ರೇಣುಕಾಚಾರ್ಯ ಯಾರೆಂದೇ ಗೊತ್ತಿಲ್ಲ; ಬಸನಗೌಡ ಯತ್ನಾಳ್ ಲೇವಡಿ

| Updated By: ಸುಷ್ಮಾ ಚಕ್ರೆ

Updated on: Nov 16, 2024 | 9:49 PM

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಭಿವೃದ್ಧಿ ಸಹಿಸದವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತ್ಯೇಕ ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ನಾನೇ ಮಹಾನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳದಿದ್ದರೆ ನಾವು ಕೂಡ ಪ್ರತ್ಯೇಕ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದರು.

ರೇಣುಕಾಚಾರ್ಯ ಯಾರೆಂದೇ ಗೊತ್ತಿಲ್ಲ; ಬಸನಗೌಡ ಯತ್ನಾಳ್ ಲೇವಡಿ
ಬಸನಗೌಡ ಯತ್ನಾಳ್
Follow us on

ಹುಬ್ಬಳ್ಳಿ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪಾದಯಾತ್ರೆ ಮಾಡಲು ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ನಾಯಕರು ತಡೆಯಬೇಕು. ಇಲ್ಲದಿದ್ದರೆ ನಾವು ಕೂಡ ಪ್ರತ್ಯೇಕ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್, ರೇಣುಕಾಚಾರ್ಯ ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ‌ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೂರು ತಂಡ ಅಲ್ಲ, ಮೂವತ್ತು ತಂಡವನ್ನೇ ಮಾಡಿಕೊಳ್ಳಲಿ. ವಕ್ಫ್ ವಿಚಾರದಲ್ಲಿ ಬಿಜೆಪಿ ಕವಲು ಹಾದಿ ಹಿಡಿದಿದೆ ಎಂಬ ಕುರಿತು ಹೇಳುವುದಾದರೆ ನಮ್ಮದು ಒರಿಜಿನಲ್ ಹಾದಿ ಎಂದಿದ್ದಾರೆ. ನಮ್ಮದು ಕವಲು ಹಾದಿ ಅಲ್ಲ, ನಮ್ಮದು ಒರಿಜಿನಲ್ ದಾರಿ. ಕೆಲವರದು ಸೈಡ್ ರೋಡ್. ರಾಜ್ಯಾಧ್ಯಕ್ಷರೇ ಎಲ್ಲಿಗೂ ಹೋಗಿಲ್ಲ. ಆದರೆ, ನಮ್ಮ ಟೀಮ್ ಎಲ್ಲ ಜಿಲ್ಲೆಗೆ ಹೋಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹರನ್ನು ಕಡೆಗಣಿಸಿ ನಮ್ಮಲ್ಲಿ ಒಡಕು ತರುವ ಹುನ್ನಾರ ಅಪ್ಪ ಮತ್ತು ಮಗ ನಡೆಸಿದ್ದಾರೆ: ಯತ್ನಾಳ್

ಚಿಂತಾಮಣಿಯಲ್ಲಿ ಪೊಲೀಸರು ಗೂಂಡಾಗಿರಿ ಮಾಡಿದ್ದಾರೆ. ಜಮೀರ್ ಅಹಮ್ಮದ್, ಸಿದ್ದರಾಮಯ್ಯನವರು ಮುಸ್ಲಿಮರ ಪರ ನಿಂತರೆ ಮುಂದೆ ಇವರನ್ನು ರಸ್ತೆ ಮೇಲೆ ಓಡಾಡೋಕೆ ಬಿಡಲ್ಲ. ಹೀಗಾಗಿ, ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು. ಇನ್ನು ಸಿದ್ದರಾಮಯ್ಯನವರ ಆದೇಶ ಜಾರಿಯಾಗಿಲ್ಲ. ವಕ್ಫ್ ಸಂಪೂರ್ಣ ಹೋಗಬೇಕು. ಪಹಣಿ ಕ್ಲೀನ್ ಆಗಬೇಕು. ರೈತನಿಗೆ ಕ್ಲೀನ್ ಪಹಣಿ ಸಿಗಬೇಕು. ನಮ್ಮ ಮೇಲೆ ಕೇಸ್ ಹಾಕುವುದಾದರೆ ಹಾಕಲಿ. ಮುಂದೆ ನಮ್ಮ ಸರ್ಕಾರ ಬರುತ್ತದೆ, ಮೊದಲ ಕ್ಯಾಬಿನೆಟ್ ನಲ್ಲಿ‌ ಎಲ್ಲ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತಾಂಧ ಜಮೀರ್ ತಾನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮಂತ್ರಿ ಅಂದುಕೊಂಡಂತಿದೆ: ರೇಣುಕಾಚಾರ್ಯ

ಪಂಚಮಸಾಲಿ ಮೀಸಲಾತಿ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಡಿಸೆಂಬರ್ 9ಕ್ಕೆ ಅಧಿವೇಶನ ಆರಂಭ ಆಗಬಹುದು. ಮೀಸಲಾತಿ ಕೊಟ್ಟ ಮೇಲೆ ಅಂತಿಮವಾಗಲಿದೆ. ಹೋರಾಟ ಉಗ್ರ ರೂಪದಲ್ಲಿ ಇರಲಿದೆ. ನಮ್ಮ ಸಮಾಜದ ಜೊತೆ ಚೆಲ್ಲಾಟ ಆಡಬೇಡಿ. ಅಕಸ್ಮಾತ್ ಹೋರಾಟದ ಸಮಯದಲ್ಲಿ ಏನೇ ಆದರೂ ನೀವು, ಸರ್ಕಾರವೇ ಕಾರಣ ಎಂದು ನಾನು ಸಿದ್ದರಾಮಯ್ಯನವರಿಗೆ ಎಚ್ಚರಿಕೆ ಕೊಡ್ತೀನಿ ಎಂದು ಯತ್ನಾಳ್ ಗುಡುಗಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 pm, Sat, 16 November 24