ಸಿಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: FIR ದಾಖಲಾಗುತ್ತಿದ್ದಂತೆಯೇ ಸ್ಪಷ್ಟನೆ ಕೊಟ್ಟ ರವಿಕುಮಾರ್
ಮಾತು ಆಡಿದ್ರೆ ಹೋಯ್ತು, ಮುತ್ತು ಹೊಡೆದ್ರೆ ಹೋಯ್ತು ಎನ್ನುವಂತೆ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಮತ್ತೆ ಅಧಿಕಾರಿಯ ವಿರುದ್ಧ ನಾಲಗೆ ಹರಬಿಟ್ಟ ಆರೋಪ ಕೇಳಿಬಂದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ರವಿಕುಮಾರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪರಿಷತ್ ಸಭಾಪತಿಗೆ ಕಾಂಗ್ರೆಸ್ ದೂರು ನೀಡಿದೆ. ಈ ವಿಚಾರ ಭಾರೀ ಚರ್ಚೆಗಾಗುತ್ತಿದ್ದಂತೆಯೇ ಇದೀಗ ಸ್ವತಃ ರವಿಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, (ಜುಲೈ 03): ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajaneesh) ವಿರುದ್ಧ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ (N Ravikumar) ಅಸಂಸದೀಯ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ರವಿಕುಮಾರ್ ವಿರುದ್ಧ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj horatti) ಅವರಿಗೆ ಕಾಂಗ್ರೆಸ್ (Congress) ದೂರು ನೀಡಿದೆ. ಮತ್ತೊಂದೆಡೆ ಜೆ.ಪಿ.ನಗರದ ನಂದಾದೀಪ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ನೀಡಿರುವ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ರವಿಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.
ರವಿಕುಮಾರ್ ಸ್ಪಷ್ಟನೆಯಲ್ಲೇನಿದೆ?
ಈ ಸಂಬಂಧ ಇಂದು (ಜುಲೈ 03) ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ರವಿಕುಮಾರ್, ಸಿಎಸ್ ವಿರುದ್ಧ ನಾನು ಯಾವ್ದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಆದ್ರೆ ಅವಹೇಳನಕಾರಿ ಪದ ಬಳಸಿದ್ದೇನೆಂದು ಪ್ರಚಾರ ಮಾಡುತ್ತಿರುವುದು ನನಗೆ ಆಘಾತ ಉಂಟು ಮಾಡಿದೆ. ಅಧಿಕೃತ ಕೆಲಸದ ನಿಮಿತ್ತವಾಗಿ ನಾನು ಕಳೆದ ಮೂರು ದಿನಗಳಿಂದ ಹೈದರಾಬಾದ್ ನಲ್ಲಿದ್ದೆ. ಜೂನ್ 30ರಂದು ನಡೆದಿದ್ದ ಪ್ರತಿಭಟನೆ ವೇಳೆ ಸಿಎಸ್ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ MLC ರವಿಕುಮಾರ್: ಸಿಎಸ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ, ದೂರು ದಾಖಲು
ಜೂ.30ರಂದು ಪ್ರತಿಭಟನೆ ವೇಳೆ ಸಿಎಸ್ ಬಗ್ಗೆ ಮಾತನಾಡಿಲ್ಲ. ಸಿಎಂ ಅವರು ಭೇಟಿಗೆ ಸಿಗುತ್ತಿಲ್ಲ. ಮಾನ್ಯ ಸಿಎಸ್ ಅವರು ಸಿಗುತ್ತಿಲ್ಲ. ಸಿಎಸ್ ಅವರು ಬ್ಯುಸಿ ಇರುತ್ತಾರೆ ಎಂದು ಹೇಳಿದ್ದನ್ನ ಬಿಟ್ಟರೆ ಅವರ ವಿರುದ್ಧ ಯಾವುದೇ ಅವಹೇಳನಕಾರಿ ಪದವನ್ನ ಬಳಸಿಲ್ಲ. ಪ್ರತಿಭಟನೆ ವೇಳೆ ಸಿಎಸ್ ವಿರುದ್ಧ ಯಾವುದೇ ಭಾಷಣ ಸಹ ಮಾಡಿಲ್ಲ . ನನ್ನ ಬಗ್ಗೆ ಹರಡುತ್ತಿರುವ ವರದಿಯು ಸಂಪೂರ್ಣ ಆಧಾರರಹಿತ. ದಾರಿತಪ್ಪಿಸುವ, ದುರುದ್ದೇಶಪೂರಿತ, ದೂಷಣೆಯಿಂದ ಕೂಡಿದೆ. ಈ ಆರೋಪವನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ ಎಂದಿದ್ದಾರೆ.
ರವಿಕುಮಾರ್ ವಿರುದ್ಧ ಸಭಾಪತಿಗೆ ದೂರು
ಇದನ್ನು ಕಾಂಗ್ರೆಸ್ ಖಂಡಿಸಿದ್ದು, ರವಿಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದೆ. ಅಲ್ಲದೇ ಸಿಎಸ್ ವಿರುದ್ಧ ಆಕ್ಷೇಪರ್ಹ ಪದ ಬಳಿಕೆ ಮಾಡಿದ ರವಿಕುಮಾರ್ ವಿರುದ್ಧ ಸೂಕ್ತಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಸಹ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಇಂದು (ಜುಲೈ 03) ದೂರು ನೀಡಿದೆ. ಇನ್ನು ಈ ದೂರು ಸ್ವೀಕರಿಸಿದ ಸಭಾಪತಿ, ಶಾಸಕರನ್ನ ಅರೆಸ್ಟ್ ಮಾಡಿದ್ರೆ ನಮಗೆ ಮಾಹಿತಿ ಕೊಡಬೇಕು ಅಷ್ಟೆ. ನಾವು ರವಿಕುಮಾರ್ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ. ನಾನು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲಾ ಕೂಲಂಕಷವಾಗಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ರವಿಕುಮಾರ್ ವಿರುದ್ಧ ಕ್ರಮಕ್ಕೆ IAS ಸಂಘ ಒತ್ತಾಯ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಎಂಎಲ್‌ಸಿ ಎನ್.ರವಿ ಕುಮಾರ್ ನೀಡಿರುವ ಅವಹೇಳನಕಾರ ಹೇಳಿಕೆಯನ್ನು ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಘ ಬಲವಾಗಿ ಖಂಡಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ,ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಖುಷ್ಬೂ ಗೋಯಲ್ ಚೌಧರಿ ಅವರನ್ನೊಳಗೊಂಡ ನಿಯೋಗವು ಸಂಘದ ಪರವಾಗಿ ಮನವಿ ಸಲ್ಲಿಸಿ, ರವಿ ಕುಮಾರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ರವಿಕುಮಾರ್ ವಿರುದ್ಧ ಎಫ್‌ಐಆರ್
ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ. ಅಲ್ಲದೇ ಈ ಬಗ್ಗೆ ದೂರು ಸಹ ನೀಡಿದೆ. ಮತ್ತೊಂದೆಡೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೆ.ಪಿ.ನಗರದ ನಂದಾದೀಪ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಎಂಬುವರು ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 351(3), 75(3), 79ರ ಅಡಿಯಲ್ಲಿ ಎಫ್‌ಐಆರ್ ಎಫ್‌ಐಆರ್ ದಾಖಲಾಗಿದೆ.
ಸೆಕ್ಷನ್ ಏನು ಹೇಳಿತ್ತೆ?
BNS ಸೆಕ್ಷನ್ 351(3): ಅನೈತಿಕತೆಯನ್ನ ಆರೋಪಿಸುವ ಕ್ರಿಮಿನಲ್ ಬೆದರಿಕೆ, 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ಒಳಗೊಂಡಿದೆ.
BNS ಸೆಕ್ಷನ್ 75(3): ಲೈಂಗಿಕ ಕಿರುಕುಳದ ಅಪರಾಧ, ಒಂದು ವರ್ಷದವರೆಗೂ ಜೈಲು ಶಿಕ್ಷೆ ಒಳಗೊಂಡಿದೆ.
BNS ಸೆಕ್ಷನ್ 79: ಮಹಿಳೆಯ ನಮ್ರತೆಯನ್ನ ಪದ, ಶಬ್ದ, ಕ್ರಿಯೆಯಿಂದ ಅಪಮಾನ, 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ಒಳಗೊಂಡಿದೆ.
ಅಷ್ಟಕ್ಕೂ ರವಿಕುಮಾರ್ ವಿರುದ್ಧ ಆರೋಪವೇನು?
ಅಷ್ಟಕ್ಕೂ ಆಗಿದ್ದೇನಂದ್ರೆ ಜೂನ್ 30ರಂದು ಪ್ರತಿಭಟನೆ ವೇಳೆ ರವಿಕುಮಾರ್ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ನಿಂದನೆ ಮಾಡಿದ್ದಾರೆ. ಪ್ರತಿಭಟನೆ ಬಳಿಕ ಸಿಎಸ್‌ಗೆ ದೂರು ಕೊಡಲು ಬಿಜೆಪಿ ನಿಯೋಗ ಹೋಗಿತ್ತು. ಈ ವೇಳೆ ಬಿಜೆಪಿ ನಿಯೋಗಕ್ಕೆ ಶಾಲಿನಿ ರಜನೀಶ್ ಸಿಗಲಿಲ್ಲ. ಶಾಲಿನಿ ರಜನೀಶ್ ಸಿಗದೇ ಇದ್ದಾಗ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Thu, 3 July 25