ಧಾರವಾಡ: ಅಣ್ಣ ಬಸವಣ್ಣನ ವಚನಗಳನ್ನು ರಕ್ಷಿಸಿದ ಉಳವಿ ಚೆನ್ನಬಸವೇಶ್ವರ ಜಾತ್ರೆ
ಧಾರವಾಡ ಮಧ್ಯಭಾಗದಲ್ಲಿನ ಎತ್ತರದ ಪ್ರದೇಶವಾದ ಉಳವಿ ಚನ್ನಬಸವಣ್ಣನ ಗುಡ್ಡದ (ಯು.ಬಿ.ಹಿಲ್) ಸುಮಾರು ಮೂರೂವರೆ ಎಕರೆ ಜಾಗದಲ್ಲಿ ಉದ್ಭವಮೂರ್ತಿಯಾಗಿ ಉಳವಿ ಚನ್ನಬಸವೇಶ್ವರ ನೆಲೆಸಿದ್ದಾನೆ. ಧಾರವಾಡದಲ್ಲಿಂದು ಉಳವಿ ಚೆನ್ನಬಸವೇಶ್ವರ ದೇವಸ್ಥಾನವೆಂದು ಪ್ರಸಿದ್ದಿ ಪಡೆದಿದೆ. ಶ್ರಾವಣದ ಕೊನೆಯ ಸೋಮವಾರ ಈ ದೇವಸ್ಥಾನದಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತದೆ.
ಧಾರವಾಡ, ಸೆಪ್ಟೆಂಬರ್ 11: ಏಕದೇವತೋಪಾಸನೆ, ಸರ್ವಸಮಾನತೆಯ ವಿಚಾರಗಳು, ಮಹಾಮನೆಯ ವಿಚಾರಗೋಷ್ಠಿಗಳ ಮೂಲಕ ಹನ್ನೆರಡನೇ ಶತಮಾನದಲ್ಲಿಯೇ 21ನೇ ಶತಮಾನದ ವಿಚಾರಧಾರೆಗಳನ್ನು ಅನುಷ್ಠಾನಕ್ಕೆ ತಂದ ದೂರದೃಷ್ಟಿಯ ಮಹಾನ್ ವ್ಯಕ್ತಿ ಬಸವಣ್ಣ. ಅವರ ವಚನಗಳನ್ನು ಉಳಿಸಿಕೊಳ್ಳಲು ಅವರ ಅಳಿಯ ಚೆನ್ನಬಸವೇಶ್ವರ (Ulavi Channabasaveshwara) ಕಾಡುಮೇಡುಗಳಲ್ಲಿ ಅಲೆದು, ಈಗಿನ ಉತ್ತರ ಕನ್ನಡ ಜಿಲ್ಲೆಯ ಉಳವಿ ಕಡೆಗೆ ಹೋಗುವಾಗ ಧಾರವಾಡದಲ್ಲಿ ಕೆಲ ಕಾಲ ತಂಗಿದ್ದರು. ಅವರು ತಂಗಿದ್ದ ಸ್ಥಳವೇ ಧಾರವಾಡದಲ್ಲಿಂದು ಉಳವಿ ಚೆನ್ನಬಸವೇಶ್ವರ ದೇವಸ್ಥಾನವೆಂದು ಪ್ರಸಿದ್ದಿ ಪಡೆದಿದೆ. ಶ್ರಾವಣದ ಕೊನೆಯ ಸೋಮವಾರ ಈ ದೇವಸ್ಥಾನದಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತದೆ.
ದೇವಸ್ಥಾನಕ್ಕೆ ಇದೆ ದೊಡ್ಡ ಇತಿಹಾಸ
ಧಾರವಾಡ ಮಧ್ಯಭಾಗದಲ್ಲಿನ ಎತ್ತರದ ಪ್ರದೇಶವಾದ ಉಳವಿ ಚನ್ನಬಸವಣ್ಣನ ಗುಡ್ಡದ (ಯು.ಬಿ.ಹಿಲ್) ಸುಮಾರು ಮೂರೂವರೆ ಎಕರೆ ಜಾಗದಲ್ಲಿ ಉದ್ಭವಮೂರ್ತಿಯಾಗಿ ಉಳವಿ ಚನ್ನಬಸವೇಶ್ವರ ನೆಲೆಸಿದ್ದಾನೆ ಎನ್ನಲಾಗಿದೆ. ಈ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದ್ದು, 12ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. 12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯದಲ್ಲಿ ಅರಾಜಕತೆ ಉಂಟಾಗಿತ್ತು. ಕಲ್ಯಾಣ ರಾಜ್ಯದ ಶರಣರು ದುಷ್ಟಶಕ್ತಿಗಳಿಂದ ವಚನ ಸಾಹಿತ್ಯ ವನ್ನು ರಕ್ಷಿಸುವ ಪಣ ತೊಟ್ಟು ಎಲ್ಲ ಸಾಹಿತ್ಯ ಭಂಡಾರಗಳನ್ನು ಹೊತ್ತು ಕಲ್ಯಾಣ ರಾಜ್ಯದಿಂದ ನಾಲ್ಕೂ ದಿಕ್ಕುಗಳೆಡೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಧರ್ಮದ ಪಾಲನೆ ಮಾಡುತ್ತಿದ್ದಾರೆ: ಕೋಡಿ ಶೀಗಳು
ಒಂದು ಗುಂಪಿನಲ್ಲಿ ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ, ತಾಯಿ ನಾಗಲಾಂಬಿಕೆ, ಗಂಗಾಂಬಿಕೆ ಇದ್ದರು. ಈ ತಂಡ ತೋರಗಲ್ ಮಾರ್ಗವಾಗಿ ತಡಕೋಡ, ಗೊಡಚಿ, ಸತ್ತಿ ಗೇರಿ, ಮುರಗೋಡ, ಹುಣ ಸೀಕಟ್ಟಿ ಕಾದರವಳ್ಳಿ, ಕಕ್ಕೇರಿ, ಕಿತ್ತೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯುತ್ತ, ವೈರಿಗಳಿಂದ ಬಂದ ಸಂಕಷ್ಟಗಳನ್ನು ಎದುರಿಸುತ್ತ ಧಾರವಾಡಕ್ಕೆ ಬರುತ್ತದೆ.
ಆಗ ಈ ಪ್ರದೇಶ ತುಂಬಾನೇ ಶಾಂತವಾಗಿದ್ದರಿಂದ ಆಕರ್ಷಕವಾಗಿ ಕಂಡಿದ್ದರಿಂದ ಎಲ್ಲರೂ ಇಲ್ಲಿಯೇ ತಂಗುತ್ತಾರೆ. ಆಗ ಚೆನ್ನಬಸವಣ್ಣನವರಿಗೆ ಕಂಡಿದ್ದು ಉದ್ಭವ ಮೂರ್ತಿ. ಬಸವಣ್ಣ ತಮ್ಮ ದಿವ್ಯ ಶಕ್ತಿಯಿಂದ ಆ ಮೂರ್ತಿಯ ಪ್ರಭಾವವನ್ನರಿತು, ಧಾರವಾಡದ ಹಿರಿಯರನ್ನು ಕರೆದು ಮೂರ್ತಿಯ ಮಹತ್ವ ತಿಳಿಸುತ್ತಾರೆ. ನಂತರ ಉದ್ಭವ ಮೂರ್ತಿಯೊಂದಿಗೆ ಭವ್ಯ ದೇವಸ್ಥಾನ ನಿರ್ಮಿಸಿ, ಉಳವಿ ಚನ್ನಬಸವೇಶ್ವರ ದೇವಸ್ಥಾನ ಎಂಬ ಹೆಸರಿಡಲಾಗಿದೆ. ಹೀಗೆ ಧಾರವಾಡಕ್ಕೊಂದು ಶ್ರೀ ಕ್ಷೇತ್ರವನ್ನು ನೀಡಿದ ಚನ್ನಬಸವಣ್ಣನವರು ಮುಂದೆ ಉಳವಿಯತ್ತ ಪ್ರಯಾಣ ಬೆಳೆಸಿದರು.
ಇಂಥ ವಿಶೇಷ ರಥೋತ್ಸವದಲ್ಲಿ ಧಾರವಾಡ, ಕಾರವಾರ, ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ವಿವಿಧೆಡೆಯಿಂದ ಅಪಾರ ಭಕ್ತರು ಭಾಗವಹಿಸುತ್ತಾರೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ರಥೋತ್ಸವದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸುತ್ತವೆ. ಧಾರವಾಡ ಸುತ್ತಮುತ್ತಲಿನ ಗ್ರಾಮಗಳ ರೈತರು ಡೋಲು-ಡೊಳ್ಳು, ಜಗ್ಗಲಗಿ- ಮಜಲು ಮೇಳ, ಲೇಜಿಮ್ ಮುಂತಾದ ತಾಳವಾದ್ಯಗಳೊಂದಿಗೆ ತಮ್ಮ ಭಕ್ತಿಸೇವೆ ಸಮರ್ಪಿಸುತ್ತಾರೆ. ಇನ್ನು ಜಾತ್ರೆಯ ಅಂಗವಾಗಿ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜನರು ಭಕ್ತಿಯಿಂದ ಪ್ರಸಾದ ಸೇವಿಸಿ ಭಕ್ತಿಯ ಸೆಲೆಯಲ್ಲಿ ಮಿಂದೆದ್ದರು.
ಮಳೆಯಲ್ಲಿಯೇ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು
ಸಂಜೆ ನಡೆದ ರಥೋತ್ಸವದ ವೇಳೆ ಅನೇಕ ಸಾಂಸ್ಕೃತಿಕ ತಂಡಗಳು ತಮ್ಮ ಕಲಾಪ್ರದರ್ಶನ ನೀಡಿದವು. ಇದೇ ವೇಳೆ ಮಳೆಯೂ ಶುರುವಾಯಿತು. ಆದರೆ ಕಲಾತಂಡಗಳ ಸದಸ್ಯರು ಮಳೆಗೆ ಜಗ್ಗದೇ ಮತ್ತಷ್ಟು ಉತ್ಸಾಹದಿಂದ ತಮ್ಮ ಪ್ರದರ್ಶನವನ್ನು ನೀಡಿದರು. ಇದೇ ವೇಳೆ ಭಕ್ತರು ಕೂಡ ಮಳೆಯಲ್ಲಿಯೇ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಒಟ್ಟಿನಲ್ಲಿ ಸಡಗರ-ಸಂಭ್ರಮದ ಮಧ್ಯೆ ನಡೆದ ರಥೋತ್ಸವ ಭಕ್ತರಲ್ಲಿ ಖುಷಿಯನ್ನು ಹೆಚ್ಚಿಸಿದ್ದಂತೂ ಸತ್ಯ.
ಚನ್ನಬಸವಣ್ಣನವರ ಭವ್ಯ ಮೂರ್ತಿಯ ಪ್ರತಿಷ್ಠಾಪನೆ
ದೇವಸ್ಥಾನದ ಸಮಿತಿ ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳನ್ನು ಮಾಡಿದೆ. ಅದರಲ್ಲಿ ಪ್ರಮುಖವಾಗಿದ್ದು ಧಾರವಾಡ ಹೆಡ್‌ಪೋಸ್ಟ್ ಎದುರಿನ ವೃತ್ತದಲ್ಲಿ ಶ್ರೀ ಚನ್ನಬಸವಣ್ಣನವರ ಭವ್ಯ ಮೂರ್ತಿಯ ಪ್ರತಿಷ್ಠಾಪನೆ. ಈ ಮೂರ್ತಿಯನ್ನು ವೀರಶೈವ ಧರ್ಮದ ಆಧಾರ ಸಂಕೇತಗಳನ್ನೊಳಗೊಂಡ ವಿನೂತನ ಮಾದರಿಯ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಅದರಂತೆ ಸ್ಟೇಷನ್ ರಸ್ತೆಯ ಎಮ್ಮಿಕೇರಿ ವೃತ್ತದಲ್ಲಿ ನೂತನವಾಗಿ ಗಣೇಶ, ಭರಮಪ್ಪ, ಕರಿಯಮ್ಮ ದೇವಿಯ ದೇವಸ್ಥಾನ ನಿರ್ಮಿಸಲಾಗಿದೆ. ದೇವಸ್ಥಾನದ ಸಮಸ್ತ ಆಡಳಿತ ಮಂಡಳಿ ಮಾದರಿ ಸೇವೆ ಸಲ್ಲಿಸುತ್ತಿದೆ.
ಇದನ್ನೂ ಓದಿ: ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಶಂಕರ ಚೆನ್ನಬಸನವರ್, ನಾನು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದವನು. ಕೆಲ ವರ್ಷಗಳ ಹಿಂದಷ್ಟೇ ಸೇನೆಯಿಂದ ನಿವೃತ್ತನಾಗಿ ಬಂದಿದ್ದೇನೆ. ಇದೀಗ ಧಾರವಾಡದಲ್ಲಿಯೇ ಮನೆ ಮಾಡಿರೋದ್ರಿಂದ ಈ ದೇವಸ್ಥಾನಕ್ಕೆ ಹೋಗಲು ಅವಕಾಶ ಸಿಗುತ್ತಿದೆ. ಮುಂಚೆಯಿಂದಲೂ ಈ ದೇವಸ್ಥಾನದ ಬಗ್ಗೆ ಸಾಕಷ್ಟು ಮಾಹಿತಿ ಇತ್ತು.
ಇಲ್ಲಿಗೆ ಬಂದ ಬಳಿಕ ಪ್ರತಿವಾರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದೇನೆ. ಇದರಿಂದಾಗಿ ನನಗೆ ಭಾರೀ ಅನುಕೂಲಗಳಾಗಿವೆ. ಈ ಚೆನ್ನಬಸವಣ್ಣ ಬೇಡಿದ್ದನ್ನು ಕೊಡುವ ದೇವರು. ಅಂಥ ದೇವರು ನಡೆದಾಡಿದ ಪ್ರದೇಶದಲ್ಲಿ ನಾವಿದ್ದೇವೆ ಅನ್ನೋದೇ ನಮಗೆ ಧನ್ಯತಾಭಾವವನ್ನು ತಂದುಕೊಡುತ್ತದೆ. ಅಂಥ ದೊಡ್ಡ ಶಕ್ತಿಯ ಜಾತ್ರೆಯಲ್ಲಿ ಪಾಲ್ಗೊಳ್ಳೋದು ನನಗೆ ತುಂಬಾನೇ ಖುಷಿ ತರಿಸುತ್ತದೆ. ನಾನು ಪ್ರತಿವರ್ಷ ತಪ್ಪದೇ ಈ ಜಾತ್ರೆಗೆ ಕುಟುಂಬಸ್ಥರೊಂದಿಗೆ ಆಗಮಿಸುತ್ತೇನೆ ಅನ್ನುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.