ಸಿಎಸ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ: ಬಿಜೆಪಿ MLC ರವಿಕುಮಾರ್ಗೆ ತಾತ್ಕಾಲಿಕ ರಿಲೀಫ್
ಕರ್ನಾಟಕ ಸರ್ಕಾರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರರಕಣ ಸಂಬಂಧ ಬಿಜೆಪಿ ವಿಧಾನಪರಿಷತ್ ಎನ್ ರವಿಕುಮಾರ್ ಅವರಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಜೊತೆಗೆ ಒಂದು ಖಡಕ್ ಸೂಚನೆಯೊಂದನ್ನು ಸಹ ನೀಡಿದೆ. ಹಾಗಾದ್ರೆ, ಕೋರ್ಟ್ ನಲ್ಲಿ ನಡೆದ ವಾದ ಪ್ರತಿವಾದ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜುಲೈ 04): ಸರ್ಕಾರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajaneesh) ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಗೆ (N Ravikumar) ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಎಫ್ಐಆರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಜುಲೈ 04) ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court) ಜುಲೈ 8ರ ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೇ ತನಿಖೆಗೆ ಸಹಕರಿಸಲು ರವಿಕುಮಾರ್ ಗೆ ಕೋರ್ಟ್ ಖಡಕ್ ಸೂಚನೆಯನ್ನು ಸಹ ನೀಡಿದೆ. ರಾಜಕಾರಣಿಗಳು ಬಳಸು ಭಾಷೆ ಕೆಳಮಟ್ಟಕ್ಕಿಳಿದಿದೆ ಎಂದು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಮತ್ತೊಂದೆಡೆ ರವಿಕುಮಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮದ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಪ್ರಕರಣ ಸಂಬಂಧ ರವಿಕುಮಾರ್ ಅವರು ಇಂದು (ಜುಲೈ 04) ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ರವಿಕುಮಾರ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ಸಿಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: FIR ದಾಖಲಾಗುತ್ತಿದ್ದಂತೆಯೇ ಸ್ಪಷ್ಟನೆ ಕೊಟ್ಟ ರವಿಕುಮಾರ್
ವಾದ-ಪ್ರತಿವಾದ ಹೇಗಿತ್ತು?
ರವಿಕುಮಾರ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ವಿಧಾನಸೌಧದ ಮುಂದೆ ಎನ್.ರವಿಕುಮಾರ್ ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ಮುಖ್ಯಮಂತ್ರಿಗಳು, ಸರ್ಕಾರ ಸ್ಪಂದಿಸುತ್ತಿಲ್ಲವೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಆದ್ರೆ, ಇದನ್ನು ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗಿದೆ ಎಂದು ಕೋರ್ಟ್ ಗೆ ತಿಳಿಸಿದರು.
ವಿಡಿಯೋ ಕ್ಲಿಪ್ ನಲ್ಲಿ ಏನಿದೆ ಎಂದು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಪ್ರಶ್ನೆಗೆ ಅರುಣ್ ಶ್ಯಾಮ್ ವಿಡಿಯೋ ಕ್ಲಿಪ್ ಹಾಕಿ ತೋರಿಸಿದರು. ಆದ್ರೆ, ಇದಕ್ಕೆ ಎಸ್ ಪಿಪಿ ಬಿ.ಎ.ಬೆಳ್ಳಿಯಪ್ಪ ಆಕ್ಷೇಪಿಸಿದ್ದು, ಅರ್ಜಿದಾರರು ಸಲ್ಲಿಸಿದ ವಿಡಿಯೋ ಕ್ಲಿಪ್ ಪರಿಗಣಿಸಬಾರದು ಎಂದರು.
ಜಡ್ಜ್: ದೂರುದಾರರು ಟಿವಿ9 ನಲ್ಲಿ ಬಂದಿದ್ದು ನೋಡಿದ್ದೇನೆ ಎಂದಿದ್ದಾರೆ. ಇದರ ಆಧಾರದಲ್ಲಿ ಎಫ್ಐಆರ್ ದಾಖಲಿಸಬಹುದೇ ?
ಎಸ್ ಪಿಪಿ ಬೆಳ್ಳಿಯಪ್ಪ: ಈ ಕೇಸಿನಲ್ಲಿ ಮುಖ್ಯ ಕಾರ್ಯದರ್ಶಿ ಸಂತ್ರಸ್ತೆಯಾಗಿದ್ದಾರೆ . ನಾವು ಮಾಧ್ಯಮದ ಹೇಳಿಕೆಯನ್ನೂ ಪಡೆಯುತ್ತೇವೆ. ಯಾರು ಬೇಕಾದರೂ ಕಾನೂನು ಪ್ರಕ್ರಿಯೆ ಆರಂಭಿಸಬಹುದು.
ಜಡ್ಜ್: ಟಿವಿಯಲ್ಲಿ ಎನ್.ರವಿಕುಮಾರ್ ಹೇಳಿಕೆ ನೀಡಿದ್ದಾರೆಂದು ದೂರಿನಲ್ಲಿಲ್ಲ .ಆದ್ರೆ, ಟಿವಿ ವರದಿ ನೋಡಿ ದೂರು ನೀಡಿದ್ದೇನೆಂದು ಹೇಳಿದ್ದಾರೆ. ಹೇಳಿಕೆ ಎಂಬುದಕ್ಕೂ ವರದಿ ಎಂಬುದಕ್ಕೂ ವ್ಯತ್ಯಾಸವಿದೆ ಎಂದು ಸರ್ಕಾರದ ಪರ ವಕೀಲ ರಿಗೆ ಜಡ್ಜ್ ಪ್ರಶ್ನಿಸಿದರು.
ಎಸ್ ಪಿಪಿ ಬೆಳ್ಳಿಯಪ್ಪ: ವಿಡಿಯೋದಲ್ಲಿ ಈ ಪದ ಉಪಯೋಗಿಸಿರುವುದನ್ನು ತೋರಿಸಿ ಎಂದು ಜಡ್ಜ್ ಹೇಳಿದ್ದಕ್ಕೆ ಸರ್ಕಾರದ ಪರ ವಕೀಲ ಬೆಳ್ಳಿಯಪ್ಪ: ವಿಡಿಯೋ ಪ್ಲೇ ಮಾಡಿ ತೋರಿಸಿ, ನಿರೀಕ್ಷಣಾ ಜಾಮೀನು ಸಲ್ಲಿಸಿರುವುದರಿಂದ ಹೈಕೋರ್ಟ್ ರಕ್ಷಣೆ ನೀಡಬಾರದು. ಐಎಎಸ್ ಅಧಿಕಾರಿಗಳು ಇವರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದರು.
ಎಸ್ ಪಿಪಿ ಬೆಳ್ಳಿಯಪ್ಪ: ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡುವುದು ಇವರ ಹವ್ಯಾಸವಾಗಿದೆ . ಈ ಹಿಂದೆಯೂ ಜಿಲ್ಲಾಧಿಕಾರಿ ವಿರುದ್ಧ ಹೇಳಿಕೆ ನೀಡಿದ್ದರು .
ಅರುಣ್ ಶ್ಯಾಮ್ : ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಾದ
ಈ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಜುಲೈ 8ರ ವರೆಗೆ ಬಂಧಿಸುವುದು ಬೇಡ. ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಿದ್ದು, ತನಿಖೆಗೆ ಸಹಕರಿಸಲು ಅರ್ಜಿದಾರ ಎನ್.ರವಿಕುಮಾರ್ ಗೆ ಹೈಕೋರ್ಟ್ ಸೂಚನೆ ನೀಡಿದೆ.
ರಾಜಕಾರಣಿಗಳು ಬಳಸು ಭಾಷೆ ಕೆಳಮಟ್ಟಕ್ಕಿಳಿದಿದೆ ಎಂದು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಅಸಮಾಧಾನ ಹೊರಹಾಕಿ ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿದರು.
Published On - 5:30 pm, Fri, 4 July 25