ನನಸಾಗಲಿದೆಯೇ ಧಾರವಾಡ ಬೆಳಗಾವಿ ರೈಲು ಯೋಜನೆ? ಜೋಶಿ, ಶೆಟ್ಟರ್ ಮೇಲೆ ಎಲ್ಲರ ಕಣ್ಣು
ಧಾರವಾಡ ಬೆಳಗಾವಿ ನಡುವಿನ ಪ್ರಸ್ತಾವಿತ ನೇರ ರೈಲು ಮಾರ್ಗ ಯೋಜನೆ ಈ ಬಾರಿಯಾದರೂ ನನಸಾಗಲಿದೆಯೇ ಎಂಬುದು ಆ ಪ್ರದೇಶದ ಜನರ ಕುತೂಹಲವಾಗಿದೆ. ಆದಾಗ್ಯೂ, ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಹಣಕಾಸು ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಲು ಉತ್ಸಾಹ ತೋರುತ್ತಿಲ್ಲ ಎಂಬುದು ಬಿಜೆಪಿ ಆರೋಪ. ಇದೀಗ ಮೂರನೇ ಬಾರಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು, ಜೋಶಿ, ಶೆಟ್ಟರ್ ಉಭಯ ಜಿಲ್ಲೆಗಳ ಸಂಸದರಾಗಿರುವುದು ಯೋಜನೆ ಜಾರಿಯ ಕನಸಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರುವಂತೆ ಮಾಡಿದೆ.

ಧಾರವಾಡ, ಜೂನ್ 24: ದೇಶದಲ್ಲಿ ಮೂರನೇ ಬಾರಿ ನರೇಂದ್ರ ಮೋದಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಧಾರವಾಡ (Dharawad) ಹಾಗೂ ಬೆಳಗಾವಿಯಲ್ಲಿ (Belagavi) ಮತ್ತೆ ಬಿಜೆಪಿ ತನ್ನ ಧ್ವಜ ಹಾರಿಸಿದೆ. ಈ ಬಾರಿ ಧಾರವಾಡದಲ್ಲಿ ಮತ್ತೆ ಪ್ರಲ್ಹಾದ್ ಜೋಶಿ ಆಯ್ಕೆಯಾದರೆ ಅತ್ತ ಬೆಳಗಾವಿಯಲ್ಲಿ ಮಾಜಿ ಸಿಎಂ ಹಾಗೂ ಧಾರವಾಡದವರೇ ಆದ ಜಗದೀಶ ಶೆಟ್ಟರ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಇದೀಗ ಬೆಳಗಾವಿ-ಧಾರವಾಡ ನಡುವಿನ ಪ್ರಸ್ತಾವಿತ ನೇರ ರೈಲು (Dharawad Belagavi Train) ಯೋಜನೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಇಬ್ಬರೂ ಸಂಸದರು ಸೇರಿ ಈ ಯೋಜನೆಯನ್ನು ಈ ಬಾರಿಯಾದರೂ ಮುಕ್ತಾಯ ಮಾಡುತ್ತಾರಾ ಎಂಬ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಧಾರವಾಡ ಬೆಳಗಾವಿ ರೈಲು ಯೋಜನೆಯ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕಾಗಿ ಈಗಾಗಲೇ ಯೋಜನೆ ರೂಪಿಸಿ, ಅದು ಜಾರಿಯಾಗುವ ಹಂತಕ್ಕೂ ಬಂದಿತ್ತು. ಆದರೆ ಅನೇಕ ಕಾರಣಗಳಿಂದ ಅದು ಮುಂದುವರೆಯುತ್ತಲೇ ಇಲ್ಲ. ಧಾರವಾಡದಿಂದ ಬೆಳಗಾವಿಗೆ ಈಗಿರುವ ರೈಲಿನ ಮೂಲಕ ಹೋದರೆ ಬರೋಬ್ಬರಿ ಮೂರು ಗಂಟೆ ಬೇಕು. ಏಕೆಂದರೆ ಧಾರವಾಡದಿಂದ ಹೊರಡೋ ರೈಲು ಅಳ್ನಾವರ್, ಲೋಂಡಾ, ಖಾನಾಪುರ ಮೂಲಕ ಬೆಳಗಾವಿ ಮುಟ್ಟಬೇಕಿದೆ. ಆದರೆ ಈ ಮಾರ್ಗದ ಬದಲಿಗೆ ನೇರವಾಗಿ ಧಾರವಾಡ-ಬೆಳಗಾವಿಗೆ ರೈಲು ಮಾರ್ಗ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಬಳಿಕ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಬೆಳಗಾವಿ ಧಾರವಾಡ ಪ್ರಯಾಣಕ್ಕೆ ಅರ್ಧ ಗಂಟೆ ಸಾಕು!
ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ, ಧಾರವಾಡದಿಂದ ಬೆಳಗಾವಿಗೆ ಅರ್ಧ ಗಂಟೆಯಲ್ಲಿಯೇ ತಲುಪಬಹುದಾಗಿದೆ. ಈಗಾಗಲೇ ಸರ್ವೆ ಕಾರ್ಯ ಮುಕ್ತಾಯವಾಗಿ ಬಹಳ ದಿನಗಳಾದವು. ಅಲ್ಲದೇ ಆರಂಭದ ಹಂತದಲ್ಲಿ ಕೇಂದ್ರ ಸರಕಾರ ಹತ್ತು ಕೋಟಿ ರೂಪಾಯಿ ಕೂಡ ನೀಡಿತ್ತು.
ಉತ್ಸಾಹ ತೋರದ ರಾಜ್ಯ ಸರ್ಕಾರ
ಈ ಮಾರ್ಗದ ನಿರ್ಮಾಣಕ್ಕೆ ಬೇಕಾಗಿರೋ ಭೂಮಿಯನ್ನು ಸ್ವಾಧೀನಪಡಿಸಿಕೊಡಬೇಕಾಗಿದ್ದು ರಾಜ್ಯ ಸರಕಾರದ ಜವಾಬ್ದಾರಿ. ಆದರೆ ರಾಜ್ಯ ಸರಕಾರ ಮಾತ್ರ ಈ ಯೋಜನೆಗೆ ಉತ್ಸುಕತೆ ತೋರಿಸುತ್ತಿಲ್ಲ ಅನ್ನೋ ಬಿಜೆಪಿ ಆರೋಪದ ಹಿನ್ನೆಲೆಯಲ್ಲಿಯೇ ಇದೀಗ ಬೆಳಗಾವಿಯಲ್ಲಿ ಮಾಜಿ ಸಿಎಂ ಸಂಸದರಾಗಿದ್ದು, ಇತ್ತ ಕೇಂದ್ರದಲ್ಲಿ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಸಚಿವರಾಗಿದ್ದಾರೆ. ಹೀಗಾಗಿ ಇಬ್ಬರೂ ಸೇರಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೂಲಕ ಈ ಯೋಜನೆಯನ್ನು ಮುಗಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಈ ರೈಲು ಮಾರ್ಗ ನಿರ್ಮಾಣಕ್ಕೆ 827.78 ಎಕರೆ ಭೂಮಿ ಅವಶ್ಯಕತೆಯಿತ್ತು. ಪ್ರಾರಂಭಿಕ ಹಂತದಲ್ಲಿ 4 ಕಿಮೀ ನಷ್ಟು ಭೂಮಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೇ ಇಲಾಖೆಗೆ ಹಸ್ತಾಂತರ ಮಾಡಿದ ಬಳಿಕ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬಹುದಾಗಿತ್ತು. ಯೋಜನೆಗೆ ಧಾರವಾಡ ವ್ಯಾಪ್ತಿಯಲ್ಲಿ ಒಟ್ಟು 10 ಹಳ್ಳಿಗಳ ಮೂಲಕ ಈ ಮಾರ್ಗ ಹೋಗಲಿದೆ. ಕೆಲಗೇರಿಯ ಮೂರು ಭಾಗಗಳಲ್ಲಿ 3.5 ಕಿ.ಮೀ., ಚಿಕ್ಕಮಲ್ಲಿಗೆವಾಡ ಭಾಗದಲ್ಲಿ 2.5 ಕಿ.ಮೀ. ಸೇರಿದಂತೆ ಅನೇಕ ಹಳ್ಳಿಗಳ ಕೊಂಚ ಪ್ರಮಾಣದ ಭೂಸ್ವಾಧೀನವಾಗಲಿದೆ. ಈ ಯೋಜನೆಯ ನೀಲ ನಕ್ಷೆ ಸಿದ್ಧಗೊಂಡಿದ್ದು, ಧಾರವಾಡ ತಾಲೂಕಿನ ಕ್ಯಾರಕೊಪ್ಪದಿಂದ ಆರಂಭವಾಗಿ ಐಐಟಿ, ಹೈಕೋರ್ಟ್, ಕಿತ್ತೂರು, ಹಿರೇಬಾಗೆವಾಡಿ ಮೂಲಕ ಸಾಗಲಿದೆ. ಆದರೆ ಇಲ್ಲಿಯವರೆಗೆ ಇಷ್ಟೆಲ್ಲಾ ಬೆಳವಣಿಗೆ ನಡೆದ ಮೇಲೆ ಅಂತಿಮ ಹಂತದ ಕೆಲಸವನ್ನು ರಾಜ್ಯ ಸರಕಾರವೇ ಮಾಡಬೇಕಿದೆ. ಆದರೆ ರಾಜ್ಯ ಸರಕಾರ ಮಾತ್ರ ಈ ಕಡೆ ಗಮನ ಹರಿಸದೇ ಇರೋದು ಬಿಜೆಪಿಯವರನ್ನು ಕೆರಳಿಸಿದೆ.
ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಕಿಡಿ
ಡಬಲ್ ಇಂಜಿನ್ ಸರಕಾರವಿದ್ದಾಗ ಈ ಯೋಜನೆಗೆ ಎಲ್ಲ ಸಹಕಾರ ಸಿಕ್ಕಿತ್ತು. ಆದರೆ ಇದೀಗ ರಾಜ್ಯ ಸರಕಾರದಿಂದ ಯಾವುದೇ ಕೆಲಸವೇ ಆಗುತ್ತಿಲ್ಲ. ಗ್ಯಾರಂಟಿಗಳ ಬೆನ್ನು ಬಿದ್ದಿರೋ ರಾಜ್ಯ ಸರಕಾರ ಇಂಥ ಯೋಜನೆಗಳಿಗೆ ಸಹಕಾರ ನೀಡೋದೇ ಇಲ್ಲ ಅನ್ನೋದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆರೋಪ.
ಇದನ್ನೂ ಓದಿ: ಮುಂಬೈ-ಹುಬ್ಬಳ್ಳಿ ಇಂಡಿಗೋ ವಿಮಾನ ಸೇವೆ ಪುನಾರಂಭ: ಯಾವಾಗಿನಿಂದ? ಟಿಕೆಟ್ ದರ ಎಷ್ಟು?
ರಾಜ್ಯ ಸರ್ಕಾರ ಉಚಿತ ಭೂಮಿ ಒದಗಿಸುವುದರ ಜೊತೆಗೆ ಕಾಮಗಾರಿಯ ವೆಚ್ಚದ ಅರ್ಧದಷ್ಟು ಹಣವನ್ನು ಒದಗಿಸಬೇಕಾಗುತ್ತದೆ. ಇನ್ನರ್ಧ ವೆಚ್ಚವನ್ನು ನೈರುತ್ಯ ರೈಲ್ವೆ ಭರಿಸಲಿದೆ. ರಾಜ್ಯ ಸರ್ಕಾರ ಭೂಮಿ ಹಸ್ತಾಂತರ ಮಾಡಿದ ದಿನದಿಂದ ಮೂರು ವರ್ಷದೊಳಗೆ ಮಾರ್ಗಪೂರ್ಣಗೊಳಿಸುವ ಹೊಣೆ ರೈಲ್ವೇ ಇಲಾಖೆಯದ್ದಾಗಿದೆ. ಒಟ್ಟಿನಲ್ಲಿ ಆರಂಭದಿಂದಲೂ ಸಾಕಷ್ಟು ವಿಘ್ನಗಳನ್ನು ಎದುರಿಸಿದ್ದ ಈ ಯೋಜನೆಗೆ ಈಗಲಾದರೂ ಮುಕ್ತಿ ಸಿಗುತ್ತಾ ಅನ್ನೋದನ್ನು ನೋಡಲು ಜನರು ಕಾದು ಕುಳಿತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Mon, 24 June 24