ಧಾರವಾಡದಲ್ಲಿ ರಾತ್ರೋ ರಾತ್ರಿ ಜೆಸಿಬಿಯಿಂದ ಮನೆ ಧ್ವಂಸ: ದಾಖಲಾಯ್ತು ಎಫ್ಐಆರ್
ಧಾರವಾಡ ನಗರದ 19ನೇ ವಾರ್ಡ್‌ನ ಹನುಮಂತ ನಗರ ಬಡಾವಣೆಯಲ್ಲಿ ಸಮಸ್ಯೆಯೊಂದು ಉದ್ಭವಿಸಿದೆ. ಸುಮಾರು ಎರಡೂವರೆ ದಶಕಗಳಿಂದ ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿರುವ ಜನರಿಗೆ ರಾತ್ರೋ ರಾತ್ರಿ ವ್ಯಕ್ತಿಯೊಬ್ಬ ಜೆಸಿಬಿ ತಂದು ಮನೆಗಳನ್ನು ನೆಲಸಮ ಮಾಡಿದ್ದಾನೆ. ಈ ಕುರಿತು ಆರೋಪಿ ವಿರುದ್ದ ಎಫ್ಐಆರ್ ದಾಖಲಾಗಿದೆ.
ಧಾರವಾಡ, ನ.02: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹುಬ್ಬಳ್ಳಿ-ಧಾರವಾಡ(Hubballi-Dharwad) ಅವಳಿ ನಗರದಲ್ಲಿ ಅಕ್ರಮ-ಸಕ್ರಮ ಬಡಾವಣೆಗಳಿಗೇನು ಕಡಿಮೆ ಇಲ್ಲ. ಹೆಚ್ಚು-ಕಡಿಮೆ ಎನ್‌ಎ ನಿವೇಶನಗಳ ದರದಲ್ಲಿಯೇ ಇವು ಸಹ ಮಾರಾಟವಾಗುತ್ತಿವೆ. ಹೀಗಾಗಿ ಅಕ್ರಮ ಬಡಾವಣೆಗಳಲ್ಲಿ ಆಗಾಗ ಗದ್ದಲ-ಗೊಂದಲಗಳಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಹೌದು, ಧಾರವಾಡ ನಗರದ 19ನೇ ವಾರ್ಡ್‌ನ ಹನುಮಂತ ನಗರ ಬಡಾವಣೆಯಲ್ಲಿ ಸಮಸ್ಯೆಯೊಂದು ಉದ್ಭವಿಸಿದೆ. ಸುಮಾರು ಎರಡೂವರೆ ದಶಕಗಳಿಂದ ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿರುವ ಜನರಿಗೆ ರಾತ್ರೋ ರಾತ್ರಿ ವ್ಯಕ್ತಿಯೊಬ್ಬ ಜೆಸಿಬಿ ತಂದು ಮನೆಗಳನ್ನು ನೆಲಸಮ ಮಾಡಲು ಸಜ್ಜಾಗಿದ್ದಲ್ಲದೇ, ಬಡಾವಣೆಯ ಮನೆಗಳನ್ನು ಖಾಲಿ ಮಾಡಿಸುವಂತೆಯೂ ಬೆದರಿಕೆ ಹಾಕಿದ್ದಾನೆ.
ರಾತ್ರೋರಾತ್ರಿ ಜೆಸಿಬಿಯಿಂದ ಮನೆ ಧ್ವಂಸ
2001 ರಲ್ಲಿ ನಗರದ ಡಾ. ಸತೀಶ್ ಶೆಟ್ಟಿ ಎಂಬುವರ ತಂದೆ ಇಲ್ಲಿಯ ಬಡಾವಣೆಯಲ್ಲಿ 6 ಗುಂಟೆ ಜಾಗವನ್ನು ಖರೀದಿಸಿದ್ದರು. ಅಲ್ಲಿಯೇ ಡಾ. ಸತೀಶ್ ಚಿಕ್ಕದೊಂದು ಮನೆಯನ್ನು ಕಟ್ಟಿದ್ದರು. ಆ ಮನೆಯಲ್ಲಿ ಸತೀಶ್ ಅವರಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬ ವಾಸವಾಗಿದ್ದ. ಇತ್ತೀಚಿಗೆ ಫಕ್ಕೀರಪ್ಪ ಮನಿಗೇನಿ ಎನ್ನುವ ವ್ಯಕ್ತಿ ಆಗಾಗ ಬಂದು ಸ್ಥಳೀಯ ಬಡಾವಣೆ ಜನರಿಗೆ, ‘ಇದು ನನ್ನ ಜಮೀನು ಎಂದು ಕ್ಯಾತೆ ತೆಗೆಯಲು ಶುರು ಮಾಡಿದ್ದಾನೆ. ಇದೇ ಫಕ್ಕಿರಪ್ಪ ಮನಿಗೇನಿ ಬುಧವಾರ ರಾತ್ರಿ ಏಕಾಏಕಿ ಡಾ. ಸತೀಶ್ ಅವರ ಮನೆಯನ್ನು ಜೆಸಿಬಿಯಿಂದ ಕೆಡವಿ ಹಾಕಿದ್ದಾನೆ. ಅದೃಷ್ಟವಶಾತ್ ಘಟನೆ ನಡೆದಾಗ ಆ ಮನೆಯಲ್ಲಿ ಯಾರೂ ಇರಲಿಲ್ಲ.
ಇನ್ನು ಘಟನೆ ನಡೆದ ಕೂಡಲೇ ಸ್ಥಳೀಯರೆಲ್ಲ ಬಂದು ಜೆಸಿಬಿ ವಾಹನ ಚಾಲಕನನ್ನು ವಶಕ್ಕೆ ಪಡೆದು ಜೆಸಿಬಿಯ ಎಲ್ಲ ಟೈಯರ್‌ಗಳ ಗಾಳಿಯನ್ನು ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಜೆಸಿಬಿ ಮೂಲಕ ಇಲ್ಲಿ ಕೆಲಸ ಮಾಡಿಸುತ್ತಿರುವ ಫಕ್ಕೀರಪ್ಪ, ಈ ಬಡಾವಣೆಯ ಜಾಗವು ನನ್ನದು ಎಂದು ಇಲ್ಲಿನ ಅನೇಕರ ಕಂಪೌಂಡ್ ಕೂಡ ಒಡೆದು ಹಾಕಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಚರಂಡಿ ಹಾಗೂ ಕುಡಿಯುವ ನೀರಿನ ಪೈಪುಗಳನ್ನು ಕೂಡ ಕತ್ತರಿಸಿದ್ದಾನಂತೆ. ಇನ್ನು ವಿದ್ಯುತ್ ಕಂಬಗಳ ಸುತ್ತಲಿನ ಮಣ್ಣನ್ನು ತೆಗೆದ ಕಾರಣ, ಅವು ಬೀಳುವ ಸ್ಥಿತಿಗೆ ಬಂದಿವೆ. ಈತನಿಂದ ಬೇಸತ್ತು ಸ್ಥಳೀಯರು ವಿದ್ಯಾಗಿರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.
ಆರೋಪಿ ವಿರುದ್ದ ಎಫ್ಐಆರ್ ದಾಖಲು
ಅಕ್ರಮ-ಸಕ್ರಮ ಜಾಗ ಇದಾಗಿರುವುದರಿಂದ ದಾಖಲೆಗಳು ಅವರ ಬಳಿ ಇದ್ದರೆ, ಕಾನೂನು ಪ್ರಕಾರ ಹೋರಾಡಿ ಜಾಗ ಪಡೆದುಕೊಳ್ಳಲಿ. ಅದನ್ನು ಬಿಟ್ಟು ಮನೆ ನೆಲಸಮ ಮಾಡಲು ಬರುವುದು ಕಾನೂನು ಮೇಲೆ ಗೌರವ, ಭಯ ಇಲ್ಲದಂತಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನು ಡಾ. ಸತೀಶ್ ಶೆಟ್ಟಿ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಫಕ್ಕೀರಪ್ಪನ ಮೇಲೆ ವಿದ್ಯಾಗಿರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಇದನ್ನೂ ಓದಿ:ಶಿವರಾಮ ಕಾರಂತ ಬಡಾವಣೆ ನಿವಾಸಿಗಳಿಗೆ ಬಿಗ್ ರಿಲೀಫ್; ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಿದ ಸುಪ್ರೀಂ ಕೋರ್ಟ್
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಡಾ. ಸತೀಶ್ ಶೆಟ್ಟಿ, ‘ಈ ಮುಂಚೆಯೇ ನಾನು ವಿದ್ಯಾಗಿರಿ ಪೊಲೀಸರಿಗೆ ದೂರು ನೀಡಿದ್ದೆ. ಫಕ್ಕೀರಪ್ಪ ಪದೇ ಪದೇ ಬಂದು ಈ ಜಾಗ ತಮಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ಕಾನೂನು ಪ್ರಕಾರ ಅವರು ದಾಖಲೆಗಳನ್ನು ತಂದರೆ, ನಾವು ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ, ಈ ರೀತಿ ರಾತ್ರೋ ರಾತ್ರಿ ದೌರ್ಜನ್ಯ ಮಾಡಿದರೆ ಹೇಗೆ?. ಇವರಿಗೆ ಕಾನೂನು, ಪೊಲೀಸರ ಭಯವೂ ಇಲ್ಲದಂತಾದರೆ ನಮ್ಮಂಥವರು ಬದುಕೋದು ಹೇಗೆ ಎಂದು ಪ್ರಶ್ನಿಸಿದ್ದಾರಂತೆ.
ಜೀವ ಬೆದರಿಕೆ ಆರೋಪ
ಈ ಕುರಿತು ಸ್ಥಳೀಯ ಮಹಿಳೆಯೊಬ್ಬರು ‘ಮನೆಯಲ್ಲಿ ಮಹಿಳೆಯರಷ್ಟೇ ಇರುವಾಗ, ಇವರೆಲ್ಲ ಬಂದು ಬೆದರಿಕೆ ಹಾಕುತ್ತಾರೆ. ಇವರ ಕಿರುಕುಳದಿಂದ ನಮಗೆ ಆತಂಕವಾಗಿದೆ. ಇವರಿಗೆಲ್ಲ ಕಾನೂನು ಅನ್ನೋದೇ ಇಲ್ಲದಂತಾಗಿದೆ. ಇಪ್ಪತ್ತು-ಮೂವತ್ತು ವರ್ಷಗಳಿಂದ ಮನೆ ಕಟ್ಟಿಕೊಂಡು ಇರೋರಿಗೆಲ್ಲ ಇದೀಗ ಕಿರುಕುಳ, ಬೆದರಿಕೆ ಶುರುವಾಗಿವೆ. ಈ ರೀತಿ ರಾತ್ರೋರಾತ್ರಿ ಬಂದು ಜೆಸಿಬಿಯಿಂದ ಮನೆ ಬೀಳಿಸೋದು ಅಂದರೆ ನಮ್ಮಂಥವರು ಎಲ್ಲಿಗೆ ಹೋಗಬೇಕು. ಕೂಡಲೇ ಇಂಥವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ