ಗೃಹ’ಲಕ್ಷ್ಮೀ’ ವಿವಾದ: ಹಣ ಪಾವತಿ ಆಗದಿರೋದ್ಯಾಕೆ? ಬಾಕಿ ಮೊತ್ತ ಜಮೆ ಯಾವಾಗ?; ಇಲ್ಲಿದೆ ಮಾಹಿತಿ
ಗೃಹಲಕ್ಷ್ಮೀ ಯೋಜನೆ ಹಣ ಪಾವತಿ ವಿಳಂಬದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನಕ್ಕೆ ತಾವು ನೀಡಿದ್ದ ಮಾಹಿತಿ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದ್ರೆ ವಿಪಕ್ಷ ಬಿಜೆಪಿ ಅವರ ಕ್ಷಮೆಗೆ ಪಟ್ಟು ಹಿಡಿದ ಕಾರಣ ವಿಧಾನಸಭೆಯಲ್ಲಿ ಕೋಲಾಹಲವೇ ನಡೆದಿದೆ. ಅಷ್ಟಕ್ಕೂ ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗದಿರೋದ್ಯಾಕೆ? ಬಾಕಿ ಮೊತ್ತವನ್ನು ಸರ್ಕಾರ ಯಾವಾಗ ಪಾವತಿ ಮಾಡುತ್ತೆ? ಎಂಬ ಮಾಹಿತಿ ಇಲ್ಲಿದೆ.

ಬೆಳಗಾವಿ, ಡಿಸೆಂಬರ್ 17: ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳ ಆಕ್ರೋಶ, ರೋಷಾವೇಶಕ್ಕೆ ಇವತ್ತಿನ ವಿಧಾನಸಭೆ ಕಲಾಪ ಸಾಕ್ಷಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಕೂಡಲೇ ಸದನಕ್ಕೆ ಕರೆಸಿ ಎಂದು ಪಟ್ಟು ಹಿಡಿದುಸಭಾತ್ಯಾಗ ಮಾಡಿದ ಪ್ರಸಂಗವೂ ನಡೆದಿದೆ. ಅಂತಿಮವಾಗಿ ಸದನಕ್ಕೆ ಬಂದ ಸಚಿವರು ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ರೂ ಸದನ ಮಾತ್ರ ಶಾಂತವಾಗಿಲ್ಲ.
ಸಚಿವರ ವಿಷಾದ, ಕ್ಷಮೆಗೆ ಬಿಜೆಪಿ ಪಟ್ಟು
ಪ್ರತಿಪಕ್ಷಗಳ ಹೋರಾಟದ ಬಳಿಕ ವಿಧಾನಸಭೆಗೆ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ನೀಡದಿರೋದನ್ನ ಒಪ್ಪಿಕೊಂಡಿದ್ದಾರೆ. ತಪ್ಪು ಮಾಹಿತಿ ನೀಡಿದ್ದಕ್ಕೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ 23 ಕಂತು ಪಾವತಿಸಿದ್ದೇವೆ. ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಹಣ ಕೊಟ್ಟಿದ್ದೇವೆ ಅಂತಾ ಮಾಹಿತಿ ಇತ್ತು. ಆದರೆ ಬಳಿಕ ವಿಚಾರಿಸಿದಾಗ 2 ತಿಂಗಳ ಹಣ ಬಾಕಿ ಇದೆ ಅಂತಾ ತಿಳಿಯಿತು. ಸದನವನ್ನು ತಪ್ಪು ದಾರಿಗೆಳೆಯುವ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಜೊತೆಗೆ ನಾನು ಮಹಿಳೆ ಎಂದು ಈ ರೀತಿ ಮಾಡುತ್ತಿದ್ದೀರ ಎಂದು ಸಚಿವರು ಹೇಳಿದ್ದು, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆಗೆ ಬಿಜೆಪಿ ಪಟ್ಟು ಹಿಡಿದ ಕಾರಣ ಸದನದಲ್ಲಿ ಕೆಲಕಾಲ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.
ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆ ಬಗ್ಗೆ ತಪ್ಪು ಲೆಕ್ಕ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್; 5 ಸಾವಿರ ಕೋಟಿ ಹಣ ಎಲ್ಲಿ ಹೋಯ್ತು?
ವಿವಾದ ಏನು?
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ಸದನದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಣವನ್ನು ಆಗಸ್ಟ್ ತಿಂಗಳವರೆಗೂ ನೀಡಿದ್ದೇವೆ ಎಂದಿದ್ದರು. ಆದ್ರೆ ಸಚಿವರು ಹೇಳಿರುವ ರೀತಿ ಹಣ ಬಿಡುಗೆ ಆಗಿಲ್ಲ ಎಂಬ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಯನ್ನೇ ಶಾಸಕರು ಬಿಡುಗಡೆ ಮಾಡಿದ್ದ ಕಾರಣ, ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. 5 ಸಾವಿರ ಕೋಟಿ ಹಣ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದ್ದವು.
ಗೊಂದಲ ಆಗಿದ್ದೆಲ್ಲಿ?
ಸಚಿವರು ಸದನದಲ್ಲಿ ತಿಳಿಸಿರುವಂತೆ ಆಗಸ್ಟ್ ತಿಂಗಳವರೆಗಿನ ಗೃಹಲಕ್ಷ್ಮೀ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿರೋದು ನಿಜ. ಆದರೆ ನಡುವಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಮಹಿಳೆಯರ ಕೈಸೇರಿಲ್ಲ. ಅದ್ಯಾವ ಕಾರಣಕ್ಕೆ ಅದೆರಡು ತಿಂಗಳು ಹಣ ಬಿಡುಗಡೆ ಆಗಿಲ್ಲ ಎನ್ನುವುದು ಸದ್ಯ ಉದ್ಭವಿಸಿರೋ ಪ್ರಶ್ನೆ.
ಹಣ ಬಿಡುಗಡೆ ಆಗದಿರೋದ್ಯಾಕೆ?
ಯಾವ ಕಾರಣಕ್ಕಾಗಿ ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ ಎಂಬ ಅಧಿಕೃತ ಮಾಹಿತಿ ಈವರೆಗೂ ಸಿಕ್ಕಿಲ್ಲ. ಆದರೆ ಮೂಲಗಳ ಪ್ರಕಾರ ಇಲಾಖೆಗಳಿಂದ ನಿರೀಕ್ಷಿತ ಆದಾಯ ಸರ್ಕಾರಕ್ಕೆ ಬಾರದ ಕಾರಣ ಹಣದ ಅಭಾವ ಆಗಿರುವ ಸಾಧ್ಯತೆ ಇರಬಹುದು. ಅಥವಾ ಆರ್ಥಿಕ ವರ್ಷವೂ ಮುಗಿಯುತ್ತ ಬಂದ ಕಾರಣ ಇಲಾಖೆಗಳ ಮೇಲೆ ಒತ್ತಡ ಹೆಚ್ಚಿ ಹಣ ಜಮಾವಣೆ ವಿಳಂಬ ಆಗಿರಬುದು ಎನ್ನಲಾಗಿದೆ.
ಬಾಕಿ ಹಣ ಜಮಾವಣೆ ಯಾವಾಗ?
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂಬುದನ್ನು ಸಚಿವರು ಒಪ್ಪಿಕೊಂಡಿದ್ದರೂ ಆ ಬಾಕಿ ಹಣ ಜಮಾವಣೆ ಯಾವಾಗ ಆಗಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಪ್ರಸಕ್ತ ಆರ್ಥಿಕ ವರ್ಷ ಮುಗಿಯುತ್ತ ಬಂದ ಹಿನ್ನೆಲೆ ವಿವಿಧ ಕಾಮಗಾರಿಗಳ ಬಿಲ್ಲಿಂಗ್ನಂತಹ ಕೆಲಸಗಳು ಈಗ ಹೆಚ್ಚಾಗಿ ನಡೆಯಲಿವೆ. ಹೀಗಾಗಿ ಇವುಗಳ ಪಾವತಿಗೆ ಅಧಿಕ ಹಣದ ಅವಶ್ಯಕತೆ ಸರ್ಕಾರಕ್ಕಿದ್ದು, ಬಾಕಿ ಹಣ ಜಮಾವಣೆ ಮತ್ತಷ್ಟು ವಿಳಂಬವಾದರೂ ಆಗಬಹುದು ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Wed, 17 December 25




