ದಾವಣಗೆರೆ ದಕ್ಷಿಣ ಬೈಎಲೆಕ್ಷನ್: ಕಾಂಗ್ರೆಸ್‌ಗೆ 1983ರ ಇತಿಹಾಸ ಮರುಕಳಿಸುವ ಭೀತಿ! ಅಂದೇನಾಗಿತ್ತು ಗೊತ್ತೇ?

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣದಲ್ಲಿ 1983ರ ರಾಜಕೀಯ ಇತಿಹಾಸ ಮರುಕಳಿಸುವ ಲಕ್ಷಣಗಳು ಕಾಣಿಸುತ್ತಿವೆ. ಅಲ್ಪಸಂಖ್ಯಾತ ಮತಗಳ ವಿಭಜನೆಯಿಂದ ಅಂದು ಕಾಂಗ್ರೆಸ್ ಸೋಲು ಕಂಡಿದ್ದ ಮಾದರಿಯಲ್ಲೇ, ಇಂದು ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಕಣಕ್ಕಿಳಿದಿರುವುದು ‘ಕೈ’ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ. ಕಳೆದ 15 ಚುನಾವಣೆಗಳಲ್ಲಿ ಒಬ್ಬರೂ ಮುಸ್ಲಿಂ ಅಭ್ಯರ್ಥಿ ಗೆಲ್ಲದಿದ್ದರೂ, ಈ ಬಾರಿ ಅವರು ನಿರ್ಣಾಯಕ ಮತದಾರರಾಗಲಿದ್ದಾರೆಯೇ? ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

ದಾವಣಗೆರೆ ದಕ್ಷಿಣ ಬೈಎಲೆಕ್ಷನ್: ಕಾಂಗ್ರೆಸ್‌ಗೆ 1983ರ ಇತಿಹಾಸ ಮರುಕಳಿಸುವ ಭೀತಿ! ಅಂದೇನಾಗಿತ್ತು ಗೊತ್ತೇ?
ಪ್ರಚಾರದ ಅಖಾಡದಲ್ಲಿ ಸಮರ್ಥ್ ಶಾಮನೂರು ಹಾಗೂ ಬಲಚಿತ್ರದಲ್ಲಿ ಸಾಧಿಕ್ ಪೈಲ್ವಾನ್
Image Credit source: tv9
Edited By:

Updated on: Mar 26, 2026 | 9:14 AM

ದಾವಣಗೆರೆ, ಮಾರ್ಚ್ 26: ದಾವಣಗೆರೆ ದಕ್ಷಿಣ ಉಪಚುನಾವಣೆ (Davangere South By-Poll) ಕಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಅಲ್ಪಸಂಖ್ಯಾತ ಮತಬ್ಯಾಂಕ್ ಈ ಬಾರಿ ರಾಜಕೀಯ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಎದುರಾಗಿದೆ. ಕಾಂಗ್ರೆಸ್ (Congress) ಟಿಕೆಟ್ ವಿಚಾರದಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆ, ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಕಣಕ್ಕಿಳಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಾದಿಕ್ ಕಣದಿಂದ ಹಿಂದೆ ಸರಿಯಲ್ಲ ಎಂದು ಖಡಕ್ ಆಗಿ ಹೇಳಿರುವುದರಿಂದ 1983ರ ಫಲಿತಾಂಶ ಮರುಕಳಿಸಲಿದೆಯೇ ಎಂಬ ಕುತೂಹಲ ಮೂಡಿದೆ.

1983 ರಲ್ಲಿಯೂ ಇಂಥದ್ದೇ ಪರಿಸ್ಥಿತಿ!

1983ರ ವಿಧಾನಸಭಾ ಚುನಾವಣೆಯ ಇತಿಹಾಸ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿತ್ತು. ಆಗಿನ ಗುಂಡೂರಾವ್ ಸರ್ಕಾರದಲ್ಲಿ ಶಿಕ್ಷಣ ಸಚಿವೆ ಆಗಿದ್ದ ನಾಗಮ್ಮ ಕೇಶಮೂರ್ತಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಪಕ್ಷೇತರ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಸಾಬ್ ಗಮನಾರ್ಹ ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಪಂಪಾಪತಿ ಗೆಲುವು ಸಾಧಿಸಿದ್ದರು.

ಆ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಮತ ಹಾಕಿದರೆಂದು ವಿಶ್ಲೇಷಣೆ ನಡೆಯಿತ್ತು. ಇದೀಗ ಮತ್ತೆ ಟಿಕೆಟ್ ನೀಡದ ವಿಚಾರದಲ್ಲಿ ಅಲ್ಪಸಂಖ್ಯಾತರ ಅಸಮಾಧಾನ ವ್ಯಕ್ತವಾಗುತ್ತಿರುವುದರಿಂದ, ಅದೇ ಇತಿಹಾಸ ಮರುಕಳಿಸಬಹುದೇ ಎಂಬ ಪ್ರಶ್ನೆ ಎದ್ದಿದೆ.

ಮುಸ್ಲಿಂ ಅಭ್ಯರ್ಥಿಗಳು ಯಾರೂ ಈವರೆಗೆ ಗೆದ್ದಿಲ್ಲ

ದಾವಣಗೆರೆ ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ, 15 ಚುನಾವಣೆಯಲ್ಲಿ ಒಟ್ಟು 45ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಯಾರೂ ಗೆಲುವು ಸಾಧಿಸಿಲ್ಲ. ಆದರೂ ಮತಪ್ರಮಾಣ ದೃಷ್ಟಿಯಿಂದ ಮುಸ್ಲಿಮರು ಗಮನಾರ್ಹರಾಗಿದ್ದಾರೆ. 1983ರಲ್ಲಿ ಮಹಮ್ಮದ್ ಇಕ್ಬಾಲ್ ಸಾಬ್ ಸುಮಾರು ಶೇ 23.67 ಮತಗಳನ್ನು ಪಡೆದಿದ್ದರು. 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಸೈಪುಲ್ಲಾ ಸುಮಾರು ಶೇ 21 ಮತ ಗಳಿಸಿದ್ದರು.

ಇನ್ನಷ್ಟು ಗಮನಿಸಿದರೆ, 2013ರಲ್ಲಿ 15 ಅಭ್ಯರ್ಥಿಗಳಲ್ಲಿ 9 ಮಂದಿ ಮುಸ್ಲಿಂ ಅಭ್ಯರ್ಥಿಗಳಾಗಿದ್ದರೆ, 2018ರಲ್ಲಿ 11ರಲ್ಲಿ 7 ಮಂದಿ, 2023ರಲ್ಲಿ 16ರಲ್ಲಿ 8 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದಾಗ್ಯೂ, ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದರು.

ಈ ಬಾರಿ ಸಹ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಂಖ್ಯೆಯೇ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಸಾಧಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಮತ ವಿಭಜನೆಗೆ ಕಾರಣವಾಗಬಹುದು ಎಂಬ ಆತಂಕ ಕಾಂಗ್ರೆಸ್ ವಲಯದಲ್ಲಿ ಇದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: 23 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ, ಕಾಂಗ್ರೆಸ್​ಗೆ ಟೆನ್ಷನ್!

ಒಟ್ಟಾರೆ, 1983ರ ಇತಿಹಾಸದಂತೆ ಈ ಬಾರಿ ಕೂಡ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆಯೇ ಅಥವಾ ಪಕ್ಷದ ಪರ ನಿಲ್ಲುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us