ದಾವಣಗೆರೆಯಲ್ಲಿ ಬಿಜೆಪಿಗೆ ಬಿಗ್ ಶಾಕ್, ಮಾಜಿ ಶಾಸಕ, RSS ಕಟ್ಟಾಳು ಕಾಂಗ್ರೆಸ್ ಸೇರ್ಪಡೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಗೆಲುವಿಗಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕದನ ಕಣದಲ್ಲಿ ತಂತ್ರಗಳ ಆಟ ಶುರು ಮಾಡಿವೆ. ಇದರ ನಡುವೆ ನಾಯಕರ ಪಕ್ಷಾಂತರ ಪರ್ವ ಜೋರಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಆಪರೇಷನ್ ಹಸ್ತು ಮಾಡಿದೆ. ಅದರಂತೆ ಇದೀಗ ದಾವಣಗೆರೆಯಲ್ಲಿ ಆರ್ಎಸ್ಎಸ್ ಕಟ್ಟಾಳು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ದಾವಣಗೆರೆ, (ಏಪ್ರಿಲ್ 12): ಹಾಲಿ ಸಂಸದ ಸಿದ್ಧೇಶ್ವರ್ (Siddeshwar) ಬದಲಿಗೆ ಈ ಬಾರಿ ದಾವಣಗೆರೆ(Davanagere) ಲೋಕಸಭಾ ಟಿಕೆಟ್ ಅವರ ಪತ್ನಿಗೆ ನೀಡಲಾಗಿದೆ. ಇದರಿಂದ ಬಿಜೆಪಿಯಲ್ಲೇ ಅಸಮಾಧಾನ ಭುಗಿಲೆದ್ದಿದೆ. ಅದರಲ್ಲೂ ಪ್ರಮುಖವಾಗಿ ಎಂಪಿ ರೇಣುಕಾಚಾರ್ಯ ಕೋಪ ತಣ್ಣಗಾಗುತ್ತಿಲ್ಲ. ಖುದ್ದು ಬಿಎಸ್ ಯಡಿಯೂರಪ್ಪ ಸಂಧಾನ ಮಾಡಿದರೂ ಸಹ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಇದರ ಮಧ್ಯ ಆರ್ಎಸ್ಎಸ್ ಕಟ್ಟಾಳು ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಹೌದು…ಮಾಜಿ ಶಾಸಕ, ಆರ್ಎಸ್ಎಸ್ ಕಟ್ಟಾಳು ಟಿ.ಗುರುಸಿದ್ದನಗೌಡ (T Gurusiddana gowda) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಅವರ ನಿವಾಸಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭೇಟಿ ನೀಡಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡರು. ಇನ್ನು ಇದೇ ವೇಳೆ ದಾವಣಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರುಸಿದ್ದನಗೌಡ ಪುತ್ರ ಡಾ.ರವಿಕುಮಾರ್ ಸಹ ಕಾಂಗ್ರೆಸ್ ಸೇರಿದರು. ಈ ಮೂಲಕ ಬಿಜೆಪಿಗೆ ಆಘಾತವಾಗಿದೆ.
ಈ ವೇಳೆ ಮಾತನಾಡಿರುವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ದಾವಣಗೆರೆ ಬಿಜೆಪಿಯಲ್ಲಿ ಉಸಿರು ಗಟ್ಟುವ ವಾತಾವರಣ ಇದೆ. ಇದೇ ಕಾರಣಕ್ಕೆ ಕಟ್ಟಾ ಆರ್ ಎಸ್ ಎಸ್ ವ್ಯಕ್ತಿ ಆಗಿದ್ದ ಗುರುಸಿದ್ದನಗೌಡರು ಕಾಂಗ್ರೆಸ್ ಸೇರಿದ್ದಾರೆ. ಗುರುಸಿದ್ದನಗೌಡ್ರು ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ.ಅವರ ಮಾರ್ಗದರ್ಶನದಲ್ಲಿ ನಾವುಗಳು ಮುನ್ನಡೆಯುತ್ತವೆ ಎಂದರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಮಾಜಿ ಸಿಎಂ ಯಡಿಯೂರಪ್ಪ ಕೆಜೆಪಿ ಮೂಡ್ನಿಂದ ಹೊರಬಂದಿಲ್ಲ. ಸಂಸದ ಸಿದ್ದೇಶ್ವರ ಸರ್ವಾಧಿಕಾರಿ ವರ್ತನೆಯಿಂದ ನನಗೆ ಬೇಸರ ಆಗಿದೆ. ಇದೇ ಕಾರಣಕ್ಕೆ ಬಿಜೆಪಿ ಬಿಟ್ಟು ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. 20 ವರ್ಷಗಳಿಂದ ಸಂಸದರಾಗಿರುವ ಸಿದ್ದೇಶ್ವರ ನಮಗೆ ಟಿಕೆಟ್ ಕೊಡಬೇಕಿತ್ತು. ಈ ಬಾರಿ ನನ್ನ ಪುತ್ರ ಡಾ.ರವಿಕುಮಾರ್ಗೆ ಬಿಜೆಪಿ ಟಿಕೆಟ್ ಕೊಡಬೇಕಿತ್ತು. ಸಿದ್ದೇಶ್ವರಗೆ ವಯಸ್ಸಾಗಿದೆ, ಹೀಗಾಗಿ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ