ್ನು ಗಮನಿಸಿದ ವಾಹನ ಸವಾರರು ತಮ್ಮ ವಾಹನಗಳನ್ನು ತಡೆದು ರಸ್ತೆ ದಾಟಲು ಅನುವು ಮಾಡಿಕೊಟ್ಟರು. ಆದರೆ, ಬೈಕ್ ಸವಾರರೊಬ್ಬರು ತಿರುವಿನಲ್ಲಿ ಆನೆ ನಿಂತಿರುವುದನ್ನು ಕಾಣದೆ, ಸಂಚರಿಸಿದ್ದಾರೆ. ಅದೃಷ್ಟವಶಾತ್ ಆನೆಯ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಸಿನಿಮೀಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸುಬ್ರಹ್ಮಣ್ಯ ಗುಂಡ್ಯ ಹೆದ್ದಾರಿ ಸಮೀಪವೇ ನಕ್ಸಲ್ ಚಟುವಟಿಕೆ ಶಂಕೆ: ಪೊಲೀಸ್, ಎಎನ್‌ಎಫ್ ತಂಡದಿಂದ ತೀವ್ರಗೊಂಡ ಶೋಧ ಕಾರ್ಯ
ಕಲ್ಮಂಜದ ಕೆಲವು ಪ್ರದೇಶಗಳಲ್ಲಿ ಶನಿವಾರ ರಾತ್ರಿ ಆನೆಯೊಂದು ಅವಾಂತರ ಸೃಷ್ಟಿಸಿರುವ ಬಗ್ಗೆ ವರದಿಯಾಗಿತ್ತು. ಸದ್ಯ ಚಾರ್ಮಾಡಿ ಘಾಟಿಯಲ್ಲಿ ಕಾಣಿಸಿಕೊಂಡ ಆನೆಯೇ ಅದಾಗಿರಬಹುದು ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ. ಸ್ಥಳೀಯ ನಿವಾಸಿಗಳು ಮತ್ತು ಅರಣ್ಯಾಧಿಕಾರಿಗಳು ಅದನ್ನು ನೆರಿಯ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದರು. ಸೋಮವಾರ ಚಾರ್ಮಾಡಿ ಘಾಟ್‌ನಲ್ಲಿ ಆನೆ ಮತ್ತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ