ಗುತ್ತಿಗೆದಾರನ ನಿರ್ಲಕ್ಷ್ಯ; ಡಿಟೋನೇಟರ್ ಸ್ಪೋಟಗೊಂಡು ಮಕ್ಕಳು ಆಸ್ಪತ್ರೆಗೆ ದಾಖಲು
ಆ ಮಕ್ಕಳು ಅದರ ಜೊತೆ ಆಡುತ್ತಿದ್ದರು. ಅದರ ಜೊತೆ ಆಡುತ್ತಿದ್ದಂತೆ ಅದರ ಬಗ್ಗೆ ಕುತೂಹಲವೂ ಹೆಚ್ಚಾಗಿತ್ತು. ನಂತ್ರ ಅದರೊಳಗೆ ಏನಿದೆ ಅಂತ ನೋಡೋಕೆ ಕಲ್ಲಿನಿಂದ ಜಜ್ಜಿದ್ರೂ. ಆಮೇಲೆ ಅಲ್ಲಿ ನಡೆದಿದ್ದು ಯಾರು ಊಹಿಸಲಾಗದಂತ ಘಟನೆ.
ಹಾಸನ: ಜಿಲ್ಲೆ ಆಲೂರು ತಾಲೂಕಿನ ಚನ್ನೇನಹಳ್ಳಿಯ ನಿವಾಸಿಗಳಾದ ಅಭಿಷೇಕ್ ಹಾಗೂ ಕೃತಿಕ ಕೈಗೆ ಸಿಕ್ಕ ಡಿಟೋನೇಟರ್ ತಂದು ಜಜ್ಜಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಚನ್ನೇನಹಳ್ಳಿಯಲ್ಲಿ ನಡೆಯುತ್ತಿರೋ ಎತ್ತಿನಹೊಳೆ ಕಾಮಗಾರಿ ಕಲ್ಲು ಸಿಡಿಸಲು ತಂದಿದ್ದ ಡಿಟೋನೇಟರ್ಗಳನ್ನ ಗುತ್ತಿಗೆದಾರ ಕೆಲಸಮುಗಿದ ಮೇಲೆ ಅಲ್ಲೇ ಬಿಟ್ಟು ಹೋಗಿದ್ದ. ಸಾಕಷ್ಟು ಪ್ರಮಾಣದಲ್ಲಿದ್ದ ಡಿಟೋನೇಟರ್ ಅನ್ನು ಕುತೂಹಲದಿಂದ ತಂದಿದ್ದ ಮಕ್ಕಳು ಅದನ್ನ ಕಲ್ಲಿನಿಂದ ಜಜ್ಜಿದ್ದಾರೆ. ಕಲ್ಲಿನಿಂದ ಜಜ್ಜುತ್ತಿದ್ದಂತೆ ಡಿಟೋನೇಟರ್ ಸ್ಪೋಟಗೊಂಡು ಮಕ್ಕಳಿಗೆ ತೀವ್ರವಾಗಿ ಗಾಯವಾಗಿದೆ. ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿಂಗಳುಗಳ ಹಿಂದೆಯೇ ಕಾಮಗಾರಿ ಮುಗಿಸಿ ಹೋಗಿರೋ ಗುತ್ತಿಗೆದಾರ ನಿರ್ಲಕ್ಷ್ಯದಿಂದ ಡಿಟೋನೇಟರ್ ಗಳನ್ನ ಅಲ್ಲಿಯೇ ಬಿಟ್ಟು ಹೋಗಿದ್ದ. ಸಾಕಷ್ಟು ಪ್ರಮಾಣದಲ್ಲಿ ವೈಯರ್ ರೀತಿಯಲ್ಲಿದ್ದ ಅದನ್ನ ಮಕ್ಕಳು ಕುತೂಹಲದಿಂದ ಮನೆಯ ಬಳಿ ಹೊತ್ತು ತಂದಿದ್ದಾರೆ. ಅದನ್ನ ಕಲ್ಲಿನಿಂದ ಜಜ್ಜಿ ಬೇರ್ಪಡಿಸಲು ಯತ್ನಿಸಿದ ವೇಳೆ ಸ್ಫೋಟವಾಗಿದೆ. ಸ್ಫೋಟದ ತೀವ್ರತೆ ಸುತ್ತಮುತ್ತಲ ಹಳ್ಳಿಗಳಿಗೂ ಕೇಳಿದೆ. ಆದ್ರೆ ಎರಡು ಮೂರು ಡಿಟೋನೇಟರ್ ಮಾತ್ರ ಸ್ಫೋಟವಾಗಿದ್ದು, ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬಾಂಬ್ ನಿಸ್ಕ್ರಿಯಾದಳ ಸಿಬ್ಬಂದಿ ಕೂಡ ಭೇಟಿ ನೀಡಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಅಲ್ಲಿದ್ದ ಡಿಟೋನೇಟರ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ರಾಜ್ಯದಲ್ಲಿ ಸ್ಫೋಟಕಗಳಿಂದ ದೊಡ್ಡ ದೊಡ್ಡ ಅನಾಹುತ ನಡೆಯುತ್ತಿದ್ದರು, ಸಂಬಂಧ ಪಟ್ಟವರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲಿ ಕೂಡ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಮಕ್ಕಳು ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ.
ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ; ಮಲೆನಾಡು, ಕರಾವಳಿ ಭಾಗದಲ್ಲಿ ಇಂದು ಯೆಲ್ಲೋ ಅಲರ್ಟ್