ಅಂಗನವಾಡಿ ಸಿಬ್ಬಂದಿ ಎಡವಟ್ಟು: ಲಸಿಕೆ ಓವರ್ ಡೋಸ್‌ನಿಂದ ಮಗು ಸಾವು, ಪೋಷಕರ ಆರೋಪ
ಹುಬ್ಬಳ್ಳಿ ನಗರದ ಉಣಕಲ್ನಲ್ಲಿ ಅಂಗನವಾಡಿ ಕೇಂದ್ರದ ಸಿಬ್ಬಂದಿ ಎಡವಟ್ಟಿನಿಂದ ಮಗು ಸಾವು ಆರೋಪ ಕೇಳಿಬಂದಿದೆ. ಒಂದೇ ದಿನ ಮಗುವಿಗೆ 5 ಲಸಿಕೆ ಹಾಕಿದ್ದ ಪರಿಣಾಮ ಓವರ್ ಡೋಸ್‌ನಿಂದ ಮಗು ಮೃತಪಟ್ಟಿದೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಲಸಿಕೆ ರಿಯಾಕ್ಟ್ ಆಗಿರುವ ತರಹ ಕಾಣುತ್ತಿಲ್ಲ ಎಂದಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 21: ಅಂಗನವಾಡಿ (Anganwadi) ಕೇಂದ್ರದ ಸಿಬ್ಬಂದಿ ಎಡವಟ್ಟಿನಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯ ಉಣಕಲ್ನ ನಿವಾಸಿ ಜಟ್ಟೆಪ್ಪರ ಮೊಮ್ಮಗ ಧ್ರುವ (2 ವರ್ಷ) ಮೃತ ಮಗು. ತಾತ ಹಾಗೂ ಅಜ್ಜಿಯ ಮನೆಯಲ್ಲಿ ಧ್ರುವ ವಾಸವಿದ್ದ. ಒಂದೇ ದಿನ 5 ಲಸಿಕೆ ಹಾಕಿದ್ದ ಪರಿಣಾಮ ಓವರ್ ಡೋಸ್‌ನಿಂದ ಮಗು ಮೃತಪಟ್ಟಿದೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿ ವಿರುದ್ಧ ಆರೋಪಿಸಲಾಗಿದೆ.
ನಿನ್ನೆ ಹುಬ್ಬಳ್ಳಿಯ ಸಾಯಿನಗರದ ಅಂಗನವಾಡಿ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಲಸಿಕೆ ಹಾಕಿದ್ದರು. ಲಸಿಕೆ ಹಾಕಿದ ಬಳಿಕ ತೀವ್ರ ಜ್ವರ, ಹೊಟ್ಟೆ ನೋವಿನಿಂದ ಮಗು ಬಳಲಿದ್ದು, ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವಿನ ಅಜ್ಜಿ ದಾಖಲಿಸಿದ್ದರು. ಕಿಮ್ಸ್ಗೆ ದಾಖಲಾಗುತ್ತಿದ್ದಂತೆಯೇ ಮಗು ಸಾವನ್ನಪ್ಪಿದೆ. ಆಸ್ಪತ್ರೆ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೊಪ್ಪಳ: ಪದೇ ಪದೇ ಉದುರಿ ಬೀಳುತ್ತಿದೆ ಅಂಗನವಾಡಿಯ ಮೇಲ್ಛಾವಣಿ ಸಿಮೆಂಟ್, ಬಯಲಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ
ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇವತ್ತು 3.25 ಕ್ಕೆ ಮಗು ಕಿಮ್ಸ್ನಲ್ಲಿ ದಾಖಲಾಗಿತ್ತು. ಮಗು ನಮ್ಮಲ್ಲಿ ಬಂದಾಗ ಮೃತವಾಗಿತ್ತು. ಮಗುವಿನ ಉಸಿರಾಟ ಇರಲಿಲ್ಲ. ಮಗುವಿಗೆ ತಾಜ ನಗರದಲ್ಲಿ ಲಸಿಕೆ ಹಾಕಿಸಿದ್ದಾರೆ. 16 ರಿಂದ 24 ತಿಂಗಳ ಮಗುವಿಗೆ ಲಸಿಕೆ ಕೊಡಬೇಕು. ಅದೇ ರೀತಿ ಅಂಗನವಾಡಿಯಲ್ಲಿ ಲಸಿಕೆ ಹಾಕಿದ್ದಾರೆ. ಅಕಸ್ಮಾತ್ ಮಗುವಿಗೆ ಲಸಿಕೆ ರಿಯಾಕ್ಷನ್ ಆಗಿದ್ದರೆ ನಿನ್ನೆಯೇ ಆಗಬೇಕಿತ್ತು. ಆದರೆ ಲಸಿಕೆ ರಿಯಾಕ್ಟ್ ಆಗಿರುವ ತರಹ ಕಾಣುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಬೀಡಾ ಅಂಗಡಿ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಬೇರೆಡೆಗೆ ಶಿಫ್ಟ್
ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಮಗು ಕುಸಿದುಬಿದ್ದಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿ ಆಕ್ಸಿಜನ್ ಇರಲಿಲ್ಲ. ನಮ್ಮಲ್ಲಿ ಬರುವ ಮುನ್ನ ಮಗು ಸಾವನ್ನಪ್ಪಿತ್ತು. ಮಗು ಸಾವಿಗೆ ನಿಖರ ಕಾರಣ ತಿಳಿತಿಲ್ಲ. ಮರೋಣತ್ತರ ಪರೀಕ್ಷೆ ಆದ ಬಳಿಕ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:09 pm, Thu, 21 December 23