ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ ಎಂದ ಪ್ರಲ್ಹಾದ್ ಜೋಶಿ: ಸಮಸ್ಯೆಗಳ ಬಗ್ಗೆ ಚರ್ಚೆಗೆ ಆಹ್ವಾನ

ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತರ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದ್ದು, ರೈತ ಮುಖಂಡರ ಜತೆ ಚರ್ಚೆಗೆ ಸಿದ್ಧ. ಅವರನ್ನು ಒಳಗೊಂಡಂತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದಾಗಿ ಜೋಶಿ ಹೇಳಿದ್ದಾರೆ.

ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ ಎಂದ ಪ್ರಲ್ಹಾದ್ ಜೋಶಿ: ಸಮಸ್ಯೆಗಳ ಬಗ್ಗೆ ಚರ್ಚೆಗೆ ಆಹ್ವಾನ
ಕಬ್ಬು ಬೆಳೆಗಾರರ ಪ್ರತಿಭಟನೆ ಹಾಗೂ ಸಚಿವ ಪ್ರಲ್ಹಾದ್ ಜೋಶಿ
Image Credit source: tv9
Edited By:

Updated on: Sep 29, 2026 | 2:17 PM

ಹುಬ್ಬಳ್ಳಿ, ಸೆಪ್ಟೆಂಬರ್ 29: ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ರೈತರ ಸಮಸ್ಯೆ, ಗೊಂದಲ ಹಾಗೂ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆಗೆ ರೈತ ಮುಖಂಡರು ಮತ್ತು ಹೋರಾಟಗಾರರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. 2026ರ ಫೆಬ್ರವರಿಯಲ್ಲಿ ರೈತ ಮುಖಂಡರು ತಮ್ಮನ್ನು ಭೇಟಿಯಾಗಿ ಕಬ್ಬಿನ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಹೆಚ್ಚಿಸುವಂತೆ ಮನವಿ ಮಾಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ವರ್ಷ ಎಫ್‌ಆರ್‌ಪಿ ಹೆಚ್ಚಿಸುತ್ತಿದ್ದು, ಮೇ ತಿಂಗಳಲ್ಲಿ ಅದನ್ನು 365 ರೂ.ಗೆ ಹೆಚ್ಚಿಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಎಫ್‌ಆರ್‌ಪಿ ನಿಗದಿ ಮಾಡುವಾಗ ಬೆಲೆ ನಿಗದಿ ಸಮಿತಿ ಹಾಗೂ ರಾಜ್ಯ ಸರ್ಕಾರದ ಕಬ್ಬು ಆಯುಕ್ತರ ವರದಿ ಮತ್ತು ಶಿಫಾರಸುಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಮೇ ತಿಂಗಳ ಬಳಿಕ ರೈತರಿಂದ ತಮ್ಮನ್ನು ಭೇಟಿಯಾಗುವಂತೆ ಯಾವುದೇ ಮನವಿ ಬಂದಿಲ್ಲ ಎಂದಿರುವ ಜೋಶಿ, ರೈತರ ಮನವಿಯನ್ನು ಸರ್ಕಾರ ಕಡೆಗಣಿಸಿದೆ ಎಂಬ ಭಾವನೆ ಇದ್ದರೆ ಅದಕ್ಕೆ ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.

ರೈತರನ್ನು ದೆಹಲಿಗೆ ಆಹ್ವಾನಿಸಿದ ಜೋಶಿ

ಪ್ರತಿ ವರ್ಷದಂತೆ ಈ ಬಾರಿಯೂ ಸೂಕ್ತ ಬೆಲೆ ನೀಡಲಾಗುವುದು ಎಂದು ತಿಳಿಸಿರುವ ಅವರು, ರೈತ ಮುಖಂಡರು ಮತ್ತು ಹೋರಾಟಗಾರರು ನವದೆಹಲಿಗೆ ಬಂದರೆ ಗೌರವದಿಂದ ಸ್ವಾಗತಿಸಿ, ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಹೇಳಿದ್ದಾರೆ.

ರೈತರ ಹಿತಾಸಕ್ತಿ ಕಾಪಾಡುವುದೇ ಆದ್ಯತೆ: ಪ್ರಲ್ಹಾದ್ ಜೋಶಿ

ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದೆ. ಇದೀಗ ಕಬ್ಬು ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳು ಹಾಗೂ ಇತರ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಜೋಶಿ ಹೇಳಿದ್ದಾರೆ.

ಪ್ರಲ್ಹಾದ್ ಜೋಶಿ ಎಕ್ಸ್ ಸಂದೇಶ


ಸಕ್ಕರೆ ಎಂಎಸ್‌ಪಿ ₹60ಕ್ಕೆ ಹೆಚ್ಚಿಸಲು ರೈತರ ಆಗ್ರಹ

ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಷ್ಟೇ ಅಲ್ಲದೆ ದೇಶದ ವಿವಿಧೆಡೆಯಿಂದಲೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸಕ್ಕರೆಯ ಎಂಎಸ್‌ಪಿಯನ್ನು ಪ್ರತಿ ಕೆಜಿಗೆ ₹60ಕ್ಕೆ ಹೆಚ್ಚಿಸಬೇಕು. ಕಬ್ಬಿನ ಎಫ್‌ಆರ್‌ಪಿಯನ್ನು ₹5,500ಕ್ಕೆ ನಿಗದಿ ಮಾಡಬೇಕು. ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬೇಡಿಕೆ ಈಡೇರುವವರೆಗೆ ಹುಬ್ಬಳ್ಳಿ ಬಿಡಲ್ಲವೆಂದ ರೈತರು

ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಸಕ್ಕರೆಯ ಎಂಎಸ್‌ಪಿ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಾದರೆ ಕಬ್ಬಿನ ಬೆಲೆಯೂ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ ಹುಬ್ಬಳ್ಳಿ ಬಿಟ್ಟು ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ದೆಹಲಿಗೆ ತೆರಳಿ ಸಭೆ ನಡೆಸುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಚಿವ ಸಂಪುಟ ಸಭೆ ನಡೆಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಎಂಎಸ್‌ಪಿ ಹೆಚ್ಚಳವಾಗಿಲ್ಲ. ಪ್ರತಿ ಕೆಜಿ ಸಕ್ಕರೆಗೆ ₹31ರಷ್ಟಿರುವ ಎಂಎಸ್‌ಪಿಯನ್ನು ₹60ಕ್ಕೆ ಹೆಚ್ಚಿಸಬೇಕು ಎಂದು ಚೂನಪ್ಪ ಪೂಜಾರಿ ಆಗ್ರಹಿಸಿದ್ದಾರೆ.

ಚನ್ನಮ್ಮ ವೃತ್ತದಲ್ಲಿ ಸಂಚಾರ ಬಂದ್

Sugarcane Farmers’ Stages Massive Protest In Hubballi, Demands ₹60 MSP & ₹5,500 FRP
ರೈತರ ಬೃಹತ್ ಪ್ರತಿಭಟನೆಯಿಂದ ಹುಬ್ಬಳ್ಳಿಯ ಪ್ರಮುಖ ಚನ್ನಮ್ಮ ವೃತ್ತದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಾವಿರಾರು ರೈತರು ವೃತ್ತದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ನಿಲಿಜಿನ್ ರಸ್ತೆಯನ್ನೂ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದು, ಹಲವು ಕಿಲೋಮೀಟರ್‌ಗಳಷ್ಟು ವಾಹನಗಳು ಸಾಲುಗಟ್ಟಿ ನಿಂತಿವೆ. ಮುಂಜಾನೆ 10 ಗಂಟೆಯಿಂದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಪ್ರಮುಖ ವೃತ್ತದಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಬಂದ್ ಆಗಿದೆ.

ರೈತರ ಮನವೊಲಿಕೆಗೆ ಪೊಲೀಸ್ ಆಯುಕ್ತರ ಪ್ರಯತ್ನ

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ರೈತ ಮುಖಂಡರಾದ ಶಶಿಕಾಂತ ಗುರೂಜಿ ಮತ್ತು ಚೂನಪ್ಪ ಪೂಜಾರಿ ಅವರನ್ನು ಭೇಟಿಯಾಗಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳ ಕುರಿತು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us