ದಸರಾ, ದೀಪಾವಳಿ ಧಮಾಕಾ: 18.8 ಟನ್ ಸ್ವೀಟ್ ಮಾರಾಟ ಮಾಡಿ ದಾಖಲೆ ಬರೆದ ಧಾರವಾಡ ಕೆಎಂಎಫ್
ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಧಾರವಾಡ ಕೆಎಂಎಫ್ (ಧಾಮುಲ್) 18.8 ಟನ್ ಸಿಹಿ ಉತ್ಪನ್ನಗಳ ಮಾರಾಟ ಮಾಡಿದ್ದು, 80 ಲಕ್ಷ ರೂ. ಆದಾಯ ಗಳಿಸಿದೆ. ಧಾರವಾಡ ಪೇಡಾ, ಮೈಸೂರು ಪಾಕ್ ಸೇರಿದಂತೆ ವಿವಿಧ ನಂದಿನಿ ಸಿಹಿ ಉತ್ಪನ್ನಗಳಿಗೆ ಅಪಾರ ಬೇಡಿಕೆ ಹೆಚ್ಚಾಗಿತ್ತು. ಖಾಸಗಿ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸಿ ಕೆಎಂಎಫ್ ಸಾಧನೆ ಮಾಡಿದೆ.

ಧಾರವಾಡ, ಅಕ್ಟೋಬರ್ 24: ದಸರಾ ಹಾಗೂ ದೀಪಾವಳಿ (Deepavali) ಹಬ್ಬಗಳು ಬಂದರೆ ಸಾಕು ಎಲ್ಲ ವ್ಯಾಪಾರಿಗಳು ಫುಲ್ ಖುಷಿಯಾಗಿರುತ್ತಾರೆ. ಎಷ್ಟೇ ಆರ್ಥಿಕ ಸಮಸ್ಯೆ ಇದ್ದರೂ ಜನರು ಈ ಎರಡೂ ಹಬ್ಬಗಳನ್ನು ಆಚರಿಸೋದರಲ್ಲಿ ಹಿಂದೆ ಬೀಳೋದಿಲ್ಲ. ಹೀಗಾಗಿ ಎಲ್ಲ ಬಗೆಯ ವ್ಯಾಪಾರಗಳು ಚೆನ್ನಾಗಿ ನಡೆದು, ಸಾಕಷ್ಟು ಲಾಭವನ್ನೂ ತರುತ್ತವೆ. ಇಂಥ ವೇಳೆಯೇ ಧಾರವಾಡದ ನಂದಿನಿ (KMF Nandini) ಉತ್ಪನ್ನದಲ್ಲಿ ಭಾರೀ ದಾಖಲೆಯಾಗಿದೆ. ಈ ದಿನಗಳಲ್ಲಿ 18.8 ಟನ್ ಸ್ವೀಟ್ ಮಾರಾಟ ಮಾಡುವ ಮೂಲಕ ಧಾರವಾಡದ ಕೆಎಂಎಫ್ ದಾಖಲೆ ಬರೆದಿದೆ.
ಧಾರವಾಡ-ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಕೆಎಂಎಫ್, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಧಾಮುಲ್) ಈ ಬಾರಿ ದೊಡ್ಡದೊಂದು ಮೈಲಿಗಲ್ಲು ಮುಟ್ಟಿದೆ. ಧಾರವಾಡ ಅಂದ ಕೂಡಲೇ ಧಾರವಾಡ ಪೇಡಾ ಅನ್ನೋ ಹೆಸರು ಕೂಡ ಜೊತೆಗೆ ಬಂದು ಬಿಡುತ್ತೆ. ಜಿಲ್ಲೆಯಲ್ಲಿ ಅದಾಗಲೇ ಹಲವು ಪ್ರತಿಷ್ಠಿತ ಪೇಡಾ ಕಂಪನಿಗಳು ಅಸ್ತಿತ್ವದಲ್ಲಿವೆ. ಹಲವಾರು ದಶಕಗಳಿಂದ ಅವು ಮಾರುಕಟ್ಟೆಯಲ್ಲಿ ತಮ್ಮದೇ ಬ್ರಾಂಡ್ನ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.
ಇದನ್ನೂ ಓದಿ: ಸಿಹಿ ಉತ್ಪನ್ನಗಳ ಮಾರಾಟದಲ್ಲಿ ದಾಖಲೆ: ದಸರಾ, ದೀಪಾವಳಿಯಲ್ಲಿ ನಂದಿನಿ ಕಮಾಲ್
ಇಂಥ ಪ್ರತಿಷ್ಠಿತ ಕಂಪನಿಗಳ ನಡುವೆಯೇ ಧಾಮುಲ್ ಮಹತ್ವದ ಸಾಧನೆ ಮಾಡಿದೆ. ಈ ಬಾರಿಯ ದಸರಾ ಹಬ್ಬದಿಂದ ಹಿಡಿದು ದೀಪಾವಳಿ ಕೊನೆಯ ದಿನದವರೆಗೆ ಧಾಮುಲ್ ಒಟ್ಟು 18.8 ಟನ್ ಸ್ವೀಟ್ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ. ಸುಮಾರು 20 ದಿನಗಳ ಅವಧಿಯಲ್ಲಿ ಇಷ್ಟೊಂದು ಸಿಹಿ ಉತ್ಪನ್ನಗಳನ್ನು ತಯಾರಿಸಿ, ಅದರ ಮಾರಾಟವನ್ನೂ ಮಾಡಿದೆ. ಆ ಮೂಲಕ ಸುಮಾರು 80 ಲಕ್ಷ ರೂ. ವಹಿವಾಟು ಮಾಡಿದೆ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸ ಹೇಳಿದ್ದಾರೆ.
18.8 ಟನ್ ಉತ್ಪಾದನೆಯ ಮಾರಾಟ
18 ಟನ್ ಸಿಹಿಯಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರಿನ ಡಿಪೋಗೆ 8432 ಕೆ.ಜಿ. ಪೂರೈಕೆ ಮಾಡಲಾಗಿದೆ. ಇನ್ನು ಒಕ್ಕೂಟದ ಮೂರು ಜಿಲ್ಲೆಗಳಲ್ಲಿ 9795 ಕೆಜಿ ಸ್ವೀಟ್ ಮಾರಾಟ ಮಾಡಲಾಗಿದೆ. ಹಾಗೆ ನೋಡಿದರೆ ಒಕ್ಕೂಟದ ಅಧಿಕಾರಿಗಳಿಗೆ ಇಷ್ಟೊಂದು ಪ್ರಮಾಣದ ಪೂರೈಕೆಗೆ ಬೇಡಿಕೆ ಬರುತ್ತೆ ಅಂದುಕೊಂಡಿರಲಿಲ್ಲ. ಈ ದಿನಗಳಲ್ಲಿ ಒಕ್ಕೂಟದ ಗುರಿ 15 ಟನ್ ಆಗಿತ್ತು. ಆದರೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗಿದ್ದಕ್ಕೆ ಹಗಲು-ರಾತ್ರಿ ಎನ್ನದೇ ಬಗೆ ಬಗೆಯ ಸ್ವೀಟ್ಗಳನ್ನು ಉತ್ಪಾದಿಸಲಾಗಿದೆ. ಆ ಮೂಲಕ ಸುಮಾರು 18.8 ಟನ್ ಉತ್ಪಾದನೆಯ ಮಾರಾಟವಾಗಿದೆ.
ಧಾರವಾಡದ ಈ ಡೈರಿಯಲ್ಲಿ ಧಾರವಾಡ ಪೇಡಾ, ಬಿಳಿ ಪೇಡಾ, ಮೈಸೂರು ಪಾಕ್, ಹೆಸರಿನ ಉಂಡೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತೆ. ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಖಾಸಗಿ ಪ್ರತಿಷ್ಠಿತ ಕಂಪನಿಗಳು ಮಾರಾಟದಲ್ಲಿ ಮುಂಚೂಣಿಯಲ್ಲಿರೋವಾಗ, ಅಂಥ ಸ್ಪರ್ಧೆ ನಡುವೆಯೇ ಈ ಗುರಿ ಸಾಧಿಸಿದ್ದು ಅಚ್ಚರಿ ಮೂಡಿಸುವಂತಾಗಿದೆ.
ಹಾಲಿನ ಸಂಗ್ರಹದಲ್ಲೂ ಒಕ್ಕೂಟ ದೊಡ್ಡ ಸಾಧನೆ
ಇತ್ತೀಚಿನ ದಿನಗಳಲ್ಲಿ ಹಾಲಿನ ಸಂಗ್ರಹದಲ್ಲಿಯೂ ಒಕ್ಕೂಟ ದೊಡ್ಡ ಸಾಧನೆ ಮಾಡಿತ್ತು. ಮೂರೂ ಜಿಲ್ಲೆಗಳಿಂದ ದಿನವಹಿ ಸರಾಸರಿ 1,60,391 ಕೆಜಿ ಹಾಲು ಶೇಖರಣೆಯಾಗುತ್ತಿತ್ತು. ಆದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,23,023 ಲೀಟರ್ ಹಾಲು ಶೇಖರಣೆಯಾಗಿತ್ತು. ಇಂಥ ಸಾಧನೆಯ ಜೊತೆಗೆ ಈ ಬಾರಿ ಎರಡೂ ಹಬ್ಬಗಳಲ್ಲಿ ಅತಿ ಹೆಚ್ಚು ಸಿಹಿ ಮಾರಾಟ ಮಾಡುವ ಮೂಲಕ ಒಕ್ಕೂಟ ಖಾಸಗಿ ಕಂಪನಿಗಳಿಗೂ ಸವಾಲೆಸೆದಿದೆ. ಈ ಸಾಧನೆ ಹೀಗೆಯೇ ಮುಂದುವರೆದರೆ ಇದು ಹೈನುಗಾರಿಕೆ ಮಾಡುವವರಿಗೆ ಉತ್ಸಾಹವನ್ನು ತರಲಿದೆ ಎನ್ನುವುದು ಸ್ಥಳೀಯರಾದ ಲಕ್ಷ್ಮಣ ಬಕಾಯಿ ಅವರ ಅಭಿಪ್ರಾಯ.
ಇದನ್ನೂ ಓದಿ: ಮಧುಮೇಹಿಗಳಿಗೆ ಕೆಎಂಎಫ್ ದೀಪಾವಳಿ ಗಿಫ್ಟ್: ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳು ಮಾರುಕಟ್ಟೆಗೆ
ಸಾಮಾನ್ಯವಾಗಿ ಸರಕಾರಿ ಒಡೆತನದಲ್ಲಿರುವ ಸಂಸ್ಥೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ. ಇದಕ್ಕೆ ಕಾರಣ ಕಳಪೆ ಗುಣಮಟ್ಟ ಎಂಬ ಮಾತಿದೆ. ಆದರೆ ಅಂಥ ಆರೋಪಗಳನ್ನು ಮೆಟ್ಟಿ ನಿಂತು ಇದೀಗ ಒಕ್ಕೂಟ ಸಾಧನೆ ಮೆರೆದಿದೆ. ಮುಂದಿನ ದಿನಗಳಲ್ಲಿ ಇದಕ್ಕೂ ದೊಡ್ಡ ಸಾಧನೆ ಮಾಡಿ, ಒಕ್ಕೂಟವನ್ನು ಲಾಭದಲ್ಲಿ ಮುನ್ನಡೆಸುವ ಬಗ್ಗೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಈ ಬಾರಿಯ ದೀಪಾವಳಿ ಒಕ್ಕೂಟಕ್ಕೆ ಹರ್ಷವನ್ನು ತಂದಿದ್ದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Fri, 24 October 25




