ದಾವಣಗೆರೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭ: ಬಡಮಕ್ಕಳ ಕಲ್ಯಾಣಕ್ಕೆ ‘ಸಂಕಲ್ಪ’ ಮಾಡಿದ ಸಂಸದೆ

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು 25 ಕೋಟಿ ರೂ ಹಣ ಹೂಡಿಕೆ ಮಾಡಿ "ಸಂಕಲ್ಪ" ಎಂಬ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಆರಂಭಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ಒದಗಿಸುವ ಈ ಕೇಂದ್ರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಚಾಲನೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭ: ಬಡಮಕ್ಕಳ ಕಲ್ಯಾಣಕ್ಕೆ ‘ಸಂಕಲ್ಪ’ ಮಾಡಿದ ಸಂಸದೆ
Competitive Exam Coaching Center
Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2025 | 8:58 AM

ದಾವಣಗೆರೆ, ಆಗಸ್ಟ್​ 04: ಪ್ರತಿ ಸಂಸತ್ ಅಧಿವೇಶವನದಲ್ಲಿ ಪ್ರಶ್ನೆಗಳ ಮೂಲಕ ಗಮನ ಸೆಳೆಯುವ ದಾವಣಗೆರೆ (Davangere) ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್​ (Prabha Mallikarjun) ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಬರೋಬರಿ 25 ಕೋಟಿ ರೂ. ಸ್ವಂತ ಹಣ ಠೇವಣಿ ಇಟ್ಟು ಬಡಮಕ್ಕಳ ಕಲ್ಯಾಣಕ್ಕೆ ಯೋಜನೆ ರೂಪಿಸಿದ್ದಾರೆ. ‘ಸಂಕಲ್ಪ’ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಚಾಲನೆ ನೀಡಿದ್ದಾರೆ.

ದಾವಣಗೆರೆಗೆ ವಿಶ್ವವಿದ್ಯಾಲಯ, ಎಸ್.ಎಸ್.ಕೇರ್‌ ಟ್ರಸ್ಟ್ ಹಾಗೂ ಐಎಎಸ್‌ ಬಾಬಾ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ಆರಂಭಿಸಿದ ‘ಸಂಕಲ್ಪ’ ಕೇಂದ್ರಕ್ಕೆ ಚಾಲನೆ ಸಿಕ್ಕಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಚಾಲನೆ ನೀಡಿದರು. ಇದಕ್ಕೆ ಕಾರಣ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್​.

ಇದನ್ನೂ ಓದಿ: ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ಇದಕ್ಕಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ ದಂಪತಿಗಳು ಬರೋಬರಿ 25 ಕೋಟಿ ರೂ ಹಣ ಠೇವಣಿ ಇಟ್ಟಿದ್ದಾರೆ. ಈಗಾಗಲೇ ನಾಲ್ಕೈದು ವರ್ಷಗಳ ಹಿಂದೆ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಉಚಿತ ಡಯಾಲಿಸಿಸ್ ಸೇವೆ ಆರಂಭಿಸಲಾಗಿದೆ. ಇದಕ್ಕೆ 10 ಕೋಟಿ ರೂ ಠೇವಣಿ ಇಟ್ಟು ಸೇವೆ ಆರಂಭಿಸಲಾಗಿದೆ. ಇದೀಗ 25 ಕೋಟಿ ರೂ ಠೇವಣಿ ಇಡಲಾಗಿದೆ.

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯುವ ಸಮೂಹದ ಜತೆಗೆ ನಡೆದ ಸಂವಾದದಲ್ಲಿ ಕೆಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆಯುವಂತೆ ಕೇಳಿಕೊಂಡಿದ್ದರು. ಸಂಸದೆ ಆದ ಬಳಿಕ ಗ್ರಂಥಾಲಯಕ್ಕೆ ಭೇಟಿ ನೀಡಿದಾಗಲೂ ಅನೇಕ ಪರೀಕ್ಷಾಂಕ್ಷಿಗಳು ಈ ಕೋರಿಕೆ ಸಲ್ಲಿಸಿದ್ದರು. ಈ ಕಾರಣಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಸಂಕಲ್ಪ’ ಪ್ರಾರಂಭವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ವಾರದ ಹಿಂದೆ ನಡೆದ ಪ್ರವೇಶ ಪರೀಕ್ಷೆಗೆ 800 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 300 ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ದೃಶ್ಯಕಲಾ ಕಾಲೇಜು ಆವರಣದ ತರಬೇತಿ ಕೇಂದ್ರದಲ್ಲಿ 8 ತಿಂಗಳ ತರಬೇತಿ ನೀಡಲಾಗುತ್ತದೆ. ಉಚಿತ ತರಬೇತಿ ಎಂಬ ಕಾರಣಕ್ಕೆ ಇದನ್ನು ಹಗುರವಾಗಿ ಪರಿಗಣಿಸಬೇಡಿ. ಪ್ರತಿ ತಿಂಗಳು ತರಬೇತಿ ಫಲಿತಾಂಶ ಪರಿಶೀಲನೆ ಮಾಡುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​​ಎಸ್ ಮಲ್ಲಿಕಾರ್ಜುನ ಹೇಳಿದ್ದಾರೆ.

ಇದನ್ನೂ ಓದಿ: ಟಿವಿ9 ವರದಿ ಫಲಶೃತಿ: ಗ್ರಾಮಕ್ಕೆ ಬಂತು ಸರ್ಕಾರಿ ಬಸ್, ಶಾಲಾ ಬಾಲಕಿಯರು ಫುಲ್​​ ಖುಷ್​

ಬಡವರಿಗೆ ಉಚಿತ ಡಯಾಲಿಸಿಸ್ ಸೇವೆ ಆರಂಭಿಸಲಾಗಿದೆ. ಜೊತೆಗೆ ಬಡ ಮಕ್ಕಳಿಗೆ ಶಿಷ್ಯ ವೇತನ ನೀಡುವ ವ್ಯವಸ್ಥೆ ಕೂಡ ಆರಂಭಿಸಿದ್ದಾರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್​. ಇನ್ನು ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ ಎಸ್​ಎಸ್ ಕೇರ್ ಟ್ರಸ್ಟ ಮೂಲಕ ಹತ್ತಾರು ಕೆಲಸ ಆರಂಭಿಸಿದ ಸಂಸದೆ, ಇದೀಗ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:57 am, Mon, 4 August 25