AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಸೌಹಾರ್ದತೆಗೆ ಸಾಕ್ಷಿಯಾದ ಹುಬ್ಬಳ್ಳಿ ಗಣೇಶೋತ್ಸವ: ಕರಗಿದ ಕೋಮುದ್ವೇಷ

ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗಿದೆ. ನಗರದ ಸಂಭವಿಸಿದ ಕೆಲ ಕೋಮು ಸಂಘರ್ಷಗಳ ನಂತರ ಈ ವರ್ಷದ ಹಬ್ಬವು ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಕವಾಲಿ ಹಾಡು ಹಾಕುವ ಮೂಲಕ ಭಾವೈಕ್ಯತೆ ಸಾರಲಾಗಿದೆ. ಇನ್ನು ಡಿಜಿಟಲ್ ಅಲಂಕಾರಗಳು ಕನ್ಮಣ ಸೆಳೆಯುತ್ತಿವೆ.

ಈ ಬಾರಿ ಸೌಹಾರ್ದತೆಗೆ ಸಾಕ್ಷಿಯಾದ ಹುಬ್ಬಳ್ಳಿ ಗಣೇಶೋತ್ಸವ: ಕರಗಿದ ಕೋಮುದ್ವೇಷ
ಹುಬ್ಬಳ್ಳಿ ಗಣೇಶೋತ್ಸವ
ಸಂಜಯ್ಯಾ ಚಿಕ್ಕಮಠ
| Edited By: |

Updated on:Sep 03, 2025 | 3:03 PM

Share

ಹುಬ್ಬಳ್ಳಿ, ಸೆಪ್ಟೆಂಬರ್​ 03: ಉತ್ತರ ಕರ್ನಾಟಕದ ರಾಜಧಾನಿ ಅಂತಲೇ ಕರೆಸಿಕೊಳ್ಳುವ ಹುಬ್ಬಳ್ಳಿ (Hubballi) ಕೋಮುಸೂಕ್ಷ್ಮ ನಗರ. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದಿಂದ ಆರಂಭವಾದ ಗಲಾಟೆ ಹಿಂದೂ- ಮುಸ್ಲಿಂ ನಡುವಿನ ಸಾಮರಸ್ಯವನ್ನು ಹಾಳು ಮಾಡಿದ್ದವು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ನಡೆದಿದ್ದ ಅಟ್ಯಾಕ್ ಮತ್ತಷ್ಟು ಕಂದಕ ನಿರ್ಮಾಣ ಮಾಡಿತ್ತು. ಆದರೆ ಇದೀಗ ಇದೇ ಹುಬ್ಬಳ್ಳಿ, ಭಾವೈಕ್ಯತೆಗೆ ಸಾಕ್ಷಿಯಾಗುತ್ತಿದೆ. ಗಣೇಶ ಹಬ್ಬ (Ganesh Chaturthi) ಹಿಂದೂ-ಮುಸ್ಲಿಂರ ನಡುವಿನ ಕಂದಕ ದೂರು ಮಾಡಿ ಸಾಮರಸ್ಯಕ್ಕೆ ನಾಂದಿ ಹಾಡುತ್ತಿದೆ.

ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಜನರು ಕೋಮುಸಂಘರ್ಷಗಳಿಂದ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸಹೋದರರಂತೆ ಇದ್ದ ಹಿಂದೂ-ಮುಸ್ಲಿಂರ ನಡುವೆ ಈದ್ಗಾ ಹೋರಾಟ ದ್ವೇಷದ ಬೆಂಕಿ ಹಚ್ಚಿತ್ತು. ನಂತರ ನಡೆದ ಅನೇಕ ಘಟನೆಗಳು, ಇತ್ತೀಚೆಗೆ ನಡೆದ ಹಳೆ ಹುಬ್ಬಳ್ಳಿ ಗಲಾಟೆ ಪ್ರಕರಣದಿಂದ ಹುಬ್ಬಳ್ಳಿ ನಗರದಲ್ಲಿ ದ್ವೇಷಮಯ ವಾತಾವರಣ, ಕೋಮುಸಂಘರ್ಷಗಳ ಬೆಂಕಿ ಹತ್ತಿತ್ತು. ಆದರೆ ಇದೀಗ ಪರಿಸ್ಥಿತಿ ತಿಳಿಯಾಗುತ್ತಿದ್ದು, ಜನರು ಸಾಮರಸ್ಯದಿಂದ ಬದಕುವುದನ್ನು ಕಲಿಯುತ್ತಿದ್ದಾರೆ. ಇಂತಹದೊಂದು ಸಾಮರಸ್ಯಕ್ಕೆ ನಾಂದಿಯಾಗಿರುವುದು ಗಣೇಶ ಹಬ್ಬ.

ಇದನ್ನೂ ಓದಿ: ಗಣೇಶ ವಿಸರ್ಜನೆ ಗಲಾಟೆ: ಹಿಂದೂ ಮುಸ್ಲಿಂ ಜಗಳವೆಂದು ಬಿಂಬಿಸಲು ಯತ್ನ, ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು

ಇದನ್ನೂ ಓದಿ
Image
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕುಸಿದುಬಿದ್ದು ಯುವಕ ದುರಂತ ಸಾವು
Image
ಗಣೇಶ ವಿಸರ್ಜನೆ ವೇಳೆ ಗಲಾಟೆ: ಹಿಂದೂ ಮುಸ್ಲಿಂ ಜಗಳವೆಂದು ಬಿಂಬಿಸಲು ಯತ್ನ
Image
ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್: ಹೃದಯಾಘಾತದಿಂದ ಕುಸಿದು ಬಿದ್ದು 2 ಸಾವು
Image
ಆ. 27ರಿಂದ ಬೆಂಗಳೂರಿನಲ್ಲಿ ವಿಸರ್ಜನೆಯಾದ ಗಣೇಶ ಮೂರ್ತಿಗಳೆಷ್ಟು?

ಕರ್ನಾಟಕದಲ್ಲಿಯೇ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ 900ಕ್ಕೂ ಅಧಿಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಮಂಗಳವಾರ ನಡೆದ ಏಳು ದಿನಗಳ ಗಣೇಶ ಮೂರ್ತಿ ವಿಸರ್ಜನೆ ಭಾವೈಕ್ಯತೆ, ಕೋಮುಸೌಹಾರ್ದತೆಗೆ ಸಾಕ್ಷಿಯಾಯ್ತು. ನಗರದ ಘಂಟಿಕೇರಿ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ನಗರದ ಶಹಬಜಾರ್ ಬಳಿಯ ಮಸೀದಿ ಬಂದಾಗ, ಗಣೇಶ ಮಂಡಳಿಯವರು ಕವಾಲಿ ಹಾಡು ಹಾಕುವ ಮೂಲಕ ಭಾವೈಕ್ಯತೆ ಸಾರಿದರು. ಈ ಸಮಯದಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಸೇರಿ ಕವಾಲಿ ಹಾಡಿಗೆ ಹೆಜ್ಜೆ ಹಾಕಿ ಸಂತಸ ಪಟ್ಟರು. ಪರಸ್ಪರ ಅಭಿನಂದನೆ ಸಲ್ಲಿಸಿದರು.

Hbl Ganesh

ಇನ್ನು ಹುಬ್ಬಳ್ಳಿ ನಗರದ ಶಬರಿ ನಗರದಲ್ಲಿ ಮುಸ್ಲಿಂ ಬಾಂಧವರು, ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಿ, ತಮ್ಮ ಗೌರವ ಸಲ್ಲಿಸಿದರು. ಹಿಂದೂ-ಮುಸ್ಲಿಮರೆಲ್ಲರು ಸೇರಿ ಶುಭಾಷಯಗಳು ವಿನಿಮಯ ಮಾಡಿಕೊಂಡರು. ಅನೇಕ ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಮುಸ್ಲಿಂ ಬಾಂಧವರು ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು. ತಾವೇ ಮುಂದೆ ನಿಂತು ಪ್ರಸಾದ ವಿತರಣೆ ಕೂಡ ಮಾಡಿದರು. ಹೀಗಾಗಿ ಕಳೆದ ವರ್ಷ ಕೂಡ ಇದೇ ರೀತಿಯ ಸಾಮರಸ್ಯದಿಂದ ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿತ್ತು. ಈ ವರ್ಷ ಕೂಡ ಸಾಮರಸ್ಯೆದ ಬೆಸುಗೆ ಮುಂದುವರಿದಿದ್ದು, ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿದೆ.

ಕನ್ಮಣ ಸೆಳೆಯುತ್ತಿರುವ ಡಿಜಿಟಲ್ ಗಣೇಶ ಟೆಂಟ್ ನಿರ್ಮಾಣ

ಇನ್ನು ಒಂದೆಡೆ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬ ಸಾಮರಸ್ಯೆ, ಕೋಮುಸೌಹಾರ್ದತೆಗೆ ಸಾಕ್ಷಿಯಾದರೆ, ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಅನೇಕ ಗಣೇಶ ಮೂರ್ತಿಗಳು ಸಾರ್ವಜನಿಕರ ಆಕರ್ಷಣೆಯನ್ನು ಹೆಚ್ಚಿಸುತ್ತಿವೆ. ನಗರದ ಬಾಬಾಸಾನಾ ಗಲ್ಲಿಯಲ್ಲಿ ಗಜಾನನ ಉತ್ಸವ ಯುವಕ ಮಂಡಳದಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ಮತ್ತು ವೇದಿಕೆ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ನಿರ್ಮಾಣ ಮಾಡಿರುವ ಟೆಂಟ್ ತುಂಬಾ ಎಲ್​ಇಡಿ ಪರದೆಗಳನ್ನು ಅಳವಡಿಸಲಾಗಿದೆ. ರಾತ್ರಿ ಸಮಯದಲ್ಲಿ ಎಲ್​​ಇಡಿ ಪರದೆಗಳ ಮೇಲೆ ಬ್ರಹ್ಮಾಂಡದ ಕೌತುಕದ ಮೂರು ನಿಮಿಷಗಳ ವಿಶೇಷ ಶೋ ಪ್ರಸಾರ ಮಾಡಲಾಗುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಹನ್ನೆರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ, ಇಂತಹದೊಂದು ಡಿಜಿಟಲ್ ಟೆಂಟ್ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಇಬ್ಬರು ಸಾವು

ಹುಬ್ಬಳ್ಳಿಯಲ್ಲಿ ಈ ಬಾರಿ ಒಂದೆಡೆ ಕೋಮುಸೌಹಾರ್ದತೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಅಲಂಕಾರ ಹೆಚ್ಚಿನ ಜನರ ಆಕರ್ಷಣೆ ಹೆಚ್ಚಿಸುತ್ತಿದೆ. ಹೀಗಾಗಿ ರಾಜ್ಯದ ವಿವಿಧೆಡೆಯಿಂದ ಜನರು ಹುಬ್ಬಳ್ಳಿಗೆ ಬಂದು, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವೀಕ್ಷಿಸಿ ಸಂತಸ ಪಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Wed, 3 September 25