ತಪ್ಪಿದ ಭಾರಿ ದುರಂತ: ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಆಗಸದಲ್ಲೇ ಸುತ್ತಾಡಿ ಬೆಂಗಳೂರಲ್ಲಿ ಲ್ಯಾಂಡ್​​; ಆಗಿದ್ದೇನು?

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ Fly91 ವಿಮಾನ ಭಾರಿ ದುರಂತದಿಂದ ಪಾರಾಗಿದೆ. ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಸಾಧ್ಯವಾಗದೆ, ವಿಮಾನ 4 ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿ ಬೆಂಗಳೂರಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ತಪ್ಪಿದ ಭಾರಿ ದುರಂತ: ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಆಗಸದಲ್ಲೇ ಸುತ್ತಾಡಿ ಬೆಂಗಳೂರಲ್ಲಿ ಲ್ಯಾಂಡ್​​; ಆಗಿದ್ದೇನು?
ಸಾಂದರ್ಭಿಕ ಚಿತ್ರ
Edited By:

Updated on: Apr 20, 2026 | 9:12 AM

ಹುಬ್ಬಳ್ಳಿ, ಏಪ್ರಿಲ್​​ 20: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭವನೀಯ ವಿಮಾನ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬಚಾವ್​​ ಆಗಿದ್ದಾರೆ. ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡ Fly91 ಏರ್​​ಲೈನ್ಸ್ ವಿಮಾನ ಬರೋಬ್ಬರಿ 4 ಗಂಟೆಗಳ ಕಾಲ ಆಗಸದಲ್ಲೇ ಹಾರಾಡಿದೆ. ಹೈದರಾಬಾದ್​​ನಿಂದ ಹುಬ್ಬಳ್ಳಿ ಏರ್​​ಪೋರ್ಟ್​ಗೆ ಬರುತ್ತಿದ್ದ ಫ್ಲೈಟ್​​ನ ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡಲು ಹರಸಾಹಸ ಪಡಲಾಗಿದ್ದು, ಅಂತಿಮವಾಗಿ ವಿಮಾನವನ್ನು ಬೆಂಗಳೂರಿನಲ್ಲಿ ಲ್ಯಾಂಡಿಂಗ್​​ ಮಾಡಲಾಗಿದೆ.

ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್​​​ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ಟೇಕಾಫ್​​ ಆಗಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್​​ ಮಾಡಲು ಭಾರಿ ಪ್ರಯತ್ನ ನಡೆಸಲಾಗಿದೆಯಾದರೂ, ಅಂತಿಮವಾಗಿ ಅದು ಸಾಧ್ಯವಿಲ್ಲ ಎಂಬುದನ್ನು ಅರಿತು 4 ಗಂಟೆ ಕಾಲ ಮುಂಡಗೋಡ, ದಾವಣಗೆರೆ, ಶಿವಮೊಗ್ಗ ಪ್ರದೇಶದಲ್ಲಿ ಸುತ್ತಾಟ ನಡೆಸಿ ಸಂಜೆ 7.30ಕ್ಕೆ ಬೆಂಗಳೂರು ಏರ್​ಪೋರ್ಟ್​ನಲ್ಲಿ ವಿಮಾನವನ್ನು ಲ್ಯಾಂಡ್​​​​ ಮಾಡಲಾಗಿದೆ.

ಇದನ್ನೂ ಓದಿ: ಬಾಲ ಬಿಚ್ಚಿದರೆ ಗಡೀಪಾರು; ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

ಲ್ಯಾಂಡ್​​​​ ಆಗದೆ ವಿಮಾನ ಆಗಸದಲ್ಲೇ ಸುತ್ತಾಡುತ್ತಿದ್ದ ಕಾರಣ ಆತಂಕದಲ್ಲಿದ್ದ Fly91 ಏರ್​​ಲೈನ್ಸ್ ವಿಮಾನದಲ್ಲಿದ್ದ ಪ್ರಯಾಣಿಕರು ಕಣ್ಣೀರಿಟ್ಟಿರುವ ಪ್ರಸಂಗವೂ ನಡೆದಿದೆ. ನಾವಿನ್ನೂ ಜೀವಂತವಾಗಿ ಬರೋದು ಅನುಮಾನವಿದೆ ಎಂದು ಕೆಲವರು ಕುಟುಂಬಸ್ಥರಿಗೆ ಮೊಬೈಲ್​ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ನಡುವೆ Fly91 ಏರ್​​ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದು, ಘಟನೆ ಬಗ್ಗೆ ಮಾಹಿತಿ ನೀಡದೆ ಏರ್​​ಲೈನ್ಸ್​​ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಕೇಳಿಬಂದಿದೆ.

ಹವಾಮಾನ ವೈಪರಿತ್ಯವೋ? ತಾಂತ್ರಿಕ ದೋಷವೋ?

ವಿಮಾನದ ಲ್ಯಾಂಡಿಂಗ್​​ ವೇಳೆ ಅಸಲಿಗೆ ಆದ ಸಮಸ್ಯೆ ಏನು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಯಾಣಿಕರು ಹೇಳುವಂತೆ ತಾಂತ್ರಿಕದೋಷದಿಂದ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್​​ ಆಗಲು ಸಾಧ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ ಹವಾಮಾನ ವೈಪರಿತ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us