ಬಿಜೆಪಿ ಜತೆ ಹೊಂದಾಣಿಕೆ ಆರೋಪ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಕಾಂಗ್ರೆಸ್ ಶಾಸಕರಿಂದಲೇ ಆಗ್ರಹ
ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರನ್ನು ಬದಲಾಯಿಸುವಂತೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಬಿಜೆಪಿ ಜೊತೆಗಿನ ಹೊಂದಾಣಿಕೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿದ ಆರೋಪಗಳನ್ನು ಸಚಿವರ ವಿರುದ್ಧ ಮಾಡಲಾಗಿದೆ.
ದಾವಣಗೆರೆ, ಡಿಸೆಂಬರ್ 19: ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನರನ್ನು ಬದಲಾಯಿಸಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಮನವಿ ಮಾಡಿದ್ದು, ಪತ್ರ ಬರೆದಿದ್ದಾರೆ.
ಶಿವಮೊಗ್ಗ PWD ಅಧಿಕಾರಿ ವಿಜಯಕುಮಾರ್ ವರ್ಗಾವಣೆಗೆ ಸಿಎಂ ಒಪ್ಪಿದ್ದರು. ಲೆಕ್ಕಾಧಿಕಾರಿ ವಿಜಯ್ಕುಮಾರ್ ದಾವಣಗೆರೆಗೆ ವರ್ಗಾವಣೆ ಆಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ದಾವಣಗೆರೆ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಐ.ಎಸ್.ಓಡೆನಪುರರನ್ನು ಉದ್ದೇಶಪೂರ್ವಕವಾಗಿ ಹುದ್ದೆಯಿಂದ ಬಿಡುಗಡೆಗೊಳಿಸಿಲ್ಲ. ಸರ್ಕಾರಿ ನೌಕರರ ಚುನಾವಣೆಯಲ್ಲಿ ಓಡೆನಪುರ ಗೆದ್ದು ಅಧ್ಯಕ್ಷರಾಗಿದ್ದಾರೆ. ಇವರು ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋತಿದ್ದಾರೆ. ಇದು ಬಿಜೆಪಿಯವರು ಹಾಗೂ ಮಲ್ಲಿಕಾರ್ಜುನ್ ಅವರ ಹೊಂದಾಣಿಕೆ ರಾಜಕೀಯ. ಇದರಿಂದಾಗಿ ಕೂಡಲೇ ದಾವಣಗೆರೆ ಉಸ್ತುವಾರಿ ಸಚಿವರ ಬದಲಾವಣೆ ಮಾಡಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಕಾರಣರಾದ ಆರೋಪ
ಈ ಹಿಂದೆ ನಡೆದ ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಚನ್ನಗಿರಿ ತಾಲ್ಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸದೆ ಬಿಜೆಪಿ ಬೆಂಬಲಿತ, ಮಾಜಿ ಶಾಸಕರ ಬೆಂಬಲಿಗನ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿರುತ್ತಾರೆ. ಹೊನ್ನಾಳಿ ಶಾಸಕರ ಪುತ್ರರಾದ ಸುರೇಂದ್ರರವರು ಈ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾಗಿದ್ದು ರಾಜ್ಯ ಅಪೆಕ್ಸ್ ಬ್ಯಾಂಕಿಗೆ ಜಿಲ್ಲೆಯಿಂದ ರಾಜ್ಯ ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ನಾಮನಿರ್ದೇಶಿಸಲು ಸಹಕರಿಸುವಂತೆ ಕೋರಿದ್ದರೂ ಬೆಂಬಲಿಸದೆ, ಬಿಜೆಪಿ ಬೆಂಬಲಿಗರನ್ನು ರಾಜ್ಯ ಅಪೆಕ್ಸ್ ಬ್ಯಾಂಕಿನಲ್ಲಿ ನಿರ್ದೇಶಕರನ್ನಾಗಿ ಮುಂದುವರೆಸಿದ್ದು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯು ಕಾಂಗ್ರೆಸ್ ಆಡಳಿತದ ಹಿಡಿತದಲ್ಲಿದ್ದರೂ ಸಹ ಮುಲುಗದ ಅನುಭವಿಸುವಂತಾಗಿದೆ ಎಂದು ಉಸ್ತುವಾರಿ ಸಚಿವರ ವಿರುದ್ಧ ಪತ್ರದಲ್ಲಿ ಆರೋಪಿಸಲಾಗಿದೆ.
ಇವರ ಈ ದ್ವಿಮುಖ ನೀತಿ, ಸ್ಥಳೀಯ ಶಾಸಕರೊಂದಿಗೆ ಯಾವುದೇ ಗೌರವ ಮತ್ತು ವಿಶ್ವಾಸ ಇಲ್ಲದಿರುವುದು ಆಡಳಿತಾತ್ಮಕ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಏಕಪಕ್ಷೀಯವಾಗಿ ನಡವಳಿಕೆಯಿಂದ ನೊಂದಿರುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಬೆಜೆಪಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಹಿನ್ನಡೆಯಾಗಿರುತ್ತದೆ. ನಮ್ಮ ಚನ್ನಗಿರಿ ಕ್ಷೇತ್ರದಲ್ಲಿ 10 ಸಾವಿರ ಬಹುಮತ ನೀಡಿ ಗೆಲುವಿಗೆ ಕಾರಣವಾಗಿದ್ದು ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗಿನ ವಿಶ್ವಾಸದ ಪ್ರತಿಫಲವೆಂದೇ ಭಾವಿಸಿದ್ದೇನೆ ಎಂದು ಬಸವರಾಜ್ ಶಿವಗಂಗಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪೋತ್ಸವ: ಏನಿದು ಬರ್ತ್ಡೇ ಸೀಕ್ರೆಟ್?
ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಯಲ್ಲಿ ಈಗಾಗಲೇ ಹೊಂದಾಣಿಕೆಯ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಂಭವ ಇರುವುದರಿಂದ ನಮ್ಮ ನೋವು, ಅವಮಾನ, ಮುಜುಗರವನ್ನು ತಪ್ಪಿಸುವುದರ ಜೊತೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ, ಮುಖಂಡರ, ಕಾರಕರ್ತರ ಹಿತದೃಷ್ಟಿಯಿಂದ ಪ್ರಸ್ತುತ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಈ ಮೂಲಕ ತಮ್ಮಲ್ಲಿ ಗೌರವಪೂರ್ವಕವಾಗಿ ಕೋರಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ