ಸಿದ್ದರಾಮಯ್ಯ ಆಡಳಿತವನ್ನು ಐಸಿಸ್ ಆಡಳಿತಕ್ಕೆ ಹೋಲಿಕೆ: ಪ್ರಲ್ಹಾದ್ ಜೋಶಿ ವಿರುದ್ಧ ಸಚಿವ ಸಂತೋಷ್ ಲಾಡ್ ಆಕ್ರೋಶ
ಸಿದ್ದರಾಮಯ್ಯ ಆಡಳಿತವನ್ನು ಐಸಿಸ್ ಆಡಳಿತಕ್ಕೆ ಹೋಲಿಕೆ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗೆ ಮಾತನಾಡುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನ ಹಿಂಪಡೆದು ಸಿಎಂ ಸಿದ್ದರಾಮಯ್ಯರವರ ಬಳಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.
ಧಾರವಾಡ, ಜನವರಿ 08: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ 4 ಸಲ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಪ್ರಬುದ್ಧ ಧಾರವಾಡ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಹೀಗೆ ಮಾತನಾಡುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನ ಹಿಂಪಡೆದು ಸಿಎಂ ಸಿದ್ದರಾಮಯ್ಯರವರ ಬಳಿ ಕ್ಷಮೆ ಕೇಳಲಿ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ (Santosh Lad) ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಆಡಳಿತವನ್ನು ಐಸಿಸ್ ಆಡಳಿತಕ್ಕೆ ಹೋಲಿಕೆ ವಿಚಾರವಾಗಿ ಮಾತನಾಡಿದ ಅವರು, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ನಡೆಯುತ್ತಿರುವುದಕ್ಕೆ ಹೋಲಿಸಿದ್ದಾರೆ ಎಂದಿದ್ದಾರೆ.
ಇತ್ತೀಚೆಗೆ ಹಾರಿಕೊಂಡು ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಲ್ಲ, ಅವರು ಸಾಮಾಜಿಕ ಹೋರಾಟದ ಹಿನ್ನೆಲೆಯಿಂದ ಬಂದವರು. ಅಂಬೇಡ್ಕರ್, ಬಸವ, ಬುದ್ಧನ ತತ್ವ ಸಿದ್ಧಾಂತದ ಮೇಲೆ ಇರುವವರು. 50 ವರ್ಷ ರಾಜ್ಯ ರಾಜಕಾರಣದಲ್ಲಿ ಇದ್ದವರು, 2 ಸಲ ಸಿಎಂ ಆದವರು. ಇಂಥವರ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಹೇಳಿಕೆ ಸರಿಯಲ್ಲ, ಸಮಂಜಸವೂ ಅಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನನಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ಆಗಿಲ್ಲ: ಜಗದೀಶ್ ಶೆಟ್ಟರ್
ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆಯಲ್ವಾ?, ಕೇಂದ್ರದಲ್ಲಿ ನೀವು ಇದ್ದೀರಿ. ನೀವು ಇದ್ದಾಗ ರಾಜ್ಯದಲ್ಲಿ ಹೀಗೆ ಇರುತ್ತಾ? ಹಾಗಾದರೆ ನೀವು ಮತ್ತು ಪ್ರಧಾನಿ ಮೋದಿ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದ್ದಾರೆ.
ಶ್ರೀಕಾಂತ ಪೂಜಾರಿ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ
ಶ್ರೀಕಾಂತ್ ಪೂಜಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಶ್ರೀಕಾಂತ್ ಪೂಜಾರಿ ಪರಮವೀರ ಚಕ್ರ ವಿಜೇತರಾ? ನೊಬೆಲ್ ಪ್ರಶಸ್ತಿ ಪುರಸ್ಕೃತರಾ?, ಅವರೇನು ಗೋಲ್ಡ್ ಮೆಡಲಿಸ್ಟಾ? ಶ್ರೀಕಾಂತ್ ಪೂಜಾರಿ ವಿರುದ್ಧ ಸಾಕಷ್ಟು ಕೇಸ್‌ಗಳಿವೆ. ಶ್ರೀಕಾಂತ್ ವಿಚಾರವನ್ನ ರಾಷ್ಟ್ರ ಮಟ್ಟಕೆ ತೆಗೆದುಕೊಂಡು ಹೊರಟಿದ್ದಾರೆ. ಇದೇನಾ ನಿಮ್ಮ ಹಿಂದುತ್ವ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ರಾಮ ಭಕ್ತರ ವೇಷದಲ್ಲಿರುವ ಸಮಾಜ ಕಂಟಕರು: ಕಾಂಗ್ರೆಸ್ ತಿರುಗೇಟು
ಬಿಜೆಪಿ ಸರ್ಕಾರದಿಂದ ಹಿಂದೂಗಳಿಗೆ ಏನೂ ಆಗಿಲ್ಲ. ರಾಮನ ಹೆಸರಿನಲ್ಲಿ ತೆಗೆದುಕೊಂಡ ಇಟ್ಟಿಗೆ ಲೆಕ್ಕ ಅವರು ಕೊಡಲಿ. ಬಿಜೆಪಿಗೆ ಹಿಂದುತ್ವದ ಅಜೆಂಡಾ ಬಿಟ್ಟರೆ ಏನೂ ಇಲ್ಲ. ಕೊವಿಡ್ ವೇಳೆ ಮೃತರ ಅಂತ್ಯಕ್ರಿಯೆ ಹೆಚ್ಚಾಗಿ ಮಾಡಿದ್ದು ಮುಸ್ಲಿಮರು. ಹಿಂದೂವಾದಿಗಳ ಬಗ್ಗೆ ಚರ್ಚಿಸುವವರು ಆಗ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.