ದಾವಣಗೆರೆ/ಗದಗ, (ಸೆಪ್ಟೆಂಬರ್ 25): ಕರ್ನಾಟಕದಲ್ಲಿ ಬರದ(drought) ಹೊಡೆತ ಬಿದ್ದಿದೆ. ಮಳೆ ಇಲ್ಲದೆ ಬೆಳೆಗಳು ಜಮೀನಿನಲ್ಲೇ ಒಣಗಿ ಹೋಗಿವೆ. ಭೂಮಿ ತೇವಾಂಶವಿಲ್ಲದೆ ರೋಗಬಾಧೆ ಕಾಡುತ್ತಿದೆ. ಸಾಲಸೋಲ ಮಾಡಿ ಬೆಳೆ ಬೆಳೆದ ಅನ್ನದಾತ ಈಗ ಕೈಸುಟ್ಟುಕೊಂಡು ಒದ್ದಾಡ್ತಿದ್ದಾರೆ.. ಮಕ್ಕಳಂತೆ ಬೆಳೆದ ಬೆಳೆಯನ್ನ ಈಗ ನನ್ನ ಕೈಯಾರೆ ನಾಶ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರದಿಂದ ಕಂಗೆಟ್ಟಿರೋ ರೈತರು ಇಂದು(ಸೆಪ್ಟೆಂಬರ್ 25) ಮುಂಡರಗಿ(mundaragi), ದಾವಣಗೆರೆ (Davanagere) ನಗರ ಬಂದ್‌ಗೆ ಕರೆ ಕೊಟ್ಟಿದ್ದಾರೆ.
ಗದಗ ಜಿಲ್ಲೆಯಲ್ಲಿ ಈ ಬಾರಿಯೂ ಭೀಕರ ಬರದ ಛಾಯೆ ಆವರಿಸಿದೆ. ಸರ್ಕಾರ ಜಿಲ್ಲೆಯ 7 ತಾಲೂಕುಗಳ ಪೈಕಿ 6 ತಾಲೂಕು ಬರಪೀಡಿತ ಅಂತ ಘೋಷಣೆ ಮಾಡಿದೆ. ಆದ್ರೆ, ಮುಂಡರಗಿ ತಾಲೂಕನ್ನ ಬರ ಪಟ್ಟಿಯಿಂದ ಸರ್ಕಾರ ಕೈಬಿಟ್ಟಿದ್ದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ನೀರಿಲ್ಲದೆ ಭೂಮಿ ಬಿರುಕು ಬಿಟ್ಟಿದೆ. ಹನಿ ಮಳೆಯೂ ಇಲ್ಲದೇ ಬೆಳೆಗಳು ಒಣಗಿ ಹೋಗಿವೆ. ಆದ್ರೂ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿಲ್ಲ.. ಹೀಗಾಗಿ ಸಿಡಿದ ರೈತರು ಹಾಗೂ ವಿವಿಧ ಸಂಘಟನೆಗಳು ಇಂದು ಮುಂಡರಗಿ ಬಂದ್‌ಗೆ ಕರೆ ಕೊಟ್ಟಿವೆ.
ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ
ಮುಂಡರಗಿ ಬಂದ್‌ಗೆ ವಿವಿಧ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಇಂದು ಅಂಗಡಿ ಮುಗ್ಗಟ್ಟು ಸಂಪೂರ್ಣ ಕ್ಲೋಸ್ ಆಗಲಿವೆ. ಬೆಳಗ್ಗೆ 8 ಗಂಟೆಯಿಂದಲೇ ರೈತರು ಎತ್ತಿನ ಬಂಡಿ, ಟ್ರ್ಯಾಕ್ಟರ್, ಜಾನುವಾರಗಳು ಹಾಗೂ ಕೃಷಿ ಸಲಕರಣೆಗಳ ಸಮೇತ ಮುಂಡರಗಿ ಪಟ್ಟಣಕ್ಕೆ ಆಗಮಿಸಿ ಬಂದ್ ನಲ್ಲಿ ಭಾಗಿಯಾಗಲಿದ್ದಾರೆ. ಇಂದು ಮುಂಡರಗಿ ರೈತರ ಕಿಚ್ಚಿಗೆ ಸಾಕ್ಷಿಯಾಗಲಿದೆ..
ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಕಾವೇರಿಗಾಗಿ ಬಡಿದಾಡ್ತಿದ್ರೆ, ಇತ್ತ ದಾವಣಗೆರೆಯಲ್ಲಿ ಭದ್ರೆಗಾಗಿ ಹೋರಾಟ ಶುರುವಾಗಿದೆ. ಜಿಲ್ಲೆಯ ಶೇ.60 ರಷ್ಟು ಜಮೀನು ನೀರಾವರಿ ಅವಲಂಭಿಸಿದೆ. ಶಿವಮೊಗ್ಗದ ಭದ್ರಾ ಡ್ಯಾಮ್ನಿಂದದಲೇ ಜಿಲ್ಲೆಗೆ 100 ದಿನ ಪೂರೈಕೆ ಆಗುತ್ತೆ. ಆದ್ರೆ ಈ ಬಾರಿ ಕೇವಲ 36 ದಿನಕ್ಕೆ ನೀರನ್ನ ನಿಲ್ಲಿಸಲಾಗಿದೆ. ಭದ್ರೆಯನ್ನೇ ನಂಬಿಕೊಂಡ ಭತ್ತ ನಾಟಿ ಮಾಡಿರುವ ರೈತರು ಈಗ ಕಂಗೆಟ್ಟು ಹೋಗಿದ್ದಾರೆ. ತಕ್ಷಣ ಭದ್ರ ಕಾಲುವೆಗೆ ನೀರು ಬಿಡಿ ಅಂತ ಒತ್ತಾಯಿಸಿ ಹೋರಾಟ ಆರಂಭಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ದಾವಣಗೆರೆ ಬಂದ್‌ಗೆ ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮುನಿಸಿಕೊಂಡ ಕಾರಣ ಭೀಕರ ಬರದ ಛಾಯೆ ಆವರಿಸಿದೆ. ಬರದ ಜಿಲ್ಲೆಯಂದೇ ಕುಖ್ಯಾತಿ ಪಡೆದಿರೋ ಕೊಪ್ಪಳ ಜಿಲ್ಲೆಯಲ್ಲೂ ಭೂಮಿ ಬಾಯಿ ತೆರೆದಿದೆ. ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸಾಲಸೋಲ ಮಾಡಿ ಬೆಳೆದ ಮೆಕ್ಕೆಜೋಳ ಬೆಳೆ ನೀರಿಲ್ಲದೆ ಒಣಗುತ್ತಿದೆ. ಬಹುತೇಕ ಜಮೀನುಗಳಲ್ಲಿ ಇದೇ ದೃಶ್ಯಗಳು ಕಂಡು ಬರ್ತಿವೆ. ಸರ್ಕಾರವೇನೋ ಬರಗಾಲ ಅಂತ ಘೋಷಣೆ ಮಾಡಿದೆ. ಆದ್ರೆ ಸಾಲದ ಶೂಲ ರೈತರ ಬದುಕನ್ನೇ ಸಂಕಷ್ಟಕ್ಕೆ ದೂಡಿದೆ. ಕಾಳು ಕಟ್ಟೋ ಸಮಯದಲ್ಲಿ ಮಳೆ ಕೈಕೊಟ್ಟಿದೆ. ಬೇರೆ ವಿಧಿ ಇಲ್ಲದೆ ಬೆಳೆಯನ್ನ ರೈತರೇ ನಾಶ ಮಾಡೋ ದೃಶ್ಯ ಎಂತರಿಗೂ ಕರಳು ಚುರುಕು ಎನ್ನಿಸುತ್ತೆ.
ಇನ್ನು ಉತ್ತರ ಕರ್ನಾಟಕದಲ್ಲೂ ಬರದ ಕಾರ್ಮೋಡ ಆವರಿಸಿದೆ. ಬೆಳಗಾವಿ ತಾಲೂಕಿನ ಔಚಾರಗಟ್ಟಿ ಗ್ರಾಮದಲ್ಲಿ ಆಲೂಗಡ್ಡೆ ಬೆಳೆದವರ ಪಾಡು ಹೇಳತೀರದಾಗಿದೆ. ಮಳೆ ಇಲ್ಲದೆ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ಒಣಗಿ ಹಾಳಾಗಿದೆ. ರೈತರು ಬೆಳೆ ಕಳೆದುಕೊಂಡು ಒದ್ದಾಡ್ತಿದ್ದಾರೆ. ಸರ್ಕಾರ ಪರಿಹಾರ ನೀಡದಿದ್ರೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಲಿದೆ ಅಂತ ರೈತರು ಕಣ್ಣೀರು ಹಾಕ್ತಿದ್ದಾರೆ.
ಇನ್ನು ಬಾಗಲಕೋಟೆಯಲ್ಲಿ ಮೆಣಸಿನ ಬೆಳೆ ಹಾಗೂ ಈರುಳ್ಳಿ ಬೆಳೆ ನೀರಿಲ್ಲದೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಬರದ ದರ್ಶನವಾಗ್ತಿದೆ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ರೂ ಇಂದಿಗೂ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಇಲಾಖೆ ಸಮೀಕ್ಷೆ ನಡೆಸಿಲ್ಲ.
ಅತ್ತ ವರುಣನ ಅವಕೃಪೆಗೆ ಕಾಫಿನಾಡಿನಲ್ಲೂ ಬರ ತಾಂಡವವಾಡ್ತಿದೆ. ಕಡೂರು ತಾಲೂಕಿನಲ್ಲಿ ಈರುಳ್ಳಿ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತರು ಈಗ ತಾವೇ ಬೆಳೆ ನಾಶ ಮಾಡ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಹೊಲದಲ್ಲೇ ಒಣಗಿ ಹೋಗಿದ್ದು ರೈತರಿಗೆ ದಿಕ್ಕೇ ತೋಚದಾಗಿದೆ. ವರುಣನ ಅವಕೃಪೆಯಿಂದ ಎಲ್ಲೆಲ್ಲೂ ರೈತರು ಕಣ್ಣೀರು ಹಾಕುವಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ