ಬಿಜೆಪಿ ಶಾಸಕರಿರುವ ಜಯನಗರ ಕ್ಷೇತ್ರಕ್ಕೆ ಅನುದಾನ ಕೊಡದಿರುವುದಕ್ಕೆ ಕಾರಣ ಕೊಟ್ಟ ಡಿಕೆಶಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 29, 2024 | 4:20 PM

ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದ್ದಂತೆ ಇದೀಗ ಬೆಂಗಳೂರು ಭಾಗದ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಆದ್ರೆ, ಜಯನಗರ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಅನುದಾನ ನೀಡುವಂತೆ ಸೂಚಿಸಿದ್ದಿ, ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಖುದ್ದು ಡಿಕೆಶಿ ಪ್ರತಿಕ್ರಿಯಿಸಿದ್ದು, ಏಕೆ ಅನುದಾನ ನೀಡಿಲ್ಲ ಎನ್ನುವುದಕ್ಕೆ ಕಾರಣ ಸಮೇತ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಶಾಸಕರಿರುವ ಜಯನಗರ ಕ್ಷೇತ್ರಕ್ಕೆ ಅನುದಾನ ಕೊಡದಿರುವುದಕ್ಕೆ ಕಾರಣ ಕೊಟ್ಟ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್
Follow us on

ಬೆಂಗಳೂರು, (ಅಕ್ಟೋಬರ್ 29): ಬೆಂಗಳೂರು ವ್ಯಾಪ್ತಿಯ ಜಯನಗರ ಕ್ಷೇತ್ರ ಹೊರತುಪಡಿಸಿ ಎಲ್ಲ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡುವಂತೆ ಬಿಬಿಎಂಪಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ನಡೆಗೆ ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಸಮಾಧಾನಗೊಂಡಿದ್ದಾರೆ. ಇನ್ನು ಇದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಅವರ ಕ್ಷೇತ್ರವೊಂದನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಆದೇಶಿಸಿರುವುದು ದ್ವೇಷದ ರಾಜಕಾರಣವಲ್ಲದೆ ಮತ್ತಿನ್ನೇನೂ ಅಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಇದಕ್ಕೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾನೇ ಅನುದಾನ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅನುದಾನ ಕೊಡದಿದ್ದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾನೇ ಅನುದಾನ ಕೊಟ್ಟಿಲ್ಲ. ಅವರು ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಅದನ್ನ ಸಾಬೀತು ಮಾಡಬೇಕಲ್ಲವೇ. ನಾವೇನು ತಪ್ಪು ಮಾಡಿದ್ದೇವೆ ಅದನ್ನ ತನಿಖೆ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು. ಉದ್ದೇಶಪೂರ್ವಕವಾಗಿಯೇ ಅನುದಾನವನ್ನು ತಡೆಹಿಡಿದಿರುವುದನ್ನು ಡಿಕೆಶಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕರಿರುವ ಜಯನಗರ ಬಿಟ್ಟು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ಅನುದಾನ: ಡಿಕೆಶಿ ನಡೆಗೆ ಬಿಜೆಪಿ ಕೆಂಡ

ಇನ್ನು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಬಿಜೆಪಿ ಪ್ರತಿಭಟನೆ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಅವರು ಪ್ರತಿಭಟನೆ ಮಾಡಲಿ, ತಡ ಮಾಡುವುದು ಬೇಡ. ನಿನ್ನೆ ರಾಮಮೂರ್ತಿ ಬಂದಿದ್ದರು. ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ಅವರು ಪ್ರತಿಭಟನೆ ಮಾಡಲಿ ಎಂದು ಟಾಂಗ್ ಕೊಟ್ಟರು.

ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, 17 ಮತದಿಂದ ರಾಮಮೂರ್ತಿ ಗೆದ್ದಿದ್ದಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್​ಗೆ 80 ಕೋಟಿ ರೂಪಾಯಿ ಕೊಟ್ಟಿದ್ದೆವು. ಅನುದಾನ ಸಂಬಂಧ ನಾನು ಡಿಸಿಎಂ ಡಿಕೆ ಶಿವಕುಮಾರ್​​ಗೆ ಪತ್ರ ಬರೆಯುತ್ತೇನೆ. ದ್ವೇಷದ ರಾಜಕಾರಣ ‌ಮಾಡಬೇಡಿ ಎಂದು ಹೇಳುತ್ತೇನೆ ಎಂದರು.

ಸ್ಪೀಕರ್​​ಗೆ ದೂರು ನೀಡಿದ್ದ ಶಾಸಕ

ಈ ಹಿಂದೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲು ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಅವರು ಸ್ಪೀಕರ್ ಯು.ಟಿ ಖಾದರ್‌ಗೆ ದೂರು ನೀಡಿದ್ದರು. ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡದೆ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ