ಸರ್ಕಾರ ದಿವಾಳಿಯಾಗ್ತಿರುವುದರಿಂದ BPL ಕಾರ್ಡ್ ಕಡಿತ: ಸರ್ಕಾರದ ವಿರುದ್ಧ ಜೋಶಿ ಕಿಡಿ
ಸರ್ಕಾರ ದಿವಾಳಿಯಾಗ್ತಿರುವುದರಿಂದ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ. ಪ್ಲ್ಯಾನಿಂಗ್ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ ಎಂದಿದ್ದಾರೆ.
ಹುಬ್ಬಳ್ಳಿ, ನವೆಂಬರ್ 17: ಕರ್ನಾಟಕದಾದ್ಯಂತ 10 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನ ಎಪಿಎಲ್ (APL) ಕಾರ್ಡ್‌ಗಳಾಗಿ ಬದಲಾಯಿಸಿದೆ. ಈ 10 ಸಾವಿರ ಬಿಪಿಎಲ್ ಕಾರ್ಡ್‌ಗಳಿಗೆ ಸಿಗುತ್ತಿದ್ದ ಸವಲತ್ತನ್ನ ರದ್ದು ಮಾಡಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಪ್ಲ್ಯಾನಿಂಗ್ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕೇಂದ್ರ ಸಚಿವ ಪಲ್ಹಾದ್ ಜೋಶಿ ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ದಿವಾಳಿಯಾಗುತ್ತಿರುವುದರಿಂದ ಬಿಪಿಎಲ್ ಕಾರ್ಡ್ ಕಡಿತ ಮಾಡಲಾಗುತ್ತಿದೆ. ದಿಢೀರ್ ಆಗಿ ಬಿಪಿಎಲ್ ಕಾರ್ಡ್ ಏಕೆ ಕಡಿತ ಮಾಡುತ್ತಿದೆ ಗೊತ್ತಿಲ್ಲ. ಪ್ಲ್ಯಾನಿಂಗ್ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ 10 ಸಾವಿರ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರಿ ಸೌಕರ್ಯಗಳಿಗೂ ಬ್ರೇಕ್?
ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದೇವೆ ಅಂತಾರೆ. ಆದರೆ ಒಂದೂ ಗ್ಯಾರಂಟಿ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿ ಕೊಡಲು ಆಗದೇ ಬಿಡಲೂ ಆಗದ ಸ್ಥಿತಿ ಸರ್ಕಾರದ್ದು. ಬಹುತೇಕ ಎಲ್ಲ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ ಎಂದಿದ್ದಾರೆ.
ಬಡವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕಿದೆ
ಸಚಿವ ಮುನಿಯಪ್ಪ ಅವರ ಜೊತೆ ನಾನು ಮಾತಾಡುತ್ತೇನೆ. 2013ರ ಕಾಯ್ದೆ ಪ್ರಕಾರ ನಿಯಮಗಳನ್ನು ಜಾರಿಗೆ ತಂದಿದ್ದೇವೆ. 5 ಕೆ.ಜಿ ಧಾನ್ಯವನ್ನು ಸಂಪೂರ್ಣ ಉಚಿತವಾಗಿ ಕೊಡುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆಯಡಿ ಗೋಧಿ, ಭತ್ತ ಇತ್ಯಾದಿಗಳನ್ನು ಖರೀದಿಸುತ್ತಿದ್ದೇವೆ. ಜೊತೆಗೆ ದರ ಕುಸಿತವಾಗುವ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆ. ಇಷ್ಟೆಲ್ಲ ಕೇಂದ್ರ ಸರ್ಕಾರ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಾರ್ಡ್ ಯಾಕೆ ಕಡಿತ ಮಾಡುತ್ತಿದೆಯೋ ಗೊತ್ತಿಲ್ಲ. ಬಡವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಸರ್ಕಾರ ಇನ್ನಾದ್ರೂ ಕ್ಷಮೆ ಕೇಳಬೇಕು
40% ಕಮಿಷನ್ ಸುಳ್ಳು ಎಂಬ ಲೋಕಾಯುಕ್ತ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಾನು ಮಾಧ್ಯಮಗಳಲ್ಲಿ ಈ ವಿಚಾರವನ್ನು ಗಮನಿಸಿದ್ದೇನೆ. ಲೋಕಾಯುಕ್ತ ನ್ಯಾಯಮೂರ್ತಿಗಳು ವರದಿ ಕೊಟ್ಟಿದ್ದಾರೆ. ಹೀಗಾಗಿ ಸರ್ಕಾರ ಇನ್ನಾದ್ರೂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರಿಗೆ ಜೋಶಿ ಸಲಹೆ
ವಕ್ಫ್ ಅನ್ನೋದು ಹಿಂದೂ ಸಮಾಜಕ್ಕೆ ದೊಡ್ಡ ಕಂಟಕ. ಏನೇ ಭಿನ್ನಾಭಿಪ್ರಾಯ ಇದ್ರೂ ಒಟ್ಟಾಗಿ ಹೋರಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು. ಚರ್ಚೆ ಮಾಡಿ ಹೋರಾಟ ರೂಪಿಸುವುದು ಅವಶ್ಯಕ. ನಾನು ಒಟ್ಟಾಗಿ ಹೋರಾಟ ಮಾಡಲು ಮನವಿ ಮಾಡುತ್ತೇನೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:38 pm, Sun, 17 November 24