
ಬೆಂಗಳೂರು, (ಜೂನ್ 17): ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದೆ (Monsoon Rain) ಬೇಸಿಗೆ ಬಿಸಿಲಿಗೆ ಕೆಆರ್‌ಎಸ್ ಜಲಾಶಯದ (Krishna Raja Sagar (KRS) reservoir) ಒಳ ಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ ಈ ಬಾರಿ ಬೆಳೆಗಳಿಗೆ ನೀರು ಹರಿಸದಿರಲು ನಿರ್ಧರಿಸಲಾಗಿದೆ. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮ ಮತ್ತು ಕಾವೇರಿ ನೀರಾವರಿ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಈ ವೇಳೆ ಮುಂಗಾರು ಕೊರತೆ, ನೀರಿನ ಅಭಾವದ ಕುರಿತಂತ ತೀವ್ರ ಚರ್ಚೆ ನಡೆದಿದೆ. ಇನ್ನು ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್ ಎಸ್ ಡ್ಯಾಂನ ನೀರು ಕುಡಿಯಲು ಮಾತ್ರ ಉಪಯೋಗಿಸಲು ತೀರ್ಮಾನಿಸಲಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ಕಾವೇರಿ ನದಿಯಿಂದ ೯.೧೯ ಟಿಎಂಸಿ ಅಡಿಗಳಷ್ಟು ನೀರು ಬಿಡುಗಡೆ ಮಾಡಬೇಕು. ಆದರೆ, ಮಳೆ ಕೊರತೆ ಕಾರಣದಿಂದಾಗಿ ಈವರೆಗೆ 1.778 ಟಿಎಂಸಿ ಮಾತ್ರ ಬಿಡುಗಡೆ ಮಾಡಲಾಗಿದೆ. ಮಳೆ ಕೊರತೆ ಹೀಗೆಯೇ ಮುಂದುವರಿದರೆ ಇನ್ನೆರಡು ತಿಂಗಳಲ್ಲಿ ಜಲಾಶಯ ಸಂಪೂರ್ಣ ಖಾಲಿಯಾಗಲಿದೆ. ಮುಂದಿನ 2 ತಿಂಗಳಾದ ನಂತರ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪೂರೈಕೆಯಾಗುವ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಪ್ರೀಂಕೋರ್ಟ್ ನಿಗದಿ ಮಾಡಿದಂತೆ ನೀರು ಪೂರೈಸದಿದ್ದರೆ ತಮಿಳುನಾಡು ಮತ್ತೆ ಖ್ಯಾತೆ ತೆಗೆಯಲಿದೆ. ಅದಕ್ಕಾಗಿ ನೀರಿನ ಮಟ್ಟ ಎಷ್ಟಿರಲಿದೆ, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಜತೆಗೆ ಈಗಿರುವ ನೀರನ್ನು ಕುಡಿಯುವ ನೀರಿಗೆ ನ್ಯಾಯಯುತ ಬಳಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ದೇಗುಲ ಗೋಚರಗೊಂಡು ಪ್ರವಾಸಿಗರಿಗೆ ಸಂಭ್ರಮ ತಂದರೆ, ಇತ್ತ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದೆ ಬೇಸಿಗೆ ಬಿಸಿಲಿಗೆ ಕೆಆರ್‌ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ. ಮುಂಗಾರು ಮಳೆಗಾಗಿ ರೈತರ ಮೊಗದಲ್ಲಿ ಆಶಾ ಭಾವನೆ ಕಂಡು ಬಂದರೂ ಜೂನ್ ಎರಡನೇ ವಾರ ಕಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದೆ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ರೈತರಲ್ಲಿ ಆತಂಕ ಹೆಚ್ಚು ಮಾಡಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತರ ಕೃಷಿ ಚಟುವಟಿಕೆ ಜೊತೆಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
124.80 ಗರಿಷ್ಠ ಮಟ್ಟದ ಕೆಆರ್ ಎಸ್ ಜಲಾಶಯದಲ್ಲಿ ಜೂ.16ರ ಬೆಳಗ್ಗೆ 8 ಗಂಟೆ ವೇಳೆಗೆ 81.35 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಲ್ಲಿ ಕೇವಲ 11.394 ಟಿಎಂಸಿ ನೀರು ಸಂಗ್ರಹವಾಗಿದ್ದು, ಅಣೆಕಟ್ಟೆಗೆ 581 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿ, ಕಾಲುವೆಗಳು ಹಾಗೂ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಒಟ್ಟು 436 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.