ಅಳಿವಿನಂಚಿನಲ್ಲಿರುವ ಜಿಂಕೆ, ಕೃಷ್ಣಮೃಗ: ಸಂರಕ್ಷಿತ ಪ್ರಾಣಿಗಳ ರಕ್ಷಣೆ ಯಾರ ಜವಾಬ್ದಾರಿ?
ಹೈದರಾಬಾದ್ ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ 45,000 ಹೆಕ್ಟರ್ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಬೀದರ್. ಆದರೆ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯ ಅರಣ್ಯ ಪ್ರದೇಶ ಹಾಗೂ ಅರಣ್ಯದಲ್ಲಿ ಇರುವ ಕಾಡು ಪ್ರಾಣಿಗಳು ನಶಿಸಿ ಹೋಗುತ್ತಿವೆ.

ಬೀದರ್: ಜಿಂಕೆ, ಕೃಷ್ಣಮೃಗ ಅಳವಿನಂಚಿನಲ್ಲಿರುವ ಪ್ರಾಣಿಗಳಾಗಿವೆ. ಇಂಥ ಪ್ರಾಣಿಗಳ ಸಂರಕ್ಷಣೆಗಾಗಿಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿ ಜಿಂಕೆ ಮತ್ತು ಕೃಷ್ಣಮೃಗಗಳಿಗೆ ಸಂರಕ್ಷಿತ ಪ್ರಾಣಿ ಎಂಬ ರಕ್ಷಣೆ ಒದಗಿಸಲಾಗಿದೆ. ಆದರೆ, ಈ ಪ್ರಾಣಿಗಳಿಗೆ ಇದೀಗ ಬೀದರ್ ಜಿಲ್ಲೆಯಲ್ಲಿ ಆಪತ್ತು ಎದುರಾಗಿದೆ.

ಕೈಗಾರಿಕರಣದ ಹೆಸರಿನಲ್ಲಿ ಪ್ರಾಣಿಗಳಿಗೆ ಹಾಕಿರುವ ತಡೆ ಬೆಲಿ
ಶಾಂತಸ್ವಭಾವದ ಈ ಪ್ರಾಣಿಗಳೀಗ ಕೈಗಾರಿಕರಣದಿಂದ ನಲುಗಿವೆ. ಅವುಗಳ ಜೀವಕ್ಕೆ ಕುತ್ತುಬಂದಿದೆ. ಕೆಐಎಡಿಬಿ ಅಭಿವೃದ್ಧಿ ಕಾಮಗಾರಿಗಳಿಂದ ವನ್ಯ ಪ್ರಾಣಿಗಳ ವಾಸಸ್ಥಾನ ಹರಣವಾಗುತ್ತಿದೆ. ಈ ಪ್ರಾಣಿಗಳೀಗ ತಮ್ಮ ಆವಾಸಸ್ಥಾನ ಕಳೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿವೆ.

ಸರ್ಕಾರಿ ಕಚೇರಿ ದೃಶ್ಯ
ಜಿಲ್ಲಾ ಕೇಂದ್ರ ಬೀದರ್ ಹೊರವಲಯದಲ್ಲಿರುವ ವಾಯುಸೇನಾ ತರಬೇತಿ ಕೇಂದ್ರಕ್ಕೆ ಹೊಂದಿಕೊಂಡಿರುವ ಬೆಳ್ಳೂರಾ ವ್ಯಾಪ್ತಿಯಲ್ಲಿನ ಹಸಿರು ವನದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ಕೆಐಎಡಿಬಿ)ಯ ಕಾಮಗಾರಿಗಳು ಪ್ರಾಣಿಗಳ ತುತ್ತಿನ ಚೀಲವನ್ನೇ ಕಿತ್ತುಕೊಳ್ಳುತ್ತಿವೆ.

ಗಂಡು ಕೃಷ್ಣಮೃಗ
ಪ್ರತಿ ನಿತ್ಯ ಬೆಳ್ಳಂಬೆಳಗ್ಗೆ ಕಾಣಿಸಿಕೊಳ್ಳುತ್ತಿದ್ದ ಜಿಂಕೆ, ಕೃಷ್ಣಮೃಗಗಳು ನಮ್ಮ ಕಾಲ ಮುಗಿಯಿತೇ? ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಣಿಗಳ ಜೀವಕ್ಕೆ ಕುತ್ತುಬರುವ ಕೆಲಸವನ್ನ ಮಾಡುತ್ತಿದೆ. ನೂರಾರು ವರ್ಷಗಳಿಂದ ಇದೇ ಸ್ಥಳದಲ್ಲಿ ಕೃಷ್ಣ ಮೃಗ ಹಾಗೂ ಜಿಂಕೆಗಳು ವಾಸ ಮಾಡುತ್ತಿವೆ. ಆದರೆ ಇತ್ತೀಚಿನ ಕೆಲವು ವರ್ಷದಿಂದ ವನ್ಯಜೀವಿಗಳು ವಾಸ ಮಾಡುವ ಸ್ಥಳದಲ್ಲಿ ಕೆಐಎಡಿಬಿಯಿಂದ ಬೃಹತ್ ರಸ್ತೆಗಳು, ಹೈಮಾಸ್ಟ್ ವಿದ್ಯುತ್ ದೀಪಗಳು, ಚರಂಡಿ ಸೇರಿದಂತೆ 10 ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ.

ಗುಂಪಾಗಿ ಆಹಾರ ಅರಸುತ್ತಾ ಹೊರಟ ಕೃಷ್ಣಮೃಗಗಳು
ಸದ್ಯ ಜಿಂಕೆಗಳು ವಾಸ ಮಾಡುವ ಜಾಗದ ಸುತ್ತಮುತ್ತಲು ತಂತಿ ಬೆಲಿ ಹಾಕಲಾಗುತ್ತಿದ್ದು, ಜಿಂಕೆಗಳು ಒಳಗೆಡೆಗೆ ಹೋಗದಂಥ ವಾತಾವರಣ ನಿರ್ಮಾಣವಾಗಿದೆ. ಇದು ವನ್ಯಜೀವಿಗಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಕೆಲ ವರ್ಷಗಳ ಹಿಂದೆ ಇದೇ ಜಾಗದಲ್ಲಿ ಇದ್ದ ಸಾವಿರಾರು ಕೃಷ್ಣ ಮೃಗಗಳು, ಜಿಂಕೆಗಳು ಈಗ ಕೇವಲ ಬೆರಳಣಿಕೆಯಷ್ಟು ಮಾತ್ರ ಕಾಣಸಿಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಕೈಗಾರೀಕರಣ.
ಹೈದರಾಬಾದ್ ಕರ್ನಾಟಕದಲ್ಲೇ ಅತಿ ಹೆಚ್ಚು, ಅಂದರೆ 45,000 ಹೆಕ್ಟರ್ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಬೀದರ್. ಆದರೆ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯ ಅರಣ್ಯ ಪ್ರದೇಶ ಹಾಗೂ ಅರಣ್ಯದಲ್ಲಿ ಇರುವ ಕಾಡು ಪ್ರಾಣಿಗಳು ನಶಿಸಿ ಹೋಗುತ್ತಿವೆ ಎಂಬ ವಾದ ಪ್ರಾಣಿಪ್ರಿಯರದ್ದು.

ತಡೆ ಬೆಲಿಯ ಆಚೆಗೆ ಪ್ರಾಣಿಗಳು ನಿಂತಿರುವುದು
ಈ ದಟ್ಟ ಅರಣ್ಯ ಪ್ರದೇಶದಲ್ಲಿ ಹಿಂಡುಹಿಂಡಾಗಿ ಜಿಂಕೆ, ಕೃಷಮೃಗ, ಮೊಲ, ನವಿಲು, ನರಿಗಳು, ಕಾಡು ಹಂದಿಗಳು, ಮಂಗ, ಮುಳ್ಳು ಹಂದಿ, ತೋಳ, ಸೇರಿದಂತೆ ಇತರೆ ಪ್ರಾಣಿಗಳು ನಿತ್ಯ ಕಣ್ಣಿಗೆ ಬೀಳುತ್ತವೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲವು ಪ್ರಾಣಿಗಳು ನಾನಾ ಕಾರಣದಿಂದ ಮರಣ ಹೊಂದುತ್ತಿವೆ. ಇಷ್ಟೇ ಅಲ್ಲದೇ ರೈತರು ತಮ್ಮ ಬೆಳೆಗಳಿಗೆ ಸಿಂಪಡಿಸುವ ವಿಷಕಾರಿ ಔಷಧಿಗಳಿಂದ ರಾಷ್ಟ್ರೀಯ ಪಕ್ಷಿ ನವಿಲು, ಜಿಂಕೆ, ನರಿ ಸೇರಿದಂತೆ ಇತರೆ ಪ್ರಾಣಿಗಳು ಜೀವ ಕಳೆದುಕೊಳುತ್ತಿವೆ.

ಅಳಿವಿನಂಚಿನಲ್ಲಿರುವ ಪ್ರಾಣಿಗಳು
ಇಲ್ಲಿನ ಸಮಸ್ಯೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೌನ, ಅಮೂಲ್ಯ ಪ್ರಾಣಿ ಮತ್ತು ಅರಣ್ಯ ಸಂಪತ್ತಿನ ಅಳಿವಿಗೆ ಕಾರಣವಾಗುತ್ತಿದೆ. ಸರಕಾರ ಕೂಡಲೇ ಇತ್ತ ಗಮನ ಹರಿಸಿ ಸಂರಕ್ಷಣಾ ಕಾಯ್ದೆಯ ರಕ್ಷಣೆ ಪಡೆದಿರುವ ಕೃಷ್ಣಮೃಗದ ಸಂರಕ್ಷಣೆ ಮತ್ತು ಅದರ ವಾಸಸ್ಥಾನಕ್ಕೆ ಧಕ್ಕೆ ತರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕಿದೆ. ಕೈಗಾರಿಕರಣ, ನಗರೀಕರಣಕ್ಕಿಂತ ಹಸಿರೀಕರಣಕ್ಕೆ ಸರ್ಕಾರ ಉತ್ತೇಜನ ಕೊಡಬೇಕಿದೆ. ಇಲ್ಲವಾದಲ್ಲಿ ಸರ್ಕಾರವೇ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ. ಇಷ್ಟೇ ಅಲ್ಲದೇ ಸಂರಕ್ಷಿತ ಪ್ರಾಣಿಯ ಜೀವಹರಣದ ಆರೋಪ ಹೊರಬೇಕಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.
Published On - 11:00 am, Sun, 20 December 20