ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ!

ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್ ಪ್ರಕರಣಕ್ಕೆ ಮತ್ತೊಂದು ಸ್ಫೊಟಕ ತಿರುವು ಸಿಕ್ಕಿದೆ. ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ಷಡ್ಯಂತ್ರದ ಹಲವು ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ತನಿಖೆಯ ಅಂತಿಮ ವರದಿ ಸಲ್ಲಿಸದ SIT ಕ್ರಮವನ್ನೂ ಪ್ರಶ್ನಿಸಿದ್ದಾನೆ. ರಿಟ್ ಅರ್ಜಿಯಲ್ಲಿ ಬಹಿರಂಗಪಡಿಸಿದ ಅಂಶಗಳೇನು, ಹೈಕೋರ್ಟ್ ಹೇಳಿದ್ದೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ!
ನಟ ಪ್ರಕಾಶ್ ರಾಜ್ ಹಾಗೂ ಪೊಲೀಸ್ ಜತೆ ಚಿನ್ನಯ್ಯ
Image Credit source: TV9 Network
Edited By:

Updated on: Jun 12, 2026 | 6:45 AM

ಬೆಂಗಳೂರು, ಜೂನ್ 12: ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್ ಕೇಸ್‌ಗೆ (Dharmasthala Skull Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಚಿನ್ನಯ್ಯ (Chinnayya) ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ SIT ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾನೆ. ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ನಟ ಪ್ರಕಾಶ್ ರಾಜ್ (Prakash Raj) ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಚಿನ್ನಯ್ಯ ರಿಟ್ ಅರ್ಜಿಯಲ್ಲೇನಿದೆ?

‘ವಿಠಲ್ ಗೌಡ ತಮ್ಮನ್ನು ಮಹೇಶ್ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಫನ್‌ ಮಾಡಲಾಗಿದೆ. ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳಲು ನಿರ್ದೇಶಿಸಿದರು. ನಂತರ ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತಿತರರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ 5 ಸಾವಿರ, 15 ಸಾವಿರ ಹಣ ನೀಡುತ್ತಿದ್ದರು. ನಂತರ ಬೆಂಗಳೂರಿನ ಜಯಂತ್ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆದುಕೊಂಡರು. ನಂತರ ವಕೀಲರ ಕಚೇರಿಗೆ ಕರೆದೊಯ್ದು ಅಲ್ಲಿ ಸಹಿ ಪಡೆದರು. ನಂತರ ಸುಜಾತಾ ಭಟ್‌ ಅವರೊಂದಿಗೆ ಗಿರೀಶ್ ಮಟ್ಟಣ್ಣನವರ್ ತಮ್ಮನ್ನೂ ದೆಹಲಿಗೆ ಸುಪ್ರೀಂಕೋರ್ಟ್‌ಗೆ ಕರೆದೊಯ್ದರು. ನಂತರ ಉಜಿರೆಗೆ ತೆರಳಿದಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಕೂಡಿ ಹಾಕಲಾಗಿತ್ತು. ಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ಅವರ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಸುತ್ತಿದ್ದರು. ವಕೀಲರು ಹೇಳಿದಂತೆ ಕೋರ್ಟ್‌ಗೆ ಹೇಳದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುವುದಾಗಿ ಬೆದರಿಸಿದ್ದರು. ಸಮೀರ್ ಎಂ.ಡಿ. ಅಜಯ್ ಅವರ ಯೂಟ್ಯೂಬ್ ಚಾನಲ್‌ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್ ಮಾಡಿಸಲಾಯಿತು. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಭರವಸೆ ನೀಡಿದ್ದರು’
ಎಂದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಉಲ್ಲೇಖವಾಗಿದೆ.

ಹೀಗೆ, ಬುರುಡೆ ಗ್ಯಾಂಗ್‌ನ ಷಡ್ಯಂತ್ರವನ್ನು ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಮತ್ತೊಂದು ಸ್ಫೋಟಕ ಹೆಸರನ್ನು ಬಯಲಿಗೆ ತಂದಿದ್ದಾನೆ. ಬಹುಭಾಷಾ ಖ್ಯಾತ ನಟ ಪ್ರಕಾಶ್‌ ರಾಜ್‌ ಹೆಸರನ್ನೂ ಸಹ ಚಿನ್ನಯ್ಯ ಉಲ್ಲೇಖ ಮಾಡಿದ್ದಾನೆ.

ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ

ತಲೆ ಬುರುಡೆ ನೀಡಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೇರಳದ ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ರಾತ್ರಿ 8 ಗಂಟೆಗೆ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಅರ್ಜಿದಾರರಿಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕು. ತಾವು 29 ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು. ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದಾಗ ಸಂಭ್ರಮಿಸಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿತೆಂದು ಸಂಭ್ರಮಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವರ್ ಬಂಗ್ಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ 200 ಕೋಟಿ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಅವರು ಹೇಳಿದ ಜಾಗಗಳನ್ನು SITಗೆ ತೋರಿಸುವಂತೆ ಸೂಚಿಸಿ, ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಆದರೆ ಅಲ್ಲಿ ಯಾವುದೇ ಶವದ ಅವಶೇಷ ಸಿಗಲಿಲ್ಲ. ಧರ್ಮಸ್ಥಳದ ವಿರುದ್ಧ ಇವರ ಷಡ್ಯಂತ್ರದಿಂದ ಭೀತನಾಗಿ ಸತ್ಯ ಹೇಳಲು ತೀರ್ಮಾನಿಸಿದೆ. ನಂತರ SIT ಮುಂದೆ ಷಡ್ಯಂತ್ರದ ಹೇಳಿಕೆ ನೀಡಿದೆ ಎಂದು ಚಿನ್ನಯ್ಯ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ: 200 ಕೋಟಿ ಬಜೆಟ್ ಇಟ್ಟುಕೊಂಡು ಷಡ್ಯಂತ್ರ

ಹೀಗೆ, ಇಡೀ ಪ್ರಕರಣದಲ್ಲಿ ಸ್ಫೋಟಕ ತಿರುವು ಎಂಬಂತೆ ಪ್ರಕಾಶ್‌ ರಾಜ್‌ ಹೆಸರನ್ನೂ ಚಿನ್ನಯ್ಯ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವುದು ತೀವ್ರ ಅಚ್ಚರಿ ಮೂಡಿಸಿದೆ. ತಾವು ಹೇಳಿಕೆ ನೀಡಿದ ಬಳಿಕ ಷಡ್ಯಂತ್ರ ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರ, ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಚಿನ್ನಯ್ಯ ಕೋರಿದ್ದಾನೆ. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ SITಗೆ ನೋಟಿಸ್ ಜಾರಿಗೊಳಿಸಿದೆ. ಜೂನ್ 29 ರೊಳಗೆ SIT ತನಿಖೆಯ ಸ್ಥಿತಿಗತಿ ಬಗ್ಗೆ ವಿವರ ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ramesha M
Follow Us