
ಧಾರವಾಡ, ಮೇ 27: ಜಿಲ್ಲೆಯ ಜನತೆಯ ಬಹುದಶಕಗಳ ಬೇಡಿಕೆಯೊಂದಕ್ಕೆ ಇದೀಗ ಪರಿಹಾರ ಸಿಗುತ್ತಿದೆ. ಪ್ರತಿವರ್ಷದಂತೆ ಹಲವು ದಶಕಗಳಿಂದ ಬೆಂಬಿಡದೇ ಕಾಡುತ್ತಿದ್ದ ಬೆಣ್ಣೆಹಳ್ಳದ (Bennehalla) ಪ್ರವಾಹಕ್ಕೆ ಶಾಶ್ವತ ತಡೆಗಾಗಿ ಕೊನೆಗೂ ಕಾಮಗಾರಿ ನಡೆದಿದ್ದು, ಶೇ. 60 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಆದಷ್ಟು ಬೇಗನೇ ಕೆಲಸ ಮುಗಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, ಈ ಬಾರಿ ಮಳೆಗಾಲದಲ್ಲಿ ಅನೇಕ ಗ್ರಾಮಗಳ ಜನರಿಗೆ ನೆಮ್ಮದಿ ಸಿಗುವ ಲಕ್ಷಣಗಳು ಕಾಣುತ್ತಿದೆ.
ಬೆಣ್ಣೆಹಳ್ಳ ಹೆಸರು ಕೇಳಿದರೆ ಸಾಕು ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಅಣ್ಣಿಗೇರಿ ತಾಲೂಕುಗಳ ರೈತರು ಬೆಚ್ಚಿ ಬೀಳುತ್ತಾರೆ. ಮಳೆಗಾಲದಲ್ಲಿ ಈ ಹಳ್ಳ ಸೃಷ್ಟಿಸುವ ಅನಾಹುತಗಳು ಒಂದಲ್ಲ ಎರಡಲ್ಲ. ಹೀಗಾಗಿ ಈ ಹಳ್ಳದ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರೈತರು ಬೇಡಿಕೆ ಇಡುತ್ತಲೇ ಬಂದಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿ, ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದ್ದರು.
ಇದನ್ನೂ ಓದಿ: ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ
ಅದರ ಅಂಗವಾಗಿ ಆರಂಭಿಕವಾಗಿ ರೂ. 200 ಕೋಟಿ ರೂ ಬಿಡುಗಡೆ ಮಾಡಿ, ಫೆಬ್ರವರಿ 8ರಂದು ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಭರದಿಂದ ಸಾಗಿದ್ದು, ಶೇ. 60 ಕೆಲಸ ಮುಗಿದಿದೆ. ನವಲಗುಂದ ತಾಲೂಕಿನ ಯಮನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳದಲ್ಲಿನ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿದ್ದು, ಹೂಳನ್ನು ಕೂಡ ತೆಗೆಯಲಾಗಿದೆ. ಇದರಿಂದಾಗಿ ಹಳ್ಳದಲ್ಲಿ ನೀರು ಸರಾಗವಾಗಿ ಮುಂದಕ್ಕೆ ಹರಿಯಲಿದೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳು ಹಾಗೂ ಹೊಲಗಳಿಗೆ ನೀರು ನುಗುವ ಸಾಧ್ಯತೆ ಕೂಡ ಕಡಿಮೆಯಾಗಲಿದೆ.
ಮೊದಲನೇ ಹಂತದ ಈ ಕಾಮಗಾರಿಯಲ್ಲಿ ಬೆಣ್ಣೆಹಳ್ಳದ 60 ಕಿ.ಮೀಯಿಂದ 125 ಕಿಮೀವರೆಗೆ ಅತಿ ಅವಶ್ಯಕ ಸ್ಥಳದಲ್ಲಿ 1.05 ಕಿಮೀ ಕಾಂಕ್ರೀಟ್ ತಡೆಗೋಡೆ, 6.15 ಕಿ.ಮೀ ಏರಿ ನಿರ್ಮಾಣ, ಅತಿ ಅವಶ್ಯಕವಾಗಿರುವ 86 ಸ್ಥಳಗಳಲ್ಲಿ ಹೊಲದಲ್ಲಿನ ನೀರು ಹಳ್ಳವನ್ನು ಸೇರುವ ಇನ್‌ಲೆಟ್ ನಿರ್ಮಾಣ, ಉಪಹಳ್ಳ ಸೇರುವ ದೇಸಾಯಿಹಳ್ಳ, ಗುಂಡೇನಹಳ್ಳ ಮತ್ತು ಹಂದಿಗನಹಳ್ಳಗಳಲ್ಲಿ 500 ಮೀಟರ್ ಹೂಳೆತ್ತುವ ಕಾಮಗಾರಿ ನಡೆಯುತ್ತಿವೆ. ಏಳು ಕಡೆಗಳಲ್ಲಿ ರಸ್ತೆ ಸೇತುವೆಗಳ ನಿರ್ಮಾಣ, 2 ಕಡೆಗಳಲ್ಲಿ ಜಲಸಂಗ್ರಹಾರ ಕೈಗೊಳ್ಳಲು ಯೋಚಿಸಲಾಗಿದೆ.
ಇನ್ನು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುವ ಯಮನೂರು ಗ್ರಾಮದಲ್ಲಿ ಭಕ್ತರಿಗಾಗಿ 150 ಮೀಟರ್ ಉದ್ದದ ಸ್ನಾನಘಟ್ಟ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳಿಂದ ಧಾರವಾಡ ಹಾಗೂ ಗದಗ ಜಿಲ್ಲೆಗಳ 37 ಹಳ್ಳಿಗಳಲ್ಲಿನ ಪ್ರವಾಹ ತಡೆದಂತಾಗುತ್ತದೆ. ಜತೆಗೆ 20 ಸಾವಿರ ಹೆಕ್ಟೇರ್ ಪ್ರದೇಶ ಪ್ರವಾಹದಿಂದ ಮುಕ್ತವಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.
ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿಯಲ್ಲಿ ಉಗಮವಾಗುವ ಬೆಣ್ಣೆಹಳ್ಳ ಧಾರವಾಡ, ಗದಗ ಜಿಲ್ಲೆ ಸೇರಿದಂತೆ ಬರೋಬ್ಬರಿ 148 ಕಿಮೀ ಹರಿದು ಹೋಗುತ್ತದೆ. ತುಪ್ಪರಿಹಳ್ಳ, ರಾಡಿಹಳ್ಳ, ಹಂದಿಗನಹಳ್ಳ, ಇರವಿಹಳ್ಳ, ಹಿರೇಹಳ್ಳ, ಯರನಹಳ್ಳ ಸೇರಿದಂತೆ ಸರಿಸುಮಾರು 56 ಉಪಹಳ್ಳಗಳು ಇದಕ್ಕೆ ಸೇರುತ್ತವೆ. ಇವುಗಳಲ್ಲಿ ಅತ್ಯಂತ ಅತಿ ದೊಡ್ಡದೆಂದರೆ ತುಪ್ಪರಿಹಳ್ಳ. ಬೇಸಿಗೆ, ಚಳಿಗಾಲದಲ್ಲಿ ಮೈದಾನದಂತೆ ಭಾಸವಾಗುವ ಈ ಹಳ್ಳಗಳು, ಮಳೆಗಾಲದಲ್ಲಿ ತೋರುವ ಉಗ್ರಾವತಾರವೇ ಬೇರೆ. ಅಕ್ಷರಶಃ ಧಾರವಾಡ, ಗದಗ ಜಿಲ್ಲೆಗಳನ್ನು ಇವು ನಡುಗಿಸುತ್ತವೆ.
ಇವುಗಳ ಹಾವಳಿಗೆ 37 ಹಳ್ಳಿಗಳು ನರಕಯಾತನೆ ಅನುಭವಿಸುತ್ತವೆ. ಬೆಣ್ಣೆಹಳ್ಳ- ತುಪರಿಹಳ್ಳಗಳಿಂದ 22 ಟಿಎಂಸಿಗೂ ಅಧಿಕ ನೀರು ಪ್ರತಿವರ್ಷ ವ್ಯರ್ಥವಾಗಿ ಹರಿದುಹೋಗುತ್ತದೆ. ಈ ನೀರನ್ನು ಬಳಕೆ ಮಾಡಬೇಕು. ಜೊತೆಗೆ ಇಲ್ಲಿನ ಪ್ರವಾಹವನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎನ್ನುವ ಹಲವಾರು ವರ್ಷಗಳ ಬೇಡಿಕೆಗೆ ಇದೀಗ ಪರಿಹಾರ ಸಿಗುತ್ತಿದೆ.
ಇದನ್ನೂ ಓದಿ: ಬೆಣ್ಣೆ ಹಳ್ಳ ಪ್ರವಾಹ: ದೇವಸ್ಥಾನದೊಳಗೆ ನುಗ್ಗಿದ ನೀರಿನಲ್ಲೇ 2 ದಿನ ಕಳೆದ ಮಾನಸಿಕ ಅಸ್ವಸ್ಥನ ರಕ್ಷಣೆ
2010ರವರೆಗೂ ಯಾವ ಇಲಾಖೆ ಈ ಹಳ್ಳಗಳನ್ನು ನಿರ್ವಹಣೆ ಮಾಡಬೇಕು ಎಂಬ ಬಗ್ಗೆಯೂ ಯಾವುದೇ ನಿಯಮಗಳಿರಲಿಲ್ಲ. ಆದರೆ 2010ಕ್ಕೆ ಬೆಣ್ಣೆಹಳ್ಳ-ತುಪ್ಪರಿಹಳ್ಳಗಳನ್ನು ಆಗಿನ ಯಡಿಯೂರಪ್ಪ ಸರ್ಕಾರ ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿಸಿತ್ತು. ಪರಮಶಿವಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನೂ ನೀಡಿತ್ತು. ಬಳಿಕ ವಿವಿಧ ಹಂತಗಳಲ್ಲಿ ಸಮೀಕ್ಷೆಗಳನ್ನು ನಡೆಸಿ ರೂ. 1610 ಕೋಟಿ ರೂ ಯೋಜನೆಯನ್ನು ಸಿದ್ಧಪಡಿಸಿ ಡಿಪಿಆರ್‌ನ್ನು ಇಲಾಖೆಗೆ ಸಲ್ಲಿಸಿತು. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷಗಳ ಹಿಂದೆಯೇ ರೂ. 200 ಕೋಟಿ ರೂ ಬಿಡುಗಡೆ ಮಾಡಿತ್ತು. ಆದರೆ ಕಾಮಗಾರಿ ನಾನಾ ಕಾರಣಗಳಿಂದಾಗಿ ಆರಂಭವಾಗಿರಲಿಲ್ಲ. ಸದ್ಯ ಇದೀಗ ಕಾಮಗಾರಿ ಆರಂಭವಾಗಿದ್ದು, ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪೂರ್ಣ ಯೋಜನೆಗೆ ಅನುಮೋದನೆ ನೀಡಿ ಹಂತ ಹಂತವಾಗಿ ಕಾಮಗಾರಿ ಕೈಗೊಂಡರೆ ನಿಜಕ್ಕೂ ರೈತರಿಗೆ ಅನುಕೂಲವಾಗೋದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:01 pm, Wed, 27 May 26