ಧರ್ಮಸ್ಥಳ ಕೇಸ್: ಕೊನೆಗೂ ಚಿನ್ನಯ್ಯನಿಗೆ ಜೈಲಿನಿಂದ ಬಿಡುಗಡೆ ಭಾಗ್ಯ, ಕೋರ್ಟಿಗೆ ಶ್ಯೂರಿಟಿ ಕೊಟ್ಟವರ್ಯಾರು?
ಧರ್ಮಸ್ಥಳ ಪ್ರಕರಣದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಾಸ್ಕ್ ಮ್ಯಾನ್ ಎಂದೇ ಪ್ರಖ್ಯಾತನಾಗಿದ್ದ ಸಿ.ಎನ್. ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ, ಬಿಡುಗಡೆಯ ಭಾಗ್ಯವಿಲ್ಲದೆ ಜೈಲಿನಲ್ಲಿಯೇ ಉಳಿಯುವಂತಾಗಿತ್ತು. ಇದರಿಂದ ಮಂಕಾಗಿದ್ದ ಚಿನ್ನಯ್ಯ, ಇಂದು ಸಂಜೆ ವೇಳೆಗೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಹಾಗಾದ್ರೆ, ಮಾಸ್ಕ್ ಮ್ಯಾನ್ಗೆ ಶ್ಯೂರಿಟಿ ಸಹಿ ಹಾಕಿದವರು ಯಾರು?

ಮಂಗಳೂರು, (ಡಿಸೆಂಬರ್ 17): ಧರ್ಮಸ್ಥಳ ಪ್ರಕರಣಕ್ಕೆ (dharmasthala mass burial case )ಸಂಬಂಧಿಸಿದಂತೆ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ (Mask man chinnayya) ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ. ಜಾಮೀನು ಸಿಕ್ಕಿದ್ದರೂ ಸಹ ಶ್ಯೂರಿಟಿ ಇಲ್ಲದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯಯ್ಯ ಮಂಕಾಗಿದ್ದು, ಸಹ ಕೈದಿಗಳೊಂದಿಗೆ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದ. ಆದ್ರೆ, ಇದೀಗ ಒಂದು ಲಕ್ಷ ಬಾಂಡ್, ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್ಗೆ ಶ್ಯೂರಿಟಿ ನೀಡಲಾಗಿದೆ. ಇದರಿಂದ ಆರೋಪಿ ಬುರುಡೆ ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ. ಹೀಗಾಗಿ ಚಿನ್ನಯ್ಯನಿಗೆ ಜಾಮೀನು ಸಿಕ್ಕು 23 ದಿನಗಳ ಬಳಿಕ ಬಂಧನದಿಂದ ಮುಕ್ಸಿ ಸಿಕ್ಕಿದ್ದು, ಆಚೆ ಬಂದ ಬಳಿಕ ಈ ಪ್ರಕರಣದ ಬಗ್ಗೆ ಏನಾದರೂ ಸ್ಫೋಟಕ ಅಂಶವನ್ನು ಬಿಚ್ಚಿಡುತ್ತಾನೆಯೇ ಎಂಬ ಕುತೂಹಲವೂ ಸಹ ಇದೆ.
ಇಂದು (ಡಿಸೆಂಬರ್ 17) ಚಿನ್ನಯ್ಯ ಪತ್ನಿ ಮಲ್ಲಿಕಾ ಒಂದು ಲಕ್ಷ ಬಾಂಡ್ ಕೊಟ್ಟಿದ್ದು, ಜೊತೆಗೆ ಇಬ್ಬರು ಜಾಮೀನುದಾರರು ಮತ್ತು ಒಬ್ಬರ ಶ್ಯೂರಿಟಿ ಕೊಡಿಸಿದ್ದಾರೆ. ಬಳಿಕ ಕೋರ್ಟ್, ಡಿಸೆಂಬರ್ 17 ರಂದು ಚಿನ್ನಯ್ಯನ ಬಿಡುಗಡೆಗೆ ಆದೇಶ ಹೊರಡಿಸಿದೆ. ಸದ್ಯ ಕೋರ್ಟಿನ ಆದೇಶ ಹಿಡಿದು ಮಲ್ಲಿಕಾ ಮತ್ತು ಸಹೋದರಿ ರತ್ನ ಶಿವಮೊಗ್ಗ ಜೈಲಿನತ್ತ ಪ್ರಯಾಣ ಬೆಳೆಸಿದ್ದು, ಇಂದು ಸಂಜೆ ವೇಳೆಗೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬಿಗ್ ರಿಲೀಫ್
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ನವೆಂಬರ್ 24ರಂದು ಜಾಮೀನು ಸಿಕ್ಕಿತ್ತು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ.
ಜಾಮೀನು ಸಿಕ್ಕ ಬಳಿಕ ಹೊರಬರುವ ಖುಷಿಯಲ್ಲಿದ್ದ ಚಿನ್ನಯ್ಯನಿಗೆ ಆರ್ಥಿಕ ಸಮಸ್ಯೆಗಳು ಎದುರಾಗಿತ್ತು. ಹೀಗಾಗಿ ಮಾಸ್ಕ್ ಮ್ಯಾನ್ ಮಂಕಾಗಿದ್ದ. ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನನ್ನು ಬಳಸಿಕೊಂಡು ಬುರುಡೆ ಗ್ಯಾಂಗ್ ಸಹ ಅಂತರ ಕಾಯ್ದುಕೊಂಡಿತ್ತು.ಹೀಗಾಗಿ ಜಾಮೀನು ಆದೇಶ ಬಳಿಕ 23 ದಿನಗಳಿಂದ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿರಬೇಕಾಗಿತ್ತು.
ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್‌ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಅಂತಿಮವಾಗಿ ಜಾಮೀನು ಸಿಕ್ಕು 23 ದಿನಗಳ ಬಳಿಕ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾಗುತ್ತಿದ್ದು, ಆಚೆ ಬಂದ ಬಳಿಕ ಧರ್ಮಸ್ಥಳ ಪ್ರಕರಣ ಸಂಬಂಧ ಏನಾದರೂ ಮಾಹಿತಿ ಬಹಿರಂಗಪಡಿಸಬಹುದು ಎನ್ನುವ ಕುತೂಹಲ ಮೂಡಿಸಿದೆ. ಇನ್ನು ತಮ್ಮ ವಿರುದ್ಧ ಏನಾದರೂ ಆರೋಪ ಮಾಡಬಹುದು ಎಂಬ ಆತಂಕದಲ್ಲಿ ಬುರುಡೆ ಗ್ಯಾಂಗ್ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



