ಧಾರವಾಡ ರಂಗಾಯಣದಲ್ಲಿ ಮತ್ತೆ ಶುರುವಾಯಿತು ರಾಜೀನಾಮೆ ಪರ್ವ

ರಂಗಾಯಣದಲ್ಲಿ ಕೊರೊನಾ ಹಾವಳಿ ಕೊನೆಗೊಂಡು, ಮತ್ತೆ ರಂಗ ಚಟುವಟಿಕೆಗಳು ಆರಂಭವಾಗುತ್ತವೆ ಅನ್ನುವ ಹೊತ್ತಿನಲ್ಲಿ, ರಂಗಾಯಣದ ಬೆಳಕು ತಂತ್ರಜ್ಞರೊಬ್ಬರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.

  • ನರಸಿಂಹಮೂರ್ತಿ ಪ್ಯಾಟಿ
  • Published On - 6:18 AM, 19 Jan 2021
ರಂಗಾಯಣ ಧಾರವಾಡ

ಧಾರವಾಡ: ನಗರದ ರಂಗಾಯಣದಲ್ಲಿ ಮತ್ತೊಮ್ಮೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಕಳೆದ ವರ್ಷವಷ್ಟೇ ಅನೇಕ ರೆಪರ್ಟರಿ ಕಲಾವಿದರು ರಾಜೀನಾಮೆ ನೀಡಿ ಹೊರ ಹೋಗಿದ್ದರು. ಅದಾದ ಬಳಿಕ ಕೊರೊನಾ ಹಾವಳಿಯಿಂದಾಗಿ ರಂಗಾಯಣದಲ್ಲಿ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಇದೀಗ, ರಂಗಾಯಣದಲ್ಲಿ ಕೊರೊನಾ ಹಾವಳಿ ಕೊನೆಗೊಂಡು, ಮತ್ತೆ ರಂಗ ಚಟುವಟಿಕೆಗಳು ಆರಂಭವಾಗುತ್ತವೆ ಅನ್ನುವ ಹೊತ್ತಿನಲ್ಲಿ, ರಂಗಾಯಣದ ಬೆಳಕು ತಂತ್ರಜ್ಞರೊಬ್ಬರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಇದಕ್ಕೆ ಕಾರಣ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್ ಎಂದು ನೇರವಾಗಿ ಆರೋಪಿಸಿದ್ದಾರೆ. ಇದರಿಂದಾಗಿ ಧಾರವಾಡದ ರಂಗಾಯಣದಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದು ಮತ್ತೆ ಸಾಬೀತಾಗಿದೆ

ಕಳೆದ ಹಲವಾರು ವರ್ಷಗಳಿಂದ ಧಾರವಾಡದ ರಂಗಾಯಣದಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ. ಅದರಲ್ಲೂ ರಂಗಾಯಣ ನೇಮಕ ಮಾಡಿಕೊಳ್ಳುವ ಅನೇಕ ರೆಪರ್ಟರಿ ಕಲಾವಿದರು ಅಭಿನಯವನ್ನು ಕಲಿತು, ಬದುಕನ್ನು ರೂಪಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರಂಗಾಯಣದಲ್ಲಿ ಭಿನ್ನಾಭಿಪ್ರಾಯ, ರಾಜಕೀಯದ ಮಾತುಗಳು ಕೇಳಿ ಬರುತ್ತಿವೆ. ಇದೀಗ 12 ವರ್ಷಗಳ ಅನುಭವ ಹೊಂದಿದ್ದ ಬೆಳಕು ತಂತ್ರಜ್ಞ ಕೃಷ್ಣಮೂರ್ತಿ ಗಾಂವ್ಕರ್ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಅವರ ಅವಧಿ ಇನ್ನೂ ಎಂಟು ತಿಂಗಳಗಳ ಕಾಲ ಇತ್ತು. ಆದರೆ, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್ ಅವರಿಗೆ ನನ್ನ 12 ವರ್ಷಗಳ ರಂಗಾನುಭವ ಪೂರಕವಾಗಿಲ್ಲ ಎಂಬುದನ್ನು ಮನಗಂಡು ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮುಂದಿನ ದಿನಗಳಲ್ಲಾದರೂ ರಂಗಾಯಣದಲ್ಲಿ ಕಲೆ, ಕಲಾವಿದರು ಮತ್ತು ಕೆಲಸಗಾರರಿಗೆ ಬೆಲೆ ಸಿಗಲಿ ಎಂದು ಅವರು ಆಶಿಸಿದ್ದಾರೆ.

ಕಳೆದ ವರ್ಷವೇ ಆರಂಭವಾಯಿತು ರಾಜೀನಾಮೆ ಪರ್ವ
ಹೀಗೆ ನಿರ್ದೇಶಕರ ವಿರುದ್ಧ ಆಕ್ರೋಶ ಹೊರ ಹಾಕಿ, ಕಲಾವಿದರು ರಾಜೀನಾಮೆ ನೀಡುತ್ತಿರುವುದು ಇದು ಮೊದಲೇನಲ್ಲ. ಅವಧಿ ಮುಗಿಯುವ ಮುನ್ನವೇ ಅನೇಕರು ರಾಜೀನಾಮೆ ನೀಡಿ, ರಂಗಾಯಣದಿಂದ ಹೊರಗಡೆ ಬಂದಿದ್ದಾರೆ. ಕಳೆದ ವರ್ಷವಷ್ಟೇ ರಂಗಾಯಣದ ರೆಪರ್ಟರಿ ತಂಡದ 11 ಕಲಾವಿದರು ಹಾಗೂ ಓರ್ವ ಸಂಗೀತಗಾರ ರಾಜೀನಾಮೆ ನೀಡಿದ್ದರು. ಅವರೆಲ್ಲರ ಸೇವಾವಧಿ 2021 ರ ನವೆಂಬರ್​ವರೆಗೆ ಇತ್ತು. ಆದರೂ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ, ರಾಜೀನಾಮೆ ಅಂಗೀಕರಿಸಿ, ಅವರ ಜಾಗಕ್ಕೆ ಹೊಸ ಜನರನ್ನು ನೇಮಕ ಮಾಡಿಕೊಳ್ಳಲಾಯಿತು. ಇದಕ್ಕೆ ಆಗ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಆದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ನಿರ್ದೇಶಕರು, ಸದಸ್ಯರು ರಾಜೀನಾಮೆ ನೀಡಿದ ಕೂಡಲೇ ಅದನ್ನು ಅಂಗೀಕರಿಸಿ, ಬೇರೆಯವರನ್ನು ನೇಮಿಸಿಕೊಳ್ಳುತ್ತಿರುವ ಕೆಲಸದಲ್ಲಿ ನಿರತರಾಗಿದ್ದಾರೆ.

ನಿರ್ದೇಶಕ ರಮೇಶ್ ಹಾಗೂ ಕೃಷ್ಣಮೂರ್ತಿ ಗಾಂವ್ಕರ್

ರಮೇಶ ಪರವಿನಾಯ್ಕರ್ ಮೂಲತಃ ಬಿಜೆಪಿಯವರು
ಧಾರವಾಡದ ರಂಗಾಯಣ ಆರಂಭವಾದಾಗಿನಿಂದಲೂ ರಂಗ ಕಲಾವಿದರು, ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿಕೊಳ್ಳುತ್ತಾ ಬಂದಿದೆ. ಏಣಗಿ ನಟರಾಜ, ಪ್ರಕಾಶ ಗರೂಡ, ಪ್ರಮೋದ ಶಿಗ್ಗಾಂವಿ ಅಂಥಾ ಹಿರಿಯ ರಂಗ ಕಲಾವಿದರು, ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಯಾವಾಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ, ಆಗ ಹಿಂದೆ ಇದ್ದ ಪ್ರಮೋದ ಶಿಗ್ಗಾಂವಿ ಅವರ ಜಾಗಕ್ಕೆ ರಮೇಶ ಪರವಿನಾಯ್ಕರ್ ಅವರನ್ನು ನೇಮಕ ಮಾಡಲಾಯಿತು. ಆಗಲೇ ರಂಗಭೂಮಿ ಕ್ಷೇತ್ರದಲ್ಲಿ ಈ ಬಗ್ಗೆ ಅಪಸ್ವರ ಕೇಳಿ ಬಂತು.

2019ರ ಡಿ. 27ರಂದು ರಮೇಶ ಪರವಿನಾಯ್ಕರ್ ರಂಗಾಯಣ ನಿರ್ದೇಶಕರಾಗಿ ಸರ್ಕಾರದಿಂದ ನೇಮಕಗೊಂಡರು. ಆಗಲೇ, ಬಿಜೆಪಿ ಕಾರ್ಯಕರ್ತನನ್ನು ಹೀಗೆ ನೇಮಕ ಮಾಡಿರುವುದು ಸರಿಯಲ್ಲ ಎಂದು ಹಿರಿಯ ಸಾಹಿತಿಗಳು ಮತ್ತು ರಂಗ ಕಲಾವಿದರಿಂದ ಆಕ್ಷೇಪ ಕೇಳಿಬಂದಿತ್ತು. ಬೆಳಗಾವಿ ಮೂಲದ ರಮೇಶ ಪರವಿನಾಯ್ಕರ್ ರಾಜಕೀಯ ಹಿನ್ನೆಲೆ ಹೊಂದಿದ್ದಾರೆ. ಮತ್ತು ನಾಟಕ-ರಂಗಕಲೆಗಳಲ್ಲಿ ನುರಿತ ಅನುಭವಿಗಳನ್ನು ಕಡೆಗಣಿಸಲಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಇತರರು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಈ ಬಗ್ಗೆ ಸರಕಾರ ಜಾಣ ಮೌನ ವಹಿಸಿತ್ತು.

ರಮೇಶ ನಿರ್ದೇಶಕರಾದ ಮೇಲೆ ಮೂವರಿಗೆ ಗೇಟ್‌ಪಾಸ್
ಧಾರವಾಡದ ರಂಗಾಯಣದಲ್ಲಿ ಕಳೆದ 10- 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಅನೇಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ರಮೇಶ ಪರವಿನಾಯ್ಕರ್ ಬಂದ ಬಳಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಕಿತ್ತು ಹಾಕಿದ್ದಾರೆ. ಕ್ಲರ್ಕ್ ಮಹೇಶ್ವರಯ್ಯ ಹಿರೇಮಠ, ಕಂಪ್ಯೂಟರ್ ಆಪರೇಟರ್ ರವಿ ತೋಟಗಂಟಿ ಹಾಗೂ ಕಚೇರಿ ಸಹಾಯಕ ವಿನೋದ ನಾಯಕ ಎಂಬುವರನ್ನು ರಮೇಶ ತೆಗೆದು ಹಾಕಿದ್ದಾರೆ. ಸಿಬ್ಬಂದಿ ಆಡಳಿತಾಧಿಕಾರಿಯ ಅಧೀನದಲ್ಲಿ ಇದ್ದರೂ, ಅದಕ್ಕೂ ಕೈ ಹಾಕಿ ನೋಟಿಸ್ ನೀಡದೆ, ವಿಚಾರಣೆ ನಡೆಸದೇ ಏಕಾಏಕಿ ಮೂವರನ್ನು ತೆಗೆದುಹಾಕಿದ್ದಾರೆ. ಈ ಆರೋಪವೂ ರಮೇಶ ಪರವಿನಾಯ್ಕರ್ ಮೇಲಿದೆ. ಅವರ ಜಾಗಕ್ಕೆ ತಮಗೆ ಆತ್ಮೀಯರಾಗಿರುವ ಸಿದ್ಧಾರೂಢ, ಹಾಗೂ ಸ್ಮಿತಾ ಎಂಬುವರನ್ನು ನೇಮಿಸಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು.

ಈ ವೇಳೆ ಕೆಲಸ ಕಳೆದುಕೊಂಡಿದ್ದ ಕಂಪ್ಯೂಟರ್ ಆಪರೇಟರ್ ರವಿ ತೋಟಗಂಡಿ, ನಾನು ಮೂವರು ನಿರ್ದೇಶಕರ ಆಡಳಿತಾವಧಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಯಾರೊಬ್ಬರೂ ನನ್ನ ಕೆಲಸದ ಬಗ್ಗೆ ಚಕಾರವೆತ್ತಿರಲಿಲ್ಲ. ರಂಗಾಯಣ ನಮ್ಮ ಮನೆಯಿದ್ದಂತೆ. ಮೂರ್ನಾಲ್ಕು ಜನರ ಕೆಲಸವನ್ನು ನಾನು ಒಬ್ಬನೇ ನಿರ್ವಹಿಸುತ್ತಿದ್ದೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನನ್ನನ್ನು ತೆಗೆದು ಹಾಕಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸುಕಿನ ಗುದ್ದಾಟ ಹೊಸದಲ್ಲ
ಈ ಮುಸುಕಿನ ಗುದ್ದಾಟ ಕೇವಲ ನಿರ್ದೇಶಕರು ಹಾಗೂ ಕಲಾವಿದರ ನಡುವೆಯಷ್ಟೇ ನಡೆದಿಲ್ಲ. ಇದು ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳ ನಡುವೆಯೂ ನಡೆದಿದೆ. ಈ ಮುಂಚೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ರಂಗಾಯಣದ ಪ್ರಭಾರ ಆಡಳಿತಾಧಿಕಾರಿಯಾಗಿದ್ದರು. ಅವರಿಗೂ ರಮೇಶ ಪರವಿನಾಯ್ಕರ್‌ಗೂ ಆಡಳಿತದ ವಿಚಾರದಲ್ಲಿ ವೈಮನಸ್ಸು ಏರ್ಪಟ್ಟಿತ್ತು. ಇದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಗಮನಕ್ಕೆ ಬಂದಿತ್ತು. ಅವರು ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಅವರನ್ನು ಕೆಲ ತಿಂಗಳ ಹಿಂದೆ ರಂಗಾಯಣ ಆಡಳಿತಾಧಿಕಾರಿಯನ್ನಾಗಿ ನೇಮಿಸಿ, ಆದೇಶ ಮಾಡಿದ್ದರು. ಈ ಬೆಳವಣಿಗೆ ಬಳಿಕ ರಂಗ ಚಟುವಟಿಕೆ ಮತ್ತೆ ಆರಂಭವಾಗಿ, ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ಭಾವಿಸುವ ಹೊತ್ತಿಗೆ, ಮತ್ತೆ ಗುದ್ದಾಟ ಆರಂಭವಾಗಿದೆ.

ನಿರ್ದೇಶಕರು ಏನಂತಾರೆ?
ಇನ್ನು ಕೃಷ್ಣಮೂರ್ತಿ ಗಾಂವ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಮೇಶ ಪರವಿನಾಯ್ಕರ್ ಹೇಳುವುದೇ ಬೇರೆ. ‘ರಂಗಾಯಣದ ಎಲ್ಲ ಚಟುವಟಿಕೆಗಳು ಸುಗಮವಾಗಿ ಸಾಗಿವೆ. ಕೃಷ್ಣಮೂರ್ತಿ ಗಾಂವ್ಕರ್ ಅವರು ಹೇಳದೇ ರಜೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ‌ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಅದಕ್ಕೆ ಅವರು ಉತ್ತರ ನೀಡಲಾಗದೇ ರಾಜೀನಾಮೆ ನೀಡಿದ್ದಾರೆ. ಅವರು ನೀಡಿರುವ ರಾಜೀನಾಮೆಯನ್ನು ಸರಕಾರಕ್ಕೆ ಕಳುಹಿಸಲಾಗುವುದು. ಅಲ್ಲಿ ಅಂಗೀಕಾರವಾದ ಬಳಿಕ ಬೇರೆ ಬೆಳಕಿನ ತಂತ್ರಜ್ಞನನ್ನು ನೇಮಕ ಮಾಡಿಕೊಳ್ಳಲಾಗುವುದು’ ಅಂತಾರೆ.

ಏಣಗಿ ನಟರಾಜ, ಸುಭಾಸ್ ನರೇಂದ್ರ, ಪ್ರಕಾಶ್ ಗರೂಡ, ಪ್ರಮೋದ ಶಿಗ್ಗಾಂವ ಅಂಥ ಅನುಭವಿ ರಂಗಸಾಧಕರ ಬಳಿಕ ಅದೇ ಜಾಗಕ್ಕೆ ರಮೇಶ ಪರವಿನಾಯ್ಕರ್ ಬಂದಿದ್ದಾರೆ. ರಮೇಶ ತುಂಬಾನೇ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಅನ್ನುವುದು ಸ್ಪಷ್ಟ. ಅವರು ಬಿಜೆಪಿಯಿಂದ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ನೋಡಿದರೆ, ಆ ಪಕ್ಷವೇ ಇದೀಗ ಅಧಿಕಾರದಲ್ಲಿದೆ. ಹೀಗಾಗಿ, ರಮೇಶ ಅವರಿಗೆ ರಂಗಾಯಣಕ್ಕೆ ಅನುದಾನ ತರುವುದು, ರಂಗಾಯಣದ ಅಭಿವೃದ್ಧಿ ಮಾಡುವುದು ತೀರಾ ಸುಲಭದ ಕೆಲಸ. ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಂಗಾಯಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ರಂಗಾಸಕ್ತರಿಗೆ ಖುಷಿ ತಂದಿದೆಯಾದರೂ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ಅಸಮಾಧಾನ ತಂದಿವೆ.

ಒಟ್ಟಿನಲ್ಲಿ ರಂಗ ಕಲೆಯೊಂದಿಗೆ ಕಲಾವಿದರನ್ನು ಗೌರವಿಸಿ, ಎಲ್ಲರನ್ನು ಸಮಾಧಾನದಿಂದ ರಂಗಕಲಾ ಸೇವೆಯತ್ತ ಕರೆದೊಯ್ಯುವುದು ನಿರ್ದೇಶಕರಾದವರ ಕರ್ತವ್ಯ ಅನ್ನುವುದನ್ನು ರಮೇಶ ಪರವಿನಾಯ್ಕರ್ ಅರ್ಥ ಮಾಡಿಕೊಂಡರೆ ಅದು ಧಾರವಾಡ ರಂಗಾಯಣದ ಭವಿಷ್ಯಕ್ಕೆ ಉತ್ತಮ ಅನ್ನುವುದು ರಂಗಾಸಕ್ತರ ಆಶಯ.

ಪ್ರೇಕ್ಷಕ ಮಹಾಶಯರೇ ದಯವಿಟ್ಟು ಗಮನಿಸಿ