ದೀಪಾವಳಿ ಬಂತೆಂದರೆ ಈ ಗ್ರಾಮದಲ್ಲಿ ಭಯದ ವಾತಾವರಣ: ಹಬ್ಬದ ದಿನದಂದೇ ನೂರಾರು ಯುವಕರು ಕಾಣೆ
ದಿಪಾವಳಿ ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರು ಸಂಭ್ರಮ ಪಡುತ್ತಾರೆ. ಆದರೆ ದಾವಣಗೆರೆಯ ಲೋಕಿಕೆರೆ ಗ್ರಾಮದ ಜನರು ದೀಪಾವಳಿ ಆಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಶತಮಾನಗಳ ಹಿಂದೆ ಹಬ್ಬದ ದಿನದಂದೇ ನಡೆದ ಹಲವಾರು ಘಟನೆಗಳೇ ಇದಕ್ಕೆ ಕಾರಣವೆಂದು ಗ್ರಾಮಸ್ಥರು ಹೇಳಿದ್ದಾರೆ.

ದಾವಣಗೆರೆ, ಅಕ್ಟೋಬರ್ 22: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರು ಸಂಭ್ರಮ ಪಡುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಈ ದೀಪಾವಳಿ (Deepavali) ಬಂದರೇ ಭಯದ ವಾತಾವರಣ ಕವಿಯುತ್ತದೆ. ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರು ದೀಪಾವಳಿಯನ್ನು ಕರಾಳ ದಿನವನ್ನಾಗಿ ನೋಡುತ್ತಾರೆ. ಅನಾದಿಕಾಲದಿಂದಲೂ ಈ ಗ್ರಾಮದಲ್ಲಿ ದೀಪಾವಳಿಯಂದೇ ಹಲವಾರು ದುರ್ಘಟನೆ ಸಂಭವಿಸಿರುವುದೇ ಇವರ ಈ ನಂಬಿಕೆಗೆ ಕಾರಣವೆಂದು ಗ್ರಾಮಸ್ಥರು ಹೇಳುತ್ತಾರೆ.
ಹಬ್ಬದ ದಿನದಂದೇ ನೂರಾರು ಯುವಕರು ಕಾಣೆ
ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನ. ಈ ಗ್ರಾಮದವರು ಹಬ್ಬ ಆಚರಿಸದಿರಲು ಸಾಕಷ್ಟು ಕಾರಣ ಹೇಳುತ್ತಾರೆ. ನೂರಾರು ವರ್ಷದ ಹಿಂದೆ ಈ ಗ್ರಾಮದಲ್ಲಿ ವಿವಿಧ ಸಮುದಾಯದ ನೂರಾರು ಯುವಕರು ದೀಪಾವಳಿ ಹಬ್ಬದಂದೆ ಕಾಣೆಯಾಗಿದ್ದರಂತೆ.
ಹಬ್ಬದ ದಿನ ಪೂಜೆಗಾಗಿ, ಉತ್ರಾಣಿ ಕಡ್ಡಿ, ಕಾಶಿಕಡ್ಡಿ, ಹೂ ತರಲು ಊರಿಂದ ಹೊರಗೆ ಹೋದವರು ಮರಳಿ ಬರಲೇ ಇಲ್ಲ. ಗ್ರಾಮಸ್ಥರು ಅದೆಷ್ಟೆ ಹುಡುಕಿದರೂ ಅವರು ಸುಳಿವು ಸಿಗದ ಕಾರಣಕ್ಕೆ ಅಂದೇ ದೀಪಾವಳಿ ಕರಾಳ ದಿನ ಎಂದು ಹಬ್ಬದ ಆಚರಣೆಯನ್ನು ಕೈಬಿಟ್ಟಿದ್ದಾರೆ. ಅದು ತಲೆಮಾರುಗಳಿಂದ ಹಾಗೆಯೇ ಮುಂದುವರೆಯುತ್ತಾ ಬಂದಿದೆ.
ಹಬ್ಬದ ದಿನದಂದೇ ಜಮೀನಿಗೆ ಬೆಂಕಿ!
ಜಿಲ್ಲಾ ಕೇಂದ್ರ ದಾವಣಗೆರೆಯಿಂದ ಸುಮಾರು 20 ಕಿಮೀ ಅಂತರದಲ್ಲಿ ಇರುವ ಈ ಲೋಕಿಕೆರೆ ಗ್ರಾಮದಲ್ಲಿ ಸುಮಾರು 200 ಕ್ಕೂ ಅಧಿಕ ಕುಟುಂಬಗಳು ದೀಪಾವಳಿ ಹಬ್ಬದಿಂದ ದೂರ ಉಳಿದಿದ್ದಾರೆ. ಯಾವುದಕ್ಕೂ ಆಗಿದ್ದೆಲ್ಲಾ ಆಗಿ ಹೋಗಿದೆ, ಹಿಂದಿನದೆಲ್ಲಾ ಮರೆತು ದೀಪಾವಳಿ ಹಬ್ಬ ಆಚರಣೆ ಮಾಡಲು ಐದು ದಶಕದ ಹಿಂದೊಮ್ಮೆ ನಿರ್ಧಾರ ಮಾಡಿದ್ದರು. ಎಂದಿನಂತೆ ದೀಪಾವಳಿ ಹಬ್ಬದ ದಿನದಂದು ಹಬ್ಬ ಆಚರಣೆ ಮಾಡಲು ಮುಂದಾಗಿದ್ದರು.
ಈ ವೇಳೆ ಏಕಾಏಕಿ ಜಮೀನಿನಲ್ಲಿನ ಪೈರಿಗೆ, ಹುಲ್ಲಿನ ಬಣವಿಗೆ ಬೆಂಕಿ ಬಿದ್ಧು ದಗ ದಗ ಎಂದು ಹೊತ್ತಿ ಉರಿದಿತ್ತು. ಇದನ್ನು ಕಂಡು ಆ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡಿದ್ದರು. ಆ ಘಟನೆಯ ನಂತರ ಯಾವತ್ತೂ ಹಬ್ಬ ಮಾಡುವ ಯೋಚನೆಯನ್ನೇ ಮಾಡಿರಲಿಲ್ಲ. ಇಂದಿಗೂ ಆ ಸಮುದಾಯದವರು ದೀಪಾವಳಿಯ ಆಚರಣೆಯಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ ದೀಪಾವಳಿ ಪಟಾಕಿಯಿಂದ ಅವಾಂತರ: ಬೆಂಗಳೂರಿನಲ್ಲಿ 90ಕ್ಕೂ ಜನರ ಕಣ್ಣಿಗೆ ಹಾನಿ, ಗಾಳಿ ಗುಣಮಟ್ಟ ಕುಸಿತ
ಗ್ರಾಮದ ಮಕ್ಕಳು ಹಬ್ಬ ಮಾಡುವ ಆಸೆಯನ್ನು ತೋರ್ಪಡಿಸಿದರೂ ಇಲ್ಲಿನ ನಂಬಿಕೆಯನ್ನು ಮುರಿಯಲಾಗದ ಕುಟುಂಬಗಳು ಮಕ್ಕಳನ್ನು ನಿರಾಸೆಪಡಿಸುವ ಪರಿಸ್ಥಿತಿ ಎದುಯರಾಗಿದೆ. ಒಟ್ಟಾರೆ ಮನಸ್ಸಿನ ಕತ್ತಲೆಯನ್ನು ತೊಡೆದು ಬೆಳಕಿನೆಡೆಗೆ ಸಾಗುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಆಚರಿಸುವ ದೀಪಾವಳಿ, ಈ ಲೋಕಿಕೆರೆ ಗ್ರಾಮದ ಕೆಲವರಿಗೆ ಕರಾಳವಾಗಿದ್ದು ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



