ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅನಾಹುತ: ಕಂಪನಿ ಮ್ಯಾನೇಜರ್ ಬಂಧನ
ಅಗ್ನಿ ಅವಘಡ ಪ್ರಕರಣದಿಂದ ತಾರಿಹಾಳ ಗ್ರಾಮಸ್ಥರು ರೊಚ್ಚಿಗೆದಿದ್ದಾರೆ. ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಡೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ.
ಹುಬ್ಬಳ್ಳಿ: ನಗರದ ತಾರಿಹಾಳದ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ (fire accident) ಸಂಬಂಧ ಕಂಪನಿ ಮ್ಯಾನೇಜರ್ ಮಂಜುನಾಥನನ್ನು ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಲೀಕ ಅಬ್ದುಲ್ಲ ಖಾದಿರ್ ಶೇಖ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಮೃತ ವಿಜಯಲಕ್ಷ್ಮೀ ಪತಿ ವೀರಭದ್ರ ದೂರು ಆಧರಿಸಿದ ಮೊಕದ್ದಮೆ ಹೂಡಲಾಗಿದೆ. IPC ಸೆಕ್ಷನ್ 286, 337, 338, 304, ಸ್ಫೋಟ ಕಾಯ್ದೆ 1908ರಡಿ ಕೇಸ್ ದಾಖಲಾಗಿದೆ. 3 ತಂಡಗಳನ್ನು ರಚಿಸಿ ಹುಬ್ಬಳ್ಳಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ನಿನ್ನೆ ಅಗ್ನಿ ಅನಾಹುತ ಸಂಭವಿಸಿದ್ದು, ವಿಜಯಲಕ್ಷ್ಮೀ(34), ಗೌರವ್ವ(45), ಮಾಳೇಶ್(27) ಮೃತಪಟ್ಟಿದ್ದರು.
5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಹಾಲಪ್ಪ ಆಚಾರ್
ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಘೋಷಣೆ ಮಾಡಿದರು.
ಅಗ್ನಿ ಅವಘಡ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು
ಅಗ್ನಿ ಅವಘಡ ಪ್ರಕರಣದಿಂದ ತಾರಿಹಾಳ ಗ್ರಾಮಸ್ಥರು ರೊಚ್ಚಿಗೆದಿದ್ದಾರೆ. ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಡೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ. ಹೇಳೋದು ಒಂದ್ ಕೆಲ್ಸ, ಒಳಗಡೆ ಮತ್ತೊಂದು ಕೆಲ್ಸ ಮಾಡಿಸ್ತಾರೆ. ಇಂತಹ ಪ್ರಕರಣ ನಡೆದಿರುವ ಹಿಂದೆ ಅನೇಕ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಇದನ್ನೂ ಓದಿ: ಸೆಲ್ಫಿ ಹುಚ್ಚಿಗೆ ನೀರು ಪಾಲಾದ ಯುವಕ; ವಾರಾಂತ್ಯ ಪ್ರವಾಸ ಮೋಜು ತಂದಿಟ್ಟ ದುರಂತ
ಮಾಲೇಶ ಹದ್ದನ್ನವರ್ ಕುಟುಂಬದಲ್ಲಿ ವಿಧಿಯಾಟ
ಮಾಲೇಶ ಹದ್ದನ್ನವರ್ ಕುಟುಂಬದಲ್ಲಿ ಈಗ ಕತ್ತಲೆ ಆವರಿಸಿದ್ದು, ಒಂದೂವರೆ ವರ್ಷದ ಹಿಂದಷ್ಟೇ ಮಾಳೇಶ ಮದುವೆ ಆಗಿದ್ದ. ಈಗ ಆರು ತಿಂಗಳ ಹೆಣ್ಣು ಮಗು ಇದೆ. ಇಂಜಿನಿಯರ್ ಆಗಿ ಇತ್ತೀಚಿಗಷ್ಟೇ ಅವನು ಈ ಕಂಪನಿ ಸೇರಿದ್ದ. ಕಾರ್ಮಿಕರಿಗೆ ಸಂಬಳ ನೀಡಲೆಂದು ಕಾರ್ಖಾನೆಗೆ ಬಂದಿದ್ದು, ಸ್ಫೋಟಕ್ಕೆ ಅವನ ದೇಹ ಗುರುತು ಸಿಗದಷ್ಟು ಕರಕಲಾಗಿತ್ತು. ಇತ್ತೀಚೆಗೆ ಅವನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ.